ಬೆಂಗಳೂರಿನಲ್ಲಿ ನಡೆದ 'ಕಿಸಾನ್ ನ್ಯಾಯ ಸತ್ಯಾಗ್ರಹ'ದಲ್ಲಿ, ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್ ಅವರು ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿದರು. ಪ್ರಧಾನಿ ಮೋದಿ ಅವರು ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತೀಯ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.

 ಬೆಂಗಳೂರು (ಏ.23): ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತ ರೈತರ ಪರಿಶ್ರಮ ಹಾಗೂ ಬೆವರನ್ನು ಮಾರಾಟ ಮಾಡಿದ್ದಾರೆ. ಈ ಒಪ್ಪಂದ ನಮ್ಮ ರೈತರ ಪಾಲಿಗೆ ಮರಣ ಶಾಸನ ಎಂದು ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್‌ ಕಿಡಿ ಕಾರಿದ್ದಾರೆ.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದ ವಿರೋಧಿಸಿ ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ‘ಕಿಸಾನ್ ನ್ಯಾಯ ಸತ್ಯಾಗ್ರಹ’ ಹೋರಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಮೆರಿಕ ಒತ್ತಡದಿಂದ ಭಯಭೀತರಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ಆ ಮೂಲಕ147 ಕೋಟಿ ಜನರಿಗೆ ಮಹಾ ದ್ರೋಹ ಮಾಡಿದೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ತಲೆಮೇಲೆ ಕೂರಿಸಿ ಮೆರೆದಾಡುತ್ತಿರುವ ಮೋದಿ ಅವರು ಈಗ ಅದೇ ಟ್ರಂಪ್ ಅವರ ಆಜ್ಞಾಪಾಲಕರಾಗುವ ಸ‍್ಥಿತಿಗೆ ಬಂದಿದ್ದು ವಿಷಾದನೀಯ. ಈ ಒಪ್ಪಂದದಿಂದಾಗಿ ನಮ್ಮ ದೇಶದ ರೈತರು ದುರ್ಬಲರಾಗುತ್ತಾರೆ ಎಂದು ಸಲೀಂ ಅಹ್ಮದ್ ಹೇಳಿದರು.

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಮಂಜುನಾಥ್ ಗೌಡ, ಮಾಜಿ ಮೇಯರ್ ಹುಚ್ಚಪ್ಪ, ಮುಖಂಡರಾದ ಕೇಶವಮೂರ್ತಿ, ಮೋಹನ್ ಕುಮಾರ್, ಶಿವಕುಮಾರ್, ಎಸ್.ಡಿ ಮಕಂದರ್, ಶೋಯೆಬ್ ಸೇರಿದಂತೆ ಹಲವರು ಹಾಜರಿದ್ದರು.

----------

ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದ ವಿರೋಧಿಸಿ ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಕಿಸಾನ್ ನ್ಯಾಯ ಸತ್ಯಾಗ್ರಹ ಹೋರಾಟದಲ್ಲಿ ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್‌ ಮಾತನಾಡಿದರು.