* ಡಿಬಿಟಿ ಯೋಜನೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ* ಹುಬ್ಬಳ್ಳಿ, ಬೆಳಗಾವಿ, ತೋರಣಗಲ್‌, ಬೀದರ್‌ ಮತ್ತು ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ * ಮೂಲಭೂತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿದ ಕೇಂದ್ರ ಸರ್ಕಾರ 

ಬೆಂಗಳೂರು(ಜೂ.24): ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರ ನೀಡುವ ವಿವಿಧ ಬಗೆಯ ಆರ್ಥಿಕ ನೆರವನ್ನು ಜನರ ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆ ಜಾರಿಗೆ ತಂದ ಪರಿಣಾಮ ಒಂದು ರು. ಭ್ರಷ್ಟಾಚಾರ ಮಾಡಲು ಆಗುತ್ತಿಲ್ಲ. ಹೀಗಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದ ನಾಯಕರು ವಿಲವಿಲ ಒದ್ದಾಡುವಂತಾಗಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಬಿಜೆಪಿ ರಾಜ್ಯ ಮಟ್ಟದ ಇ-ಪ್ರಶಿಕ್ಷಣ ಚಿಂತನ ವರ್ಗದಲ್ಲಿ ವೆಬೆಕ್ಸ್‌ ಮೂಲಕ ಮಾತನಾಡಿದ ಅವರು, ದೇಶದಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದರೂ ದೇಶದ ಜನರಿಗೆ ಅದರ ಪ್ರಯೋಜನ ಸಿಗುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು, 46 ಕೋಟಿ ಜನರ ಬ್ಯಾಂಕ್‌ ಖಾತೆಗಳನ್ನು ಜನಧನ್‌ ಯೋಜನೆಯಡಿ ತೆರೆಸಿ ನೇರ ನಗದು ವರ್ಗಾವಣೆಯನ್ನು (ಡಿಬಿಟಿ) ಅನುಷ್ಠಾನಕ್ಕೆ ತರುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರು ಎಂದರು.

ಒಂದು ದೇಶದಲ್ಲಿ ಎರಡು ಕಾಯ್ದೆ ಇರಬಾರದು ಎಂಬ ಡಾ. ಶ್ಯಾಮಪ್ರಸಾದ್‌ ಮುಖರ್ಜಿ ಅವರ ಚಿಂತನೆಯನ್ನು ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ​ಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಮೂಲಕ ಈಡೇರಿಸಿದ್ದಾರೆ. ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಕನಸನ್ನು ನನಸು ಮಾಡುವಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕ್ರಮಗಳ ಕುರಿತು ಕಾರ್ಯಕರ್ತರು ಮತ್ತು ಜನರಿಗೆ ಮಾಹಿತಿ ಕೊಡಬೇಕಾಗಿದೆ ಎಂದು ಕರೆ ನೀಡಿದರು.

ಸಿಎಂ ಯೋಗಿ ಆದಿತ್ಯನಾಥ್ ಬದಲಾವಣೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ

ಕಿಸಾನ್‌ ಸಮ್ಮಾನ್‌ ಯೋಜನೆ ರೈತರು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ‘ಉಡಾನ್‌’ ಯೋಜನೆಯಡಿ ಹುಬ್ಬಳ್ಳಿ, ಬೆಳಗಾವಿ, ತೋರಣಗಲ್‌, ಬೀದರ್‌ ಮತ್ತು ಕಲಬುರಗಿಯಲ್ಲಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಜಲ ಮಿಷನ್‌ ಯೋಜನೆಯಡಿ ಲಕ್ಷಾಂತರ ಹಳ್ಳಿಗಳಿಗೆ ಪ್ರಯೋಜನ ಲಭಿಸಲಿದೆ. ಉಜಾಲಾ ಯೋಜನೆಯಡಿ ಲಕ್ಷಾಂತರ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರ ಮೂಲಭೂತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿದ್ದು,ಮೈಸೂರು- ಬೆಂಗಳೂರು, ಬೆಂಗಳೂರು- ಚೆನ್ನೈ ಕಾರಿಡಾರ್‌ ರಸ್ತೆ ಯೋಜನೆ ಇದಕ್ಕೆ ಉದಾಹರಣೆಯಾಗಿದೆ.ಯೋಗ ದಿನಾಚರಣೆ ದಿನದಂದು ದೇಶದಲ್ಲಿ ಸುಮಾರು 86 ಲಕ್ಷ ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಆಕ್ಸಿಜನ್‌ ಪೂರೈಕೆಯನ್ನು 900 ಮೆಟ್ರಿಕ್‌ ಟನ್‌ನಿಂದ 9 ಸಾವಿರ ಮೆಟ್ರಿಕ್‌ ಟನ್‌ಗೆ ಹೆಚ್ಚಿಸಿರುವುದು, ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಸುಸಜ್ಜಿತಗೊಳಿಸಿದ್ದು ಕೂಡ ಕೋವಿಡ್‌ ಸಮರ್ಪಕ ನಿರ್ವಹಣೆಗೆ ಉದಾಹರಣೆಯಾಗಿದೆ ಎಂದು ಹೇಳಿದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನೆ ಸೇರಿದಂತೆ ಇತರರು ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಿದ್ದರು.