ರಾಜ್ಯದ 6 ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಅಬ್ಬರ: 5 ಮಂದಿ ಸಾವು
ರಾಜ್ಯದ ಆರು ಜಿಲ್ಲೆಗಳಲ್ಲಿ ಗುರುವಾರ ರಾತ್ರಿಯಿಂದೀಚೆಗೆ ಕೆಲಕಾಲ ಆಲಿಕಲ್ಲು ಸಹಿತ ಮುಂಗಾರು ಪೂರ್ವ ಮಳೆ ಅಬ್ಬರಿಸಿದೆ. ಸಿಡಿಲು ಬಡಿದು ಮೂವರು ಸೇರಿ, ಮಳೆ ಸಂಬಂಧಿ ಅನಾಹುತಕ್ಕೆ ಐವರು ಬಲಿಯಾಗಿದ್ದಾರೆ.
ಬೆಂಗಳೂರು (ಏ.08): ರಾಜ್ಯದ ಆರು ಜಿಲ್ಲೆಗಳಲ್ಲಿ ಗುರುವಾರ ರಾತ್ರಿಯಿಂದೀಚೆಗೆ ಕೆಲಕಾಲ ಆಲಿಕಲ್ಲು ಸಹಿತ ಮುಂಗಾರು ಪೂರ್ವ ಮಳೆ ಅಬ್ಬರಿಸಿದೆ. ಸಿಡಿಲು ಬಡಿದು ಮೂವರು ಸೇರಿ, ಮಳೆ ಸಂಬಂಧಿ ಅನಾಹುತಕ್ಕೆ ಐವರು ಬಲಿಯಾಗಿದ್ದಾರೆ. ಕಲಬುರಗಿ, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡದಲ್ಲಿ ಶುಕ್ರವಾರ ಕೆಲಕಾಲ ಉತ್ತಮ ಮಳೆ ಸುರಿದಿದ್ದು, ಬೀದರ್‌ನಲ್ಲಿ ಸಾಧಾರಣ ಮಳೆಯಾಗಿದೆ. ಕೊಪ್ಪಳ, ಉತ್ತರ ಕನ್ನಡ, ಗದಗದಲ್ಲಿ ಭಾರೀ ಆಲಿಕಲ್ಲು ಸಹಿತ ಮಳೆಯಾಗಿದ್ದು, ಕೆಲವೆಡೆ ಬೆಳೆಗಳಿಗೂ ಹಾನಿಯಾಗಿದೆ.
ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಕನೂರು ತಾಲೂಕು, ಗದಗ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಮಳೆಯ ಅಬ್ಬರ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸುಮಾರು ಅರ್ಧ ಗಂಟೆಗಳ ಕಾಲ ಸುರಿದ ಆಲಿಕಲ್ಲು ಮಳೆಯಿಂದಾಗಿ ರಸ್ತೆ, ಹೊಲಗಳೆಲ್ಲ ಸಂಪೂರ್ಣವಾಗಿ ಶ್ವೇತ ವರ್ಣಕ್ಕೆ ತಿರುಗಿತ್ತು. ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳದಲ್ಲಂತು ಮನೆ ಚಾವಣಿಗಳೆಲ್ಲ ಸಂಪೂರ್ಣವಾಗಿ ಆಲಿಕಲ್ಲುಗಳಿಂದ ಆವೃತವಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲೂ ಆಲಿಕಲ್ಲು ಸಹಿತ ಒಂದು ಗಂಟೆ ಕಾಲ ಅಬ್ಬರದ ಮಳೆ ಸುರಿದಿದ್ದು, ಧಾರವಾಡ ಜಿಲ್ಲೆಯಲ್ಲೂ ಕೆಲಕಾಲ ಉತ್ತಮ ಮಳೆಯಾಗಿದೆ.
ಪ್ರವಾಸಕ್ಕೆ ಹೋಗುವವರಿಗೆ ಮಳೆ ಅಡ್ಡಿಯಾಗೋ ಸಾಧ್ಯತೆ: ಏ.12ರಿಂದ 20ರವರೆಗೆ ಕರ್ನಾಟಕದಲ್ಲಿ ವರುಣಾರ್ಭಟ
ಗದಗದಲ್ಲಿ ಸಿಡಿಲಿಗೆ ಇಬ್ಬರು ಬಲಿ: ಸಿಡಿಲಬ್ಬರಕ್ಕೆ ಗದಗ ತಾಲೂಕಿನ ಲಿಂಗದಾಳದಲ್ಲಿ ಕುರಿ ಮೇಯಿಸಲು ತೆರಳಿದ್ದ ಶರಣಪ್ಪ (16), ದೇವೇಂದ್ರಪ್ಪ (16) ಸ್ಥಳದಲ್ಲೇ ಮೃತಪಟ್ಟರೆ, ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಬಿಲ್ವಾಡ (ಬಿ) ಗ್ರಾಮದ ರೈತ ಭೋಗಪ್ಪ (60) ಕೃಷಿ ಕೆಲಸ ಮಾಡುತ್ತಿದ್ದಾಗ ಬಲಿಯಾಗಿದ್ದಾರೆ. ಇನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ಯಂಕುಬಾಯಿ ಕುಲಕರ್ಣಿ (79), ಶಾರವ್ವಾ ಪತ್ತಾರ (58) ಅವರು ಮಳೆಯಿಂದಾಗಿ ನೆನೆದಿದ್ದ ಮನೆಯ ಚಾವಣಿ ಕುಸಿದು ಮೃತಪಟ್ಟಿದ್ದಾರೆ.
ಗಾಳಿಗೆ ಹಾರಿಹೋದ 10 ಚೆಕ್‌ಪೋಸ್ಟ್‌ಗಳು: ಅಸೆಂಬ್ಲಿ ಚುನಾವಣೆಗಾಗಿ ಜಿಲ್ಲಾದ್ಯಂತ 45ಕ್ಕೂ ಹೆಚ್ಚು ಚೆಕ್‌ಪೋಸ್ಟ್ ಸ್ಥಾಪಿಸಲಾಗಿತ್ತು. ಈ ಪೈಕಿ ಅಫಜಲ್ಪುರ, ಕಲಬುರಗಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳ ಪೈಕಿ 10ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳು ಬಿರುಗಾಳಿಗೆ ಹಾರಿ ಹೋಗಿವೆ. ಬಳೂರಗಿ, ಅರ್ಜುಣಗಿ ಸೇರಿದಂತೆ ಗಡಿಯಲ್ಲಿ ಹಾಕಲಾಗಿದ್ದ ಚೆಕ್‌ಪೋಸ್ಟ್‌ಗಳು ಹಾರಿ ಹೋಗಿವೆ. ಬಟ್ಟೆಯ ಆಸರೆ ಇರುವ ತಾತ್ಕಾಲಿಕ ಚೆಕ್‌ಪೊಸ್ಟ್ ಇವಾಗಿದ್ದವು. ಬಿರುಗಾಳಿಗೆ ಅವೆಲ್ಲವೂ ಹರಿದು ಹಾರಿ ಹೋಗಿವೆ.
ಕಲಬುರಗಿ ನಗರ ಹಾಗೂ ಸುತ್ತಲಿನ 15 ಕಿಮೀ ವ್ಯಾಪ್ತಿಯಲ್ಲಿ ಶುಕ್ರವಾರ ಇಡೀ ದಿನ ಮೋಡ ಕವಿದ ವಾತಾವರಣವಿದೆ. ಕಲಬುರಗಿಯಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಏಕಾಏಕಿ ಸುರಿದ ಶುಕ್ರವಾರದ ಧಾರಾಕಾರ ಮಳೆಯಿಂದಾಗಿ ತಂಪನೆಯ ವಾತಾವರಣ ಸೃಷ್ಟಿಯಾಗಿದೆ. ಬೇಸಿಗೆಯ ಪ್ರಖರ ತಾಪಮಾನ ತುಸು ಶಮನವಾದಂತಾಗಿದೆ. ರಭಸದ ಗಾಳಿ, ಗುಡುಗಿನ ಅಬ್ಬರ ಜೋರಾಗಿದ್ದರಿಂದ ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಹಲವೆಡೆ ಬೆಳಗಿನ 3 ಗಂಟೆ ಕರೆಂಟ್ ಇರಲೇ ಇಲ್ಲ. ಹೀಗಾಗಿ ಎಂದಿನ ಕೆಲಸಗಳಿಗೆ ಇದು ಭಾರಿ ಅಡ್ಡಿ ಮಾಡಿತ್ತು. ಮಳೆ, ಗಾಳಿಯ ರಭಸ ತಗ್ಗಿದ ನಂತರ ಕರೆಂಟ್ ಪುನಃ ಬಂತು. ಮರ ಗಿಡಗಳು ಧರೆಗೆ ಒರಗಿದ್ದಲ್ಲದೆ ಅನೇಕ ಕಡೆ ವಿದ್ಯುತ್ ತಂತಿಗಳ ಮೈಲೂ ಮರಲು ಬಿದ್ದ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಾಡಿದೆ.
ಸಿದ್ದರಾಮಯ್ಯ ಸ್ಪರ್ಧೆ: ವರುಣದಲ್ಲಿ ಜೆಡಿಎಸ್ ಸ್ಪರ್ಧಿ ನಿಷ್ಕ್ರಿಯ!
ಚೆಕ್‌ಪೋಸ್ಟ್ ಸಿಬ್ಬಂದಿ ಅಕಾಲಿಕ ಮಳೆ, ಬಿರುಗಾಳಿ, ಸಿಡಿಲಿಗೆ ತತ್ತರಿಸಿದ್ದಾರೆ. 2 ದಿನದಲ್ಲೇ ತುಂಬ ಆತಂಕ ಕಾಡಿದೆ. ಅನೇಕ ಕಡೆ ಸಿಬ್ಬಂದಿಗೆ ಗುರುವಾರ ಹಾಗೂ ಶುಕ್ರವಾರ ಮಳೆಯ ಕಾರಣದಿಂದಾಗಿ ಸರಿಯಾಗಿ ಊವೂ ದೊರಕಿಲ್ಲ. ಜಿಲ್ಲಾಡಳಿತ ಚೆಕ್‌ಪೋಸ್ಟ್ ಸಿಬ್ಬಂದಿಗಳ ಈ ತೊಂದರೆಯನ್ನು ಗಮನಿಸಿ ಪರಿಹರಿಸಬೇಕು ಎಂಬ ಕೂಗು ಎದ್ದಿದೆ. ಪೊಲೀಸ್, ಹಾಗೂ ಅದಿಕಾರಿಗಳು ಚೆಕ್‌ಪೋಸ್ಟ್‌ನಲ್ಲಿ ದಿನದ 24 ಗಂಟೆ ಕೆಲಸ ಮಾಡಲೇಬೇಕು. ಈ ಹಂತದಲ್ಲಿ ಸ್ಥಳಧಲ್ಲೇ ಊಟ ಪೂರೈಸುವ ಕೆಲಸವಾಗಬೇಕು ಎಂಬ ಕೂಗು ಹೆಚ್ಚಿದೆ.