Asianet Suvarna News Asianet Suvarna News

ಸೆ.15ರೊಳಗೆ ಮೀಸಲಾತಿ ಕಲ್ಪಿಸದಿದ್ದಲ್ಲಿ ಅ.1ರಿಂದ ಮತ್ತೆ ಪಂಚಮಸಾಲಿ ಹೋರಾಟ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ಕಳೆದ ಕೆಲವು ತಿಂಗಳಿನಿಂದ ಕೂಡಲಸಂಗಮ ಪಂಚಮಸಾಲಿ ಪೀಠದ ಶೀ ಬಸವ ಮೃತ್ಯುಂಜಯ ಸ್ವಾಮಿಜಿ ನೇತೃತ್ವದಲ್ಲಿ  ಹೋರಾಟ ನಡೆಯುತ್ತಿದೆ. ಇದೀಗ ಈ ಹೋರಾಟ ಮತ್ತೊಂದು ರೂಪ ತಾಳುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಬಸವರಾಜ ಬೊಮ್ಮಯಿ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೂ ಸಿಲುಕಿಸಬಹುದು.

 

Panchamasaali Peeta gives deadline for reservation and threats hold protest
Author
Bengaluru, First Published Aug 13, 2021, 7:41 AM IST

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ (ಆ.13): ಪಂಚಮಸಾಲಿ ಸಮಾಜಕ್ಕೆ ಸೆ.15ರೊಳಗೆ 2ಎ ಮೀಸಲಾತಿ ಕಲ್ಪಿಸುವಂತೆ ಪಂಚಮಸಾಲಿ ಮೀಸಲಾತಿ ಚಳುವಳಿಗಾರರು ಗಡುವು ನೀಡಿದ್ದು ತಪ್ಪಿದಲ್ಲಿ ಅ.1ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಿರಂತರ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ಇದೇ ವೇಳೆ ಈ ಕುರಿತು ಸರ್ಕಾರದ ಜತೆಗೆ ಮಾತುಕತೆ ನಡೆಸಲು ಸಚಿವ ಸಿ.ಸಿ. ಪಾಟೀಲ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಗುರುವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಪಂಚಮಸಾಲಿ ಮೀಸಲಾತಿ ಚಳುವಳಿಗಾರರ ದುಂಡು ಮೇಜಿನ ಸಭೆ ನಡೆಯಿತು. ಸಭೆ ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಶ್ರೀಗಳು ಸಭೆ ನಿರ್ಣಯಗಳನ್ನು ಬಳಿಕ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಈ ಹಿಂದೆ ಹೋರಾಟ ನಡೆಸಿದ ವೇಳೆ 6 ತಿಂಗಳೊಳಗೆ ಮೀಸಲಾತಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅಧಿವೇಶನದಲ್ಲಿ ಭರವಸೆ ನೀಡಿದ್ದರು. ಅದರಂತೆ ಸೆ.15ಕ್ಕೆ ಆ ಅವಧಿ ಮುಕ್ತಾಯಗೊಳ್ಳುತ್ತದೆ. ಅಂದಿನ ಪಾದಯಾತ್ರೆಗೆ ಆಗ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಬಹಳ ಸಹಕಾರ ನೀಡಿದ್ದಾರೆ. ಅವರೇ ಈಗ ಮುಖ್ಯಮಂತ್ರಿಯಾಗಿದ್ದು ಸಮಾಜಕ್ಕೆ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪಂಚಮಸಾಲಿಗಳಿಗೆ ಮೀಸಲಾತಿ: ಬ್ಲಾಕ್‌ಮೇಲ್ ಮಾಡುವುದು ಸರಿಯಲ್ಲವೆಂದ ಸೋಮಣ್ಣ

ಅಭಿಯಾನ: ಈ ಬಗ್ಗೆ ಜಾಗೃತಿ ಮೂಡಿಸಲು ಆ.26ರಿಂದ ಸೆ. 30ರ ವರೆಗೆ ರಾಜ್ಯಾದ್ಯಂತ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌’ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಆ.26ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಲಾಗುವುದು ಎಂದರು. ಕುರುಬ, ವಾಲ್ಮೀಕಿ, ಮಡಿವಾಳ, ಗಂಗಾಮತ, ಆದಿಬಣಜಿಗ, ಕುಡುಒಕ್ಕಲಿಗ ಜೊತೆಗೆ ಉಳಿದ ಸಮಾಜಗಳ ಬೇಡಿಕೆಯನ್ನೂ ಬೇಡಿಕೆಗೆ ಅನುಗುಣವಾಗಿ ಈಡೇರಿಸಬೇಕೆಂದು ಸಮಾಜ ಬೆಂಬಲಿಸಿ ಒತ್ತಾಯಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು.

ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು
ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗಾಗಿ ಅ.1ರಿಂದ ನಡೆಯುವ ಹೋರಾಟವೇ ಕೊನೆ ಹಾಗೂ ಯಶಸ್ವಿ ಹೋರಾಟವಾಗಬೇಕು ಎಂಬ ಅಭಿಪ್ರಾಯ ಚಳವಳಿಗಾರರು ವ್ಯಕ್ತಪಡಿಸಿದರು. ಈ ನಡುವೆ ಸ್ಥಳೀಯ ಹೋರಾಟಗಾರರು ಸಭೆಗೆ ಗೈರಾಗಿರುವುದು ಎದ್ದು ಕಾಣುತ್ತಿತ್ತು.

ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ರಾಜ್ಯಾದ್ಯಂತ ಆಗಮಿಸಿದ ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಸರ್ವ ಸಮ್ಮತದ ಒಪ್ಪಿಗೆ ಸೂಚಿಸಿದರು.

ಮುಖ್ಯಮಂತ್ರಿ, ಮಂತ್ರಿ ಮಂಡಳ ಸ್ಥಾನಕ್ಕಿಂತ ಮಕ್ಕಳ ಮೀಸಲಾತಿ ಮುಖ್ಯ. ಅದೇ ಕಾರಣಕ್ಕೆ ಪಂಚಮಸಾಲಿ ಪೀಠ ಸ್ಥಾಪನೆ ಆದಾಗಿನಿಂದಲೂ ಯಾರನ್ನು ಸಿಎಂ, ಸಚಿವರನ್ನು ಮಾಡಲು ಒತ್ತಡ ಹೇರಿಲ್ಲ. ಅದು ಪೀಠದ ಕೆಲಸವೂ ಅಲ್ಲ. ಆದರೆ, ಸಮಾಜದ ಹಿತದೃಷ್ಟಿಯಿಂದ ಒತ್ತಾಯ ಮಾಡಿದೆ. ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಸ್ಪಷ್ಟಪಡಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಯಾವುದೇ ರಾಜಕೀಯ ಪಕ್ಷದಲ್ಲಿ ಇರಲಿ, ಸಮಾಜ ಬಂದಾಗ ನಾವೆಲ್ಲರೂ ಒಂದಾಗಬೇಕು. ಇಲ್ಲವಾದರೆ, ಸಮಾಜವನ್ನು ನಾವೇ ಹಿಂದುಳಿಯುವಂತೆ ಮಾಡಿದಂತಾಗುತ್ತದೆ ಎಂದರು.

'ಪಂಚಮಸಾಲಿಗಳಿಗೆ ಕಡೇ ಕ್ಷಣದಲ್ಲಿ ಸಿಎಂ ಹುದ್ದೆ ತಪ್ಪಿಸಿದ್ದಾರೆ'

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ರಾಜ್ಯ ಸರಕಾರದ ಮೇಲೆ ಒತ್ತಡ ತರಲು ಶ್ರೀಗಳ ನೇತೃತ್ವದಲ್ಲಿ ಎರಡನೇ ಹಂತದ ಹೋರಾಟ ರೂಪಿಸಲಾಗಿದೆ. ಗೌಡ ಲಿಂಗಾಯತ, ದೀಕ್ಷಾ ಲಿಂಗಾಯತ ಹಾಗೂ ಪಂಚಮಸಾಲಿ ಸಮುದಾಯ ಸೇರಿಕೊಂಡು ಈ ಜಾಗೃತಿ ಹೋರಾಟ ಮಾಡುತ್ತಿದ್ದೇವೆ. ಮೀಸಲಾತಿಗಾಗಿ ಈ ಹೋರಾಟ ಕೊನೆ ಹೋರಾಟವಾಗಬೇಕು ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಸಿಎಂ ಬೊಮ್ಮಾಯಿ ನಂಬಿಕೆಗೆ ಅರ್ಹರಲ್ಲ. ನಮ್ಮ ಸಮಾಜಕ್ಕೆ ಮೀಸಲಾತಿ ನೀಡುತ್ತಾರೆ ಎನ್ನುವುದು ಗ್ಯಾರಂಟಿ ಇಲ್ಲ. ಹಾಗಂತ ನಾವು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪಂಚಮಸಾಲಿಗಳು ಸಿಡಿದೆದ್ದರೇ ಏನೆಲ್ಲ ಮಾಡಬಹುದು ಎನ್ನುವುದನ್ನು ನಾವು ಹೋರಾಟದ ಮೂಲಕ ತಿಳಿಸಿಕೊಡಬೇಕಿದೆ ಎಂದರು.

ಸ್ಥಳೀಯರ ಗೈರು:
ಸ್ಥಳೀಯ ಹೋರಾಟಗಾರರಾದ ನೀಲಕಂಠ ಅಸೂಟಿ, ಪ್ರಭು ಹುಣಸಿಕಟ್ಟೆ, ಪಿ.ಸಿ. ಸಿದ್ದನಗೌಡರ, ರಾಜಶೇಖರ ಮೆಣಸಿನಕಾಯಿ ಗೈರಾಗಿದ್ದರು. ಇದು ಸಮಾಜದಲ್ಲಿನ ಭಿನ್ನಾಭಿಪ್ರಾಯವೇ ಕಾರಣವೇ ಎಂಬ ಪ್ರಶ್ನೆ ಕೂಡ ಕೇಳಿ ಬಂತು.

ಸಭೆಯಲ್ಲಿ ಸಮಾಜದ ಕಾನೂನು ಸಲಹೆಗಾರ ದಿನೇಶ ಪಾಟೀಲ, ನಂದಿಹಳ್ಳಿ ಹಾಲಪ್ಪ, ಪಂಚನಗೌಡರ, ಮಲ್ಲೇಶ, ನಾಗರಾಜ ಗೌರಿ, ದೀಪಾ ಗೌರಿ, ಮಾಜಿ ಶಾಸಕ ಎಚ್‌.ಎಸ್‌.ಶಿವಶಂಕರ, ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಆಗಮಿಸಿದ್ದರು.

Follow Us:
Download App:
  • android
  • ios