ಅಂಕೋಲಾ ತಾಲೂಕಿನ ಹಿಚ್ಕಡ ಗ್ರಾಮದ ತೋಟವೊಂದರಲ್ಲಿ, ಅಪರೂಪದ ಕೃಷ್ಣ ಪಕ್ಷಿ (ಕೆಂಬುತಾ) ಆರು ಮೊಟ್ಟೆಗಳನ್ನಿಟ್ಟಿದೆ. ಈ ನೈಸರ್ಗಿಕ ವಿದ್ಯಮಾನವು ಆ ಪ್ರದೇಶದ ಸಮೃದ್ಧ ಜೀವವೈವಿಧ್ಯಕ್ಕೆ ಸಾಕ್ಷಿಯಾಗಿದ್ದು, ತೋಟದ ಮಾಲೀಕರು ಪಕ್ಷಿಯ ಗೂಡನ್ನು ರಕ್ಷಿಸುತ್ತಿರುವುದು ಮನುಷ್ಯ-ಪ್ರಕೃತಿ ಬಾಂಧವ್ಯವನ್ನು ಸಾರುತ್ತದೆ.

ರಾಘು ಕಾಕರಮಠ

ಕಾರವಾರ: ಪ್ರಕೃತಿಯ ಮಡಿಲಿನಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನವೂ ತನ್ನದೇ ಆದ ವಿಶೇಷತೆ ಹೊಂದಿರುತ್ತದೆ. ಅಂತಹ ಅಪರೂಪದ ನೈಸರ್ಗಿಕ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗಿ ತಾಲೂಕಿನ ಹಿಚ್ಕಡ ಗ್ರಾಮದ ತೋಟದ ಪರಿಸರದಲ್ಲಿ ಬಲು ಅಪರೂಪದ ಕೃಷ್ಣ ಪಕ್ಷಿ (ಕೆಂಬುತಾ) ಯೊಂದು ಮೊಟ್ಟೆ ಇಟ್ಟಿರುವುದು ಪಕ್ಷಿಪ್ರೇಮಿಗಳು ಹಾಗೂ ಪ್ರಕೃತಿ ಆಸಕ್ತರ ಗಮನ ಸೆಳೆದಿದೆ.

ಹಿಚ್ಕಡದ ಗುರು ನಾಯ್ಕ ಅವರ ತೋಟದಲ್ಲಿ ಕೃಷ್ಣ ಪಕ್ಷಿ 6 ಮೊಟ್ಟೆ ಇಟ್ಟಿರುವುದು ಇಲ್ಲಿನ ಪರಿಸರದ ಜೀವವೈವಿಧ್ಯಕ್ಕೆ ಸಾಕ್ಷಿಯಾಗಿದೆ.

ಮೊಟ್ಟೆಯ ಸುತ್ತಲೂ ಎಚ್ಚರಿಕೆಯ ಕಾವಲು:

ಮೊಟ್ಟೆ ಇಟ್ಟಿರುವ ಪ್ರದೇಶದಲ್ಲಿ ಪಕ್ಷಿಯ ಚಲನವಲನ ಗಮನಿಸಿದ ಗುರು ನಾಯಕ ಅದರ ನೈಸರ್ಗಿಕ ಜೀವನ ಕ್ರಮಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಪಕ್ಷಿಯ ಗೂಡು ಅಥವಾ ಮೊಟ್ಟೆಯನ್ನು ಮುಟ್ಟದೆ, ಹತ್ತಿರ ಹೋಗಿ ಗದ್ದಲ ಮಾಡದೆ ದೂರದಿಂದಲೇ ವೀಕ್ಷಿಸುವ ಮೂಲಕ ಪಕ್ಷಿಯ ರಕ್ಷಣೆಗೆ ಸಹಕರಿಸುತ್ತಿದ್ದಾರೆ.

ಕಪ್ಪು ಬಣ್ಣದ ಆಕರ್ಷಕ ಮೈಬಣ್ಣ ಹಾಗೂ ವಿಶಿಷ್ಟ ಚಲನವಲನದಿಂದ ಗಮನ ಸೆಳೆಯುವ ಕೃಷ್ಣ ಪಕ್ಷಿ, ಸಾಮಾನ್ಯವಾಗಿ ತನ್ನ ವಾಸಸ್ಥಳವನ್ನು ಆಯ್ಕೆ ಮಾಡುವಾಗ ಸುರಕ್ಷಿತ ಹಾಗೂ ಅನುಕೂಲಕರ ಪರಿಸರಕ್ಕೆ ಆದ್ಯತೆ ನೀಡುತ್ತದೆ. ಗ್ರಾಮದ ಹಸಿರು ಪರಿಸರ, ಮರಗಿಡಗಳು ಹಾಗೂ ನೈಸರ್ಗಿಕ ವಾತಾವರಣ ಪಕ್ಷಿಗಳಿಗೆ ಅನುಕೂಲಕರವಾಗಿರುವುದರಿಂದ ಕೃಷ್ಣ ಪಕ್ಷಿಯು ಇಲ್ಲಿ ಸಂತಾನೋತ್ಪತ್ತಿಗೆ ಸ್ಥಳ ಆಯ್ಕೆ ಮಾಡಿಕೊಂಡಿರಬಹುದು ಎಂದು ಪ್ರಕೃತಿ ಪ್ರಿಯರು ಅಭಿಪ್ರಾಯಪಟ್ಟಿದ್ದಾರೆ. ಪಕ್ಷಿಯು ಮೊಟ್ಟೆ ಇಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ಕುತೂಹಲವೂ ಹೆಚ್ಚಾಗಿದೆ.

ಪಕ್ಷಿಗಳು ತಮ್ಮ ಮೊಟ್ಟೆ ಹಾಗೂ ಮರಿಗಳನ್ನು ರಕ್ಷಿಸಲು ಅತ್ಯಂತ ಎಚ್ಚರಿಕೆಯಿಂದಿರುತ್ತವೆ. ಮಾನವನ ಅತಿಯಾದ ಓಡಾಟ, ಗದ್ದಲ ಅಥವಾ ಗೂಡಿನ ಬಳಿ ಕುತೂಹಲದಿಂದ ತೆರಳುವುದು ಪಕ್ಷಿಗೆ ಒತ್ತಡ ಉಂಟುಮಾಡಬಹುದು. ಹೀಗಾಗಿ ಹಿಚ್ಕಡದಲ್ಲಿ ಕಂಡುಬಂದಿರುವ ಈ ಅಪರೂಪದ ನೈಸರ್ಗಿಕ ವಿದ್ಯಮಾನವನ್ನು ಸಂರಕ್ಷಣೆಯ ದೃಷ್ಟಿಯಿಂದ ನೋಡಬೇಕಾಗಿದೆ.

ಜೀವವೈವಿಧ್ಯದ ಸೂಚಕ:

ಒಂದು ಗ್ರಾಮದಲ್ಲಿ ವಿವಿಧ ಜಾತಿಯ ಪಕ್ಷಿಗಳು ಕಾಣಿಸಿಕೊಳ್ಳುವುದು ಅಲ್ಲಿನ ನೈಸರ್ಗಿಕ ಪರಿಸರ ವ್ಯವಸ್ಥೆ ಇನ್ನೂ ಜೀವಂತವಾಗಿರುವುದರ ಸೂಚಕವಾಗಿದೆ. ಕೃಷಿ ಭೂಮಿ, ತೋಟಗಳು, ಮರಗಿಡಗಳು ಹಾಗೂ ಜಲಮೂಲಗಳನ್ನು ಸಂರಕ್ಷಿಸುವುದರಿಂದ ಪಕ್ಷಿಗಳಿಗೆ ಸುರಕ್ಷಿತ ವಾಸಸ್ಥಾನ ಒದಗುತ್ತದೆ.

ಹಿಚ್ಕಡದ ಈ ಪುಟ್ಟ ಪಕ್ಷಿಗೂಡು, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ. ಹಿಚ್ಕಡದಲ್ಲಿ ಕೃಷ್ಣ ಪಕ್ಷಿ ಮೊಟ್ಟೆ ಇಟ್ಟಿರುವುದು ಗ್ರಾಮಸ್ಥರ ಪಾಲಿಗೆ ಕೇವಲ ಕುತೂಹಲದ ಸಂಗತಿಯಲ್ಲ. ನಮ್ಮ ಸುತ್ತಲಿನ ಪ್ರಕೃತಿಯನ್ನೂ ನಾವು ಕಾಪಾಡಬೇಕು ಎಂಬ ಸಂದೇಶ ಸಾರುವ ಅಪರೂಪದ ಘಟನೆಯಾಗಿದೆ.

ಕೃಷ್ಣ ಪಕ್ಷಿಯನ್ನು ಸ್ಥಳೀಯ ವಾಡಿಕೆ ಭಾಷೆಯಲ್ಲಿ ಕೆಂಬುತಾ, ರತ್ನ ಪಕ್ಷಿ ಎಂತಲು ಕರೆಯಲಾಗುತ್ತದೆ. ಇದನ್ನು ಹಿಂದಿನ ಕಾಲದಲ್ಲಿ ಶಕುನ ಪಕ್ಷಿ ಅಂತಲು ಕರೆಯಲಾಗುತ್ತಿತ್ತು. ಮಾಂತ್ರಿಕತೆಯಲ್ಲಿ ಈ ಪಕ್ಷಿಯನ್ನು ಬಳಸಲಾಗುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಈ ಪಕ್ಷಿ ದಾರಿಯಲ್ಲಿ ಹೋಗುವಾಗ ಎದುರಾದರೆ ಶುಭ ಸೂಚನೆ ಎಂದು ಹೇಳಲಾಗುತ್ತಿರುವುದರಿಂದ ಇದನ್ನು ಶಕುನದ ಪಕ್ಷಿ ಎಂತಲೂ ಕರೆಯಲಾಗುತ್ತದೆ.