ರಾಜ್ಯಾದ್ಯಂತ ನಡೆಯುತ್ತಿರುವ ಪಕ್ಷಿ ಗಣತಿಯ ಮೊದಲ ದಿನವೇ 316 ಹಕ್ಕಿ ಪ್ರಭೇದಗಳನ್ನು ಗುರುತಿಸಲಾಗಿದ್ದು, ಒಂದು ನಿರ್ದಿಷ್ಟ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಭೇದಗಳು ಪತ್ತೆಯಾಗಿವೆ. ಕದ್ರಾ ಶಾಲೆ ಹಾಗೂ ಕೈಗಾ ಬರ್ಡರ್ಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಗಣತಿಯಲ್ಲಿ ಪಶ್ಚಿಮ ಘಟ್ಟದ ಅಪರೂಪದ ಹಾಗೂ ವಲಸೆ ಹಕ್ಕಿಗಳನ್ನು ವಿದ್ಯಾರ್ಥಿಗಳು ದಾಖಲಿಸಿದ್ದಾರೆ.
ಉತ್ತರ ಕನ್ನಡ (ನ.01): ಅ. 30ರಿಂದ ನ. 2ರ ವರೆಗೆ ರಾಜ್ಯಾದ್ಯಂತ ಪಕ್ಷಿ ಗಣತಿ ನಡೆಯುತ್ತಿದೆ. ಮೊದಲ ದಿನ ರಾಜ್ಯದ 30 ಜಿಲ್ಲೆಗಳಲ್ಲಿ 316 ಹಕ್ಕಿ ಪ್ರಭೇದಗಳನ್ನು ಗುರುತಿಸಲಾಗಿದೆ. ಒಟ್ಟು 913 ಸ್ಥಳಗಳಲ್ಲಿ ಗಣತಿ ನಡೆಸಲಾಗಿದ್ದು, 1,387 ಪಟ್ಟಿಗಳನ್ನು ಸಿದ್ಧಪಡಿಸಲಾಗಿದೆ. ಮೊದಲ ದಿನದ ದಾಖಲಾತಿಯಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು 179 ಹಕ್ಕಿ ಪ್ರಭೇದಗಳು ಕಂಡುಬಂದಿವೆ.
ಕದ್ರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೈಗಾ ಬರ್ಡರ್ಸ್ ಸಂಸ್ಥೆಯ ಆಶ್ರಯದಲ್ಲಿ ಪಕ್ಷಿ ಗಣತಿ ಆಯೋಜಿಸಲಾಗಿತ್ತು. ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕದ್ರಾ ಗ್ರಾಮದ ವಿವಿಧೆಡೆ ಸಂಚರಿಸಿ ಹಕ್ಕಿಗಳನ್ನು ವೀಕ್ಷಿಸಿ ದಾಖಲಿಸಿದರು.
ಪಶ್ಚಿಮ ಘಟ್ಟಕ್ಕೆ ಮಾತ್ರ ಸೀಮಿತವಾದ ಪಕ್ಷಿಗಳು
ಈ ಸಂದರ್ಭದಲ್ಲಿ ಹಿಮಾಲಯ ಸೇರಿದಂತೆ ದೂರದ ಪ್ರದೇಶಗಳಿಂದ ವಲಸೆ ಬರುವ ಬೂದು ಕಾಜಾಣ, ಹಸಿರು ಎಲೆಉಲಿಯಕ್ಕಿ ಹಾಗೂ ಬೂದು ಕುಂಡೆಕುಣಸಾ ಹಕ್ಕಿಗಳು ಕಂಡುಬಂದವು. ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾಗಿರುವ ಬಿಳಿತಲೆ ಕಬ್ಬಕ್ಕಿ, ಭೀಮರಾಜ, ಕಂಚು ಕಾಜಾಣ ಹಾಗೂ ಬೂದುತಲೆಯ ಪಿಕಳಾರ ಹಕ್ಕಿಗಳನ್ನೂ ಕಂಡು ವಿದ್ಯಾರ್ಥಿಗಳು ಸಂಭ್ರಮಿಸಿದರು.
ತಾಲೂಕಿನ ಕದ್ರಾ ಗ್ರಾಮದಲ್ಲಿ ಖಗಸಂಕುಲ ವೈವಿಧ್ಯತೆಯ ಗಣತಿಗೆ ಚಾಲನೆ ನೀಡಿ ಮಾತನಾಡಿದ ಕೈಗಾ ಬರ್ಡರ್ಸ್ ಸಂಸ್ಥೆಯ ದಿನೇಶ ಗಾಂವಕರ ಅವರು, ಹಕ್ಕಿಗಳ ದಾಖಲಾತಿ ಸುತ್ತಮುತ್ತಲಿನ ಪರಿಸರದಲ್ಲಾಗುವ ಸೂಕ್ಷ್ಮ ಬದಲಾವಣೆಗಳನ್ನು ಅರಿಯಲು ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪಕ್ಷಿಪ್ರೇಮಿಗಳು ಇದೇ ಮೊದಲ ಬಾರಿಗೆ ಹಕ್ಕಿಗಳ ಗಣತಿ ನಡೆಸುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ಈ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದರು.
ವಿದ್ಯಾರ್ಥಿಗಳಿಗೆ ಹಕ್ಕಿಗಳ ಗುರುತಿಸುವಿಕೆ ಮತ್ತು ದಾಖಲಾತಿಯ ಪ್ರಾಥಮಿಕ ಮಾಹಿತಿಯನ್ನು ತಿಳಿಸಿಕೊಟ್ಟು ಅವರು ಮಾತನಾಡಿದರು. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಪರಿಸರದೊಂದಿಗೆ ತಾಧ್ಯಾತ್ಮದಿಂದ ಬದುಕುವುದನ್ನು ಕಲಿಯಲು ನೆರವಾಗುತ್ತವೆ ಎಂದರು.
ಪಕ್ಷಿ ಗಣತಿಯಲ್ಲಿ ಪಕ್ಷಿಪ್ರೇಮಿಗಳಾದ ಹರೀಶ್ ಕೂಳೂರ, ಮಹಾಂತೇಶ ಓಶಿಮಠ, ದತ್ತಾತ್ರೇಯ, ಬಿಲಾಲ್ ಶೇಖ್ ಹಾಗೂ ಶಾಲೆಯ ಶಿಕ್ಷಕರಾದ ನಾಗರಾಜ ಸಿ. ಗೌಡ, ಅಕ್ಷತಾ, ಸುಮಿತ್ರಾ ಅಗೇರ್ ಮತ್ತು ರಜನಿ ನಾಯ್ಕ ಪಾಲ್ಗೊಂಡಿದ್ದರು.






