ಮಂಗಳೂರು (ಜ.20):  ರಾಜ್ಯದಲ್ಲಿ ಈ ಹಿಂದೆ ಗೋ ಸಾಗಾಟ ತಡೆದ ಗೋರಕ್ಷಕ ಕಾರ್ಯಕರ್ತರ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಈಗಾಗಲೇ ಜಾರಿಯಾಗಿದೆ. ಈ ಹಿಂದೆ ಕಾಯ್ದೆ ದುರ್ಬಲವಾಗಿತ್ತು, ಗೋವುಗಳನ್ನು ಸಾಗಿಸುವಾಗ ಕಾರ್ಯಕರ್ತರು ತಡೆದು ಪೊಲೀಸರಿಗೆ ಮಾಹಿತಿ ನೀಡುವ ಅನೇಕ ಸಂದರ್ಭಗಳಲ್ಲಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅವೆಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯಲಾಗುವುದು ಎಂದರು.

ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರವಾಗುತ್ತಿದ್ದಂತೆಯೇ ಸದನದಲ್ಲಿ ಮೊಳಗಿದ ಜೈ ಶ್ರೀರಾಮ್ ಘೋಷಣೆ!

ಗೋ ಸಾಗಾಟಗಾರರ ಮೇಲೆ ಕಾರ್ಯಕರ್ತರು ಹಲ್ಲೆ ನಡೆಸಿದ ಪ್ರಕರಣಗಳನ್ನು ಕೈಬಿಡುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಗೃಹ ಸಚಿವರ ಬಳಿಕ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಗೋಶಾಲೆಗಳಿಗೆ ಅನುದಾನ ಹೆಚ್ಚಳ: ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಾದ ಬಳಿಕ ಗೋಶಾಲೆಗಳಿಗೆ ಬರುವ ಗೋವುಗಳ ಸಂಖ್ಯೆ ಏರಿಕೆಯಾಗಲಿದೆ. ಆದ್ದರಿಂದ ರಾಜ್ಯದ ಗೋಶಾಲೆಗಳಿಗೆ ಹೆಚ್ಚುವರಿ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು. ಮುಂದಿನ ಬಜೆಟ್‌ನಲ್ಲಿ ಇದನ್ನು ಒಳಗೊಳಿಸಲು ಯೋಜಿಸಲಾಗಿದೆ ಎಂದು ಪ್ರಭು ಚವ್ಹಾಣ್‌ ತಿಳಿಸಿದರು.

ತಾಲೂಕಿಗೊಂಡು ಗೋಶಾಲೆ: ಸರ್ಕಾರದ ವತಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಾಲೂಕಿಗೊಂದು ಗೋಶಾಲೆ ಆರಂಭಿಸಬೇಕಾಗಿದೆ. ಇದರಿಂದ ಗೊಡ್ಡು ಹಸುಗಳಿಗೆ ಒಂದು ಆಸರೆ ದೊರೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸರ್ಕಾರಿ ಗೋಶಾಲೆ ಸ್ಥಾಪಿಸಲಾಗುವುದು ಎಂದರು.

ಕುದ್ರೋಳಿಯಲ್ಲಿ ನಾಕಾಬಂದಿ: ಇದಕ್ಕೂ ಮೊದಲು ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಮಂಗಳೂರು ನಗರದಲ್ಲಿ ಅಧಿಕೃತ ಒಂದು ಕಸಾಯಿಖಾನೆ ಇದ್ದರೆ, ಅನಧಿಕೃತ ಹತ್ತಿಪ್ಪತ್ತು ಕಸಾಯಿಖಾನೆಗಳಿವೆ ಎಂದು ಗಮನ ಸೆಳೆದರು. ಕುದ್ರೋಳಿ ಬಳಿ ಪೊಲೀಸರು ನಾಕಾಬಂದಿ ಹಾಕಬೇಕು. ರಾತ್ರಿ ವೇಳೆ ಗೋ ಸಾಗಾಟ ಮಾಡದಂತೆ ಕಟ್ಟುನಿಟ್ಟು ವ್ಯವಸ್ಥೆ ಮಾಡಬೇಕು. ಹೀಗೆ ಮಾಡಿದರೆ ಎರಡೇ ತಿಂಗಳಲ್ಲಿ ಶೇ.60ರಷ್ಟುಅಕ್ರಮ ಹತ್ತಿಕ್ಕಬಹುದು ಎಂದು ಸಚಿವ ಪ್ರಭು ಚವ್ಹಾಣ್‌ ಪೊಲೀಸರಿಗೆ ಸೂಚಿಸಿದರು.

ಹಾಲು ಕುಡಿದು ವಿರೋಧವೇಕೆ: ಕಾಂಗ್ರೆಸ್‌ನವರು ಗೋಹತ್ಯಾ ನಿಷೇಧ ಕಾಯ್ದೆಗೆ ವಿರೋಧ ಸೂಚಿಸಿದ್ದಾರೆ. ಯಾಕೆ ಅವರು ದನದ ಹಾಲು, ಮೊಸರು ತುಪ್ಪ ಸೇವಿಸಿಲ್ಲವೇ?ಹಾಗಿರುವಾಗ ಮೂಕಪ್ರಾಣಿ ದನದ ಹತ್ಯೆ ತಡೆಯಲು ಮಾಡಿದ ಕಾಯ್ದೆಗೆ ವಿರೋಧ ಸೂಚಿಸುವುದು ಯಾಕೆ ಎಂದು ಪ್ರಶ್ನಿಸಿದರು.

ಶಾಸಕ ಭರತ್‌ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಎಸ್ಪಿ ಲಕ್ಷ್ಮೇ ಪ್ರಸಾದ್‌, ಡಿಸಿಪಿ (ಕಾನೂನು ಸುವ್ಯವಸ್ಥೆ) ಹರಿರಾಂ ಶಂಕರ್‌, ಅಪರ ಜಿಲ್ಲಾಧಿಕಾರಿ ರೂಪ ಮತ್ತಿತರರು ಇದ್ದರು.

ಗೋ ರಕ್ಷಕರ ಒಳಗೆ ಹಾಕಬೇಡಿ..

ಗೋಹತ್ಯಾ ನಿಷೇಧ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಗೋ ಸಾಗಾಟ ತಡೆಯುವ ಕಾರ್ಯಕರ್ತರನ್ನೇ ಒಳಗೆ ಹಾಕುತ್ತಿರುವ ಕುರಿತು ದೂರುಗಳು ಬರುತ್ತಿವೆ. ಮುಂದೆ ಹೀಗೆ ಆಗಬಾರದು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕಾರ್ಯಾಚರಿಸುವ ಪ್ರಿವೆನ್ಶನ್‌ ಆಫ್‌ ಕ್ರುಯೆಲ್ಟಿಟು ಎನಿಮಲ್ಸ್‌ ತಂಡದ ಸದಸ್ಯರಿಗೆ ಐಡಿ ಕಾರ್ಡ್‌ ನೀಡಬೇಕು, ಇಲ್ಲವಾದರೆ ಅವರ ಮೇಲೆಯೇ ಕ್ರಮ ಜರುಗುವ ಸಾಧ್ಯತೆ ಇದೆ ಎಂದೂ ಹೇಳಿದರು.

ರಾಜ್ಯದಲ್ಲೇ ಮೊದಲ ಬಾರಿಗೆ ಸುಸಜ್ಜಿತ ಸಂಚಾರಿ ಪಶುಚಿಕಿತ್ಸಾ ಆಂಬುಲೆನ್ಸ್‌ಗೆ ಸಚಿವ ಪ್ರಭು ಚವ್ಹಾಣ್‌ ಮಂಗಳವಾರ ಚಾಲನೆ ನೀಡಿದರು. ಸುಸಜ್ಜಿತ ಆಂಬುಲೆನ್ಸ್‌ನಲ್ಲಿ ಆಧುನಿಕ ಪಶುವೈದ್ಯಕೀಯ ಸೇವೆಗಳಾದ ಶಸ್ತ್ರಕ್ರಿಯಾ ಘಟಕ, ಪ್ರಯೋಗಶಾಲೆ, ಸ್ಕ್ಯಾ‌ನಿಂಗ್‌ ಉಪಕರಣ ಅಳವಡಿಕೆಗೆ ಅವಕಾಶವಿದೆ. 250 ಲೀಟರ್‌ ನೀರಿನ ಟ್ಯಾಂಕ್‌,ಶಸ್ತ್ರಚಿಕಿತ್ಸಾ ಟೇಬಲ್‌, ಎಸಿ ವ್ಯವಸ್ಥೆ, ವೈದ್ಯರು, ಸಿಬ್ಬಂದಿಗಳಿಗೆ ಆಸನ, ವಾಶ್‌ ಬೇಸಿನ್‌, ಎಲ್‌ಇಡಿ ಲೈಟ್‌, ಆಮ್ಲಜನಕ ಸಪೋರ್ಟ್‌ ವ್ಯವಸ್ಥೆ, ಫೈರ್‌ ಎಕ್ಸ್‌ಟಿಂಗ್ವಿಷರ್‌, ಸರ್ಜಿಕಲ್‌ ಕಿಟ್‌, ಪೋಸ್ಟ್‌ಮಾರ್ಟೆಂ ಕಿಟ್‌ ಮತ್ತಿತರ ಉಪಕರಣ ವ್ಯವಸ್ಥೆ ಇದೆ. ಇದಕ್ಕಾಗಿ ಪಶುಪಾಲಕರ ಸಹಾಯವಾಣಿ 1962 ವ್ಯವಸ್ಥೆಯನ್ನೂ ಮಾಡಲಾಗಿದೆ. ಸದ್ಯದ.ಕ ಸೇರಿದಂತೆ 15 ಜಿಲ್ಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ, ಮುಂದೆ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಗೋ ಸಾಗಾಟಕ್ಕೆ ಸರ್ಕಾರಿ ವಾಹನ: ಸಲಹೆ

ಅಕ್ರಮ ಗೋಸಾಗಾಟವನ್ನು ಪರಿಣಾಮಕಾರಿಯಾಗಿ ತಡೆಯಲು ಯಾವುದೇ ಗೋ ಸಾಗಾಟಕ್ಕೆ ಸರ್ಕಾರದ ವತಿಯಿಂದಲೇ ತಾಲೂಕಿಗೊಂದು ವಾಹನ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೇಪ್ರಸಾದ್‌ ಸಭೆಯಲ್ಲಿ ಸಲಹೆ ನೀಡಿದರು. ಹೀಗೆ ಮಾಡಿದರೆ ಸರ್ಕಾರಿ ವಾಹನ ಬಿಟ್ಟು ಬೇರೆ ಯಾವುದೇ ವಾಹನದಲ್ಲಿ ಗೋ ಸಾಗಾಟ ನಡೆದರೆ ಅದನ್ನು ಅಕ್ರಮ ಎಂದು ಪರಿಗಣಿಸಲು ಅನುಕೂಲವಾಗುತ್ತದೆ ಎಂದರು. ಈ ಕುರಿತು ಚಿಂತನೆ ನಡೆಸುವುದಾಗಿ ಸಚಿವರು ಹೇಳಿದರು.