ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಅವಕಾಶ ನಿರಾಕರಿಸಿದ್ದಕ್ಕೆ ಅಭಿಮಾನಿಯೊಬ್ಬ ಬ್ಲೇಡ್‌ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಕುಮಾರಸ್ವಾಮಿ ಅವರ ನಿವಾಸದ ಬಳಿ ನಡೆದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು (ಜ.21): ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರೂ ಆಗಿರುವ ಹೆಚ್,ಡಿ. ಕುಮಾರಸ್ವಾಮಿ ಅವರನ್ನು ನೋಡಲೇಬೇಕು ಎಂದು ಎರಡು ದಿನಗಳಿಂದ ಪ್ರಯತ್ನ ಮಾಡುತ್ತಿದ್ದ ಅಭಿಮಾನಿಯೊಬ್ಬ, ತನಗೆ ಭದ್ರತಾ ಸಿಬ್ಬಂದಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಬಿಡುತ್ತಿಲ್ಲವೆಂದು ಮನನೊಂದು ಬ್ಲೇಡ್‌ನಿಂದ ತನ್ನ ಕೈ ಕೊಯ್ದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದೀಗ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಕುಮಾರಸ್ವಾಮಿ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಬ್ಲೇಡ್ ನಿಂದ ಕೈ ಕುಯ್ದುಕೊಂಡಿದ್ದಾನೆ. ಪ್ರಕರಣ ಸಂಬಂಧ ಜೆ.ಪಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಹೀಗೆ ಕೇಂದ್ರ ಸಚಿವರ ಮನೆ ಮುಂದೆ ಕೈ ಕೊಯ್ದುಕೊಂಡ ವ್ಯಕ್ತಿ ಮಹಾದೇವ ಎಂಬಾತನ ಮೇಲೆ ಕುಮಾರಸ್ವಾಮಿ ಮನೆಯ ಭದ್ರತೆಗೆ ನಿಯೋಜನೆ ಮಾಡಿದ್ದ ಪೊಲೀಸ್ ಸೆಕ್ಯೂರಿಟಿ ಸಿಬ್ಬಂದಿ ವೆಂಕಟಾಚಲಪತಿ ಅವರು ನೀಡಿದ ದೂರಿನ ಆಧಾರದಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಕಳೆದ ಜ.12ರಂದು ಮಧ್ಯಾಹ್ನ 3.30ರ ಸುಮಾರಿಗೆ ಕುಮಾರಸ್ವಾಮಿ ಅವರ ಜೆಪಿ ನಗರದ ನಿವಾಸಕ್ಕೆ ಮಹಾದೇವ ಎನ್ನುವ ವ್ಯಕ್ತಿ ಬಂದಿದ್ದಾರೆ. ಆಗ ತಾನು ಬರುವಾಗಲೇ ಮದ್ಯ ಸೇವನೆ ಮಾಡಿ ಬಂದಿದ್ದು, ನಾನು ಕುಮಾರಣ್ಣ ಅಭಿಮಾನಿ, ಈಗಲೇ ಭೇಟಿ ಮಾಡಬೇಕು ಎಂದು ಭದ್ರತಾ ಸಿಬ್ಬಂದಿ ಮುಂದೆ ಹೇಳಿದ್ದಾನೆ. ಮದ್ಯ ಸೇವಿಸಿ ಬಂದು ಇಲ್ಲಿ ಗಲಾಟೆ ಮಾಡುತ್ತಿದ್ದಾನೆ ಎಂದು ತಿಳಿದು, ಆತನನ್ನು ನಾಳೆ ಬಾ ಎಂದು ವಾಪಸ್ ಕಳಿಸಿದ ಭದ್ರತಾ ಸಿಬ್ಬಂದಿ ಆತನನ್ನು ಸಾಗ ಹಾಕಿದ್ದಾರೆ.
ಇದನ್ನೂ ಓದಿ: ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ಕಾನೂನು ಸುವ್ಯವಸ್ಥೆಯ ಗ್ಯಾರೆಂಟಿ ಎಲ್ಲಿದೆ?
ಆದರೆ, ಮಧ್ಯಾಹ್ನ ಅಲ್ಲಿಂದ ವಾಪಸ್ ಹೋಗಿದ್ದ ವ್ಯಕ್ತಿ ಮಹದೇವ, ಪುನಃ ಸಂಜೆ 6 ಗಂಟೆಗೆ ಕುಮಾರಸ್ವಾಮಿ ಅವರ ಮನೆಯ ಗೇಟಿನ ಮುಂದೆ ಬಂದು ನಿಂತಿದ್ದಾನೆ. ಆಗಲೂ ಭದ್ರತಾ ಸಿಬ್ಬಂದಿಗೆ ನನಗೆ ಅರ್ಜೆಂಟ್ ಇದೆ ಕುಮಾರಣ್ಣನನ್ನು ನೋಡಬೇಕು ಎಂದು ಹಠ ಮಾಡಿದ್ದಾನೆ. ಈತ ಮದ್ಯವ್ಯಸನಿ ಎಂದು ಆತನನ್ನು ಒಳಗೆ ಬಿಡಲು ಭದ್ರತಾ ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಹದೇವ ನೀವು ನನ್ನನ್ನು ಕುಮಾರಣ್ಣನ ಭೇಟಿಯಾಗಲು ಒಳಗೆ ಬಿಡುತ್ತಲ್ಲ ಅಲ್ಲವೇ ನಿಮಗೆ ಹೇಗೆ ಪಾಠ ಕಲಿಸಬೇಕು ನನಗೆ ಗೊತ್ತಿದೆ ಎನ್ನುತ್ತಲೇ ಜೇಬಿನಲ್ಲಿದ್ದ ಬ್ಲೆಡ್ ಅನ್ನು ಹೊರಗೆ ತೆಗೆದು ತನ್ನ ಕೈ ಕೊಯ್ದುಕೊಂಡಿದ್ದಾನೆ.
ಕೈ ಕೊಯ್ದುಕೊಂಡು ತೀವ್ರ ರಕ್ತಸ್ತಾವದಿಂದ ಬಳಲುತ್ತಿದ್ದ ವ್ಯಕ್ತಿ ಮಹದೇವನನ್ನು ಭದ್ರತಾ ಸಿಬ್ಬಂದಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆತನಿಗೆ ಚಿಕಿತ್ಸೆಯನ್ನೂ ಕೊಡಿಸಿದ್ದಾರೆ. ಆದರೆ, ಸಚಿವರ ಮನೆ ಮುಂದೆ ಬಂದು ಹೀಗೆ ಗಲಾಟೆ ಮಾಡಿ, ಅನುಚಿತವಾಗಿ ವರ್ತಿಸಿದ್ದರಿಂದ ಆತನ ವಿರುದ್ಧ ಸ್ಥಳೀಯ ಜೆ.ಪಿ. ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಗಾಯಾಳು ಮಹದೇವನನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದೀಗ ಘಟನೆಗೆ ಕುರಿತಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಅಭಿವೃದ್ಧಿಗೆ ಕರ್ನಾಟಕ ಸರ್ಕಾರದಿಂದ ಸಹಕಾರ ಇಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ
