ಬೆಂಗಳೂರು(ಜೂ.04): ಕೋವಿಡ್‌ ಸಂಕಷ್ಟದ ನಡುವೆಯೂ ಜಾನುವಾರುಗಳಿಗೆ ನೀಡಲಾಗುವ ಎಲ್ಲ ಪ್ರಮುಖ ಲಸಿಕಾ ಕಾರ್ಯಕ್ರಮಗಳು ಪ್ರಗತಿಯಲ್ಲಿದ್ದು, ಜಾನುವಾರುಗಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ.

ಕಳೆದ ಮೇ ಅಂತ್ಯದವರೆಗೆ ನೆರಡಿ ರೋಗಕ್ಕೆ 43512 ಜಾನುವಾರುಗಳಿಗೆ ಲಸಿಕೆ, ಚಪ್ಪೆ ರೋಗಕ್ಕೆ 198545 ಜಾನುವಾರುಗಳಿಗೆ ಲಸಿಕೆ, ನೀಲಿ ನಾಲಿಗೆ ರೋಗ 7308 ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಕರಳು ಬೇನೆ ಲಸಿಕೆಯನ್ನು ಎರಡು ಸುತ್ತಿನಲ್ಲಿ 945259 ಜಾನುವಾರುಗಳಿಗೆ, ಗಳಲೆ ರೋಗ ಎರಡು ಸುತ್ತಿನಲ್ಲಿ 745232 ಜಾನುವಾರುಗಳಿಗೆ, ಪಿ.ಪಿ.ಆರ್‌ ಲಸಿಕೆಯನ್ನು ಎರಡು ಸುತ್ತಿನಲ್ಲಿ 41871 ಜಾನುವಾರುಗಳಿಗೆ ನೀಡಲಾಗಿದೆ. ಹುಚ್ಚು ನಾಯಿ ರೋಗಕ್ಕೆ ರಾಜ್ಯದಲ್ಲಿ ಈವರೆಗೆ 5575 ನಾಯಿಗಳಿಗೆ ಲಸಿಕೆ ನೀಡಲಾಗಿದೆ. ಕೊಕ್ಕರೆ ರೋಗಕ್ಕೆ ಎರಡು ಸುತ್ತಿನಲ್ಲಿ 777953 ಪಕ್ಷಿ/ಕೋಳಿಗಳಿಗೆ ಲಸಿಕೆ ನೀಡಲಾಗಿದೆ. ಕುರಿ ಸಿಡುಬು 212569 ಜಾನುವಾರುಗಳಿಗೆ ನೀಡಲಾಗಿದೆ. ಲಂಪಿಸ್ಕಿನ್‌ ರೋಗಕ್ಕೆ 2150 ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಗೋ ರಕ್ಷಕರ ಮೇಲಿನ ಕೇಸ್‌ ವಾಪಸ್‌..? : ಪ್ರಭು ಚವ್ಹಾಣ್‌

ರಾಜ್ಯದಲ್ಲಿ ಪಶುಗಳಿಗೆ ನೀಡಲಾಗುವ ಎಲ್ಲ ಔಷಧಗಳ ದಾಸ್ತಾನು ಸಮರ್ಪಕವಾಗಿದ್ದು, ಯಾವುದೇ ಲಸಿಕಾ ಅಭಿಯಾನಗಳಿಗೆ ಹಿನ್ನಡೆ ಆಗುವುದಿಲ್ಲ. ಮುಂದಿನ ಆರು ತಿಂಗಳಲ್ಲಿ ನೀಡಲಾಗುವ ಎಲ್ಲ ಲಸಿಕೆಗಳನ್ನು ಆಯಾ ಜಿಲ್ಲೆಗಳಿಗೆ ಒದಗಿಸಲು ಕ್ರಮ ವಹಿಸಲಾಗಿದೆ. ರೈತರು ಜಾನುವಾರು ಸಾಕಣೆದಾರರು ಕಾಲಕಾಲಕ್ಕೆ ಲಸಿಕಾ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

2ನೇ ಪ್ಯಾಕೇಜ್‌ಗೆ ಅಭಿನಂದನೆ

ಕೋವಿಡ್‌ ದುಡಿಯುವ ಕೈಗಳನ್ನು ಕಟ್ಟಿಹಾಕಿದೆ. ಈ ಆರ್ಥಿಕ ಸಂಕಷ್ಟದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು 15 ದಿನಗಳ ಅಂತರದಲ್ಲಿ ಮತ್ತೊಂದು ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವುದರ ಮೂಲಕ ರಾಜ್ಯದ ಎಲ್ಲ ವರ್ಗಗಳ ಬೆನ್ನೆಲುಬಾಗಿ ನಿಂತಿದ್ದಾರೆ. ರಾಜ್ಯದ ಸಂಕಷ್ಟಕ್ಕೊಳಗಾಗಿರುವ ಎಲ್ಲ ವರ್ಗಗಳ ಪರವಾಗಿ ನಿಂತಿರುವುದಕ್ಕಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ.