Asianet Suvarna News Asianet Suvarna News

ಬ್ಯಾಂಕ್‌ಗಳಲ್ಲಿ ಇನ್ನು ಕನ್ನಡ ಬಳಕೆ ಕಡ್ಡಾಯ?

ರಾಜ್ಯದ ಎಲ್ಲ ಸರ್ಕಾರಿ, ಸರ್ಕಾರೇತರ ಸಂಘ ಸಂಸ್ಥೆಗಳು, ಕೈಗಾರಿಕೆಗಳು, ಬ್ಯಾಂಕುಗಳು ಸೇರಿದಂತೆ ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ಕಾರ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಕನ್ನಡ ಭಾಷಾ ಜ್ಞಾನ ಅತ್ಯಗತ್ಯಗೊಳಿಸಿ, ಗ್ರಾಹಕರೊಂದಿಗೆ ಉದ್ಯೋಗಿಗಳು ಕನ್ನಡದಲ್ಲಿ ವ್ಯವಹರಿಸುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಳೆದ ಮಾರ್ಚ್‌ ಅಧಿವೇಶನದಲ್ಲಿ ಅಂಗೀಕರಿಸಿಲ್ಪಟ್ಟ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ-2022’ರಡಿ ಈ ನಿಯಮ ಜಾರಿಗೊಳಿಸಲು ಸರ್ಕಾರ ಹೊರಟಿದೆ.

Use of Kannada Now Mandatory in Banks in Karnataka grg
Author
First Published Sep 9, 2023, 4:00 AM IST

ಲಿಂಗರಾಜು ಕೋರಾ

ಬೆಂಗಳೂರು(ಸೆ.09): ರಾಜ್ಯದಲ್ಲಿ ಎಲ್ಲ ಬ್ಯಾಂಕುಗಳಲ್ಲೂ ಉದ್ಯೋಗಿಗಳು ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯಲ್ಲಿ ಈಗಾಗಲೇ ಒಂದೆರಡು ಸುತ್ತಿನ ಗಂಭೀರ ಚರ್ಚೆಗಳು ನಡೆದಿದ್ದು ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕಾಗಿದೆ. ನಿಯಮಗಳು ರೂಪುಗೊಂಡ ಬಳಿಕ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.

ರಾಜ್ಯದ ಎಲ್ಲ ಸರ್ಕಾರಿ, ಸರ್ಕಾರೇತರ ಸಂಘ ಸಂಸ್ಥೆಗಳು, ಕೈಗಾರಿಕೆಗಳು, ಬ್ಯಾಂಕುಗಳು ಸೇರಿದಂತೆ ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ಕಾರ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಕನ್ನಡ ಭಾಷಾ ಜ್ಞಾನ ಅತ್ಯಗತ್ಯಗೊಳಿಸಿ, ಗ್ರಾಹಕರೊಂದಿಗೆ ಉದ್ಯೋಗಿಗಳು ಕನ್ನಡದಲ್ಲಿ ವ್ಯವಹರಿಸುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಳೆದ ಮಾರ್ಚ್‌ ಅಧಿವೇಶನದಲ್ಲಿ ಅಂಗೀಕರಿಸಿಲ್ಪಟ್ಟ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ-2022’ರಡಿ ಈ ನಿಯಮ ಜಾರಿಗೊಳಿಸಲು ಸರ್ಕಾರ ಹೊರಟಿದೆ.

ಕನ್ನಡ ಬಳಕೆ ಕಡ್ಡಾಯ ಕಾಯ್ದೆ; ಡಿಸೆಂಬರ್‌ನಲ್ಲಿ ವಿಧೇಯಕ ಅಂಗೀಕಾರ

ಮಾಹಿತಿ ಪ್ರಕಾರ, ನೂರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಬ್ಯಾಂಕ್‌ಗಳು ಕನ್ನಡ ಬಲ್ಲ ಹಿರಿಯ ಅಧಿಕಾರಿಗಳ ನೇತೃತ್ವದ ‘ಕನ್ನಡ ಕೋಶ’ ಹೊಂದಿರಬೇಕು. ಕನ್ನಡೇತರ ಅಥವಾ ಕನ್ನಡ ಗೊತ್ತಿಲ್ಲದ ಉದ್ಯೋಗಿಗಳಿಗೆ ಗ್ರಾಹಕರೊಂದಿಗಿನ ವ್ಯವಹಾರಕ್ಕೆ ಅಗತ್ಯವಿರುವಷ್ಟುಕನ್ನಡವನ್ನು ಕಲಿಸಲು ಬ್ಯಾಂಕ್‌ಗಳು ‘ಕನ್ನಡ ಕಲಿಕಾ ಘಟಕ’ ಸ್ಥಾಪಿಸಬೇಕು. ಸರ್ಕಾರ ಬೇಕಿದ್ದರೆ ಇದಕ್ಕೆ ಅಗತ್ಯ ಬೋಧಕ ಸಿಬ್ಬಂದಿ ಮತ್ತು ಅಧ್ಯಯನ ಸಾಮಗ್ರಿಗಳನ್ನು ನೀಡಲಿದೆ. ಆದರೆ, ಇದಕ್ಕೆ ತಗಲುವ ವೆಚ್ಚವನ್ನು ಬ್ಯಾಂಕ್‌ನವರೇ ಭರಿಸಬೇಕು ಎಂದು ನಿಯಮ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡಿಗರ ಆಗ್ರಹದಂತೆ ಕಾಯ್ದೆ:

ಇತ್ತೀಚಿನ ವರ್ಷಗಳಲ್ಲಿ ವಿವಿಧ ಬ್ಯಾಂಕುಗಳು ರಾಜ್ಯದ ತಮ್ಮ ಶಾಖೆಗಳಿಗೆ ಬೇರೆ ಬೇರೆ ರಾಜ್ಯಗಳ ಸಿಬ್ಬಂದಿಯನ್ನು ನಿಯೋಜಿಸುತ್ತಿರುವುದು ಹೆಚ್ಚುತ್ತಿದೆ. ಇದರಿಂದ ಕನ್ನಡ ತಿಳಿದಿಲ್ಲದ ಬ್ಯಾಂಕ್‌ ಉದ್ಯೋಗಿಗಳೊಂದಿಗೆ ವ್ಯವಹರಿಸಲು ಕನ್ನಡಿಗರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ರಾಜ್ಯದ ಎಲ್ಲ ಬ್ಯಾಂಕುಗಳಿಗೆ ನೇಮಕಾತಿ ವೇಳೆ ಕನ್ನಡ ಬಲ್ಲವರನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ಬ್ಯಾಂಕ್‌ ಉದ್ಯೋಗಿಗಳು ಕನ್ನಡಿಗರೊಂದಿಗೆ ಕನ್ನಡದಲ್ಲೇ ವ್ಯವಹರಿಸುವುದನ್ನು ಕಡ್ಡಾಯಗೊಳಿಸಬೇಕು ಎಂಬುದು ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳ ಆಗ್ರಹವಾಗಿದೆ.

ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆ ಅಭಿವೃದ್ಧಿಗಾಗಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022’ರನ್ನು ರೂಪಿಸಿ ಕಳೆದ ಮಾಚ್‌ರ್‍ ಅಧಿವೇಶನದಲ್ಲಿ ಅಂಗೀಕರಿಸಿತ್ತು. ರಾಜ್ಯ ಸರ್ಕಾರ ಸ್ಥಳೀಯ ಅಧಿಕಾರಿಗಳು, ಮಂಡಳಿಗಳು, ನಿಗಮಗಳು ಮತ್ತು ಶಾಸನಬದ್ಧ ಅಥವಾ ಶಾಸನಬದ್ಧವಲ್ಲದ ಸಂಸ್ಥೆಗಳಲ್ಲಿನ ಉದ್ಯೋಗಗಳಿಗೆ ಕನ್ನಡ ಭಾಷೆಯ ಜ್ಞಾನವು ಅತ್ಯಗತ್ಯ ಎಂದು ಮಸೂದೆ ಹೇಳುತ್ತದೆ. ಈ ವಿಧೇಯಕದ ಅನುಷ್ಠಾನದ ಭಾಗವಾಗಿ ರಾಜ್ಯದ ಎಲ್ಲ ಬ್ಯಾಂಕುಗಳ ಉದ್ಯೋಗಿಗಳು ಗ್ರಾಹಕರು ಕನ್ನಡದಲ್ಲಿ ವ್ಯವಹರಿಸುವುದನ್ನು ಕಡ್ಡಾಯಗೊಳಿಸಲು ಹೊರಟಿದೆ.

ಕನ್ನಡ ಬಳಸಿದಷ್ಟು ಬೆಳೆಯುತ್ತೆ, ಎಲ್ಲಾ ಕ್ಷೇತ್ರದಲ್ಲೂ ಕನ್ನಡ ಭಾಷೆ ಬಳಸಬೇಕು: ಸಿಎಂ ಬೊಮ್ಮಾಯಿ

ಏನಿರಲಿದೆ ನಿಯಮ?

- 100ಕ್ಕೂ ಹೆಚ್ಚು ಉದ್ಯೋಗಿಗಳಿದ್ದರೆ ಬ್ಯಾಂಕುಗಳು ‘ಕನ್ನಡಕೋಶ’ ತೆರೆಯಬೇಕು
- ಕನ್ನಡ ಗೊತ್ತಿಲ್ಲದ ಕನ್ನಡೇತರ ನೌಕರರಿಗಾಗಿ ಕನ್ನಡ ಕಲಿಕಾ ಘಟಕ ರಚಿಸಬೇಕು
- ಸರ್ಕಾರ ಬೇಕಿದ್ದರೆ ಅಗತ್ಯ ಬೋಧಕ ಸಿಬ್ಬಂದಿ, ಅಧ್ಯಯನ ಸಾಮಗ್ರಿ ಕೊಡಲಿದೆ
- ಆದರೆ ಇದಕ್ಕೆ ತಗುಲುವ ವೆಚ್ಚವನ್ನು ಆಯಾಯ ಬ್ಯಾಂಕ್‌ನವರೇ ಭರಿಸಬೇಕು
- ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಯಡಿ ನಿಯಮ ಜಾರಿಗೆ ಚಿಂತನೆ

ನಿಯಮಾವಳಿ ರಚನೆ

ರಾಜ್ಯದ ಬ್ಯಾಂಕುಗಳಲ್ಲಿ ಉದ್ಯೋಗಿಗಳು ಸ್ಥಳೀಯ ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸುವುದನ್ನು ಕಡ್ಡಾಯಗೊಳಿಸುವುದೂ ಸೇರಿದಂತೆ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ-2022’ರಲ್ಲಿನ ಎಲ್ಲ ಅಂಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.  

Follow Us:
Download App:
  • android
  • ios