ಕಳೆದ ಐದು ದಿನಗಳಲ್ಲಿ ರಾಜ್ಯದಲ್ಲಿ 6 ದರೋಡೆ ಪ್ರಕರಣಗಳು ನಡೆದಿದ್ದು, ಬೆಂಗಳೂರಿನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಕೂಲಿ ಕಾರ್ಮಿಕರ ಮೇಲೆ ಹಲ್ಲೆ ನಡೆದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ.

ಬೆಂಗಳೂರು (ಜ.21): ರಾಜ್ಯದಲ್ಲಿ ಕಳೆದ ಐದು ದಿನಗಳ ಅಂತರದಲ್ಲಿ ಒಟ್ಟು 6 ದರೋಡೆಗಳು ನಡೆದಿವೆ. ಬೆಂಗಳೂರಿನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಕೂಲಿ ಕಾರ್ಮಿಕರನ್ನು ಕಟ್ಟಿಹಾಕಿ ಥಳಿಸಲಾಗುತ್ತಿದೆ. ಸ್ವಾಮಿ ಸಿಎಂ ಸಿದ್ದರಾಂಯ್ಯನವರೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಪಂಚ ಗ್ಯಾರಂಟಿ ಕೊಟ್ಟು ಅಧಿಕಾರಕ್ಕೆ ಬಂದಿರುವ ನಿಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆಯ ಗ್ಯಾರೆಂಟಿ ಎಲ್ಲಿದೆ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಎಕ್ಸ್ ಪೋಸ್ಟ್‌ನಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ಕೆ.ಆರ್.ಮಾರುಕಟ್ಟೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಸುಲಿಗೆ ನಡೆದಿದೆ. ವಿಜಯಪುರದಲ್ಲಿ ಮೂವರು ಕೂಲಿ ಕಾರ್ಮಿಕರನ್ನು ಕಟ್ಟಿ ಹಾಕಿ ಅಮಾನವೀಯ ಹಲ್ಲೆಯಾಗಿದೆ. ಬೀದರ್, ಮಂಗಳೂರು, ಚಿತ್ರದುರ್ಗ, ಮೈಸೂರು, ಆನೇಕಲ್, ಹುಬ್ಬಳ್ಳಿಯಲ್ಲಿ - 5 ದಿನಗಳ ಅಂತರದಲ್ಲಿ ಒಟ್ಟು 6 ದರೋಡೆ, ಸುಲಿಗೆ, ಕಳ್ಳತನ ಪ್ರಕರಣಗಳು ನಡೆದಿವೆ. 

ಸ್ವಾಮಿ ಸಿಎಂ ಸಿದ್ದರಾಂಯ್ಯನವರೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಜನಸಾಮಾನ್ಯರು ಭಯಭೀತರಾಗಿ ದಿನಕಳೆಯುವ ದುಸ್ಥಿತಿ ಬಂದಿದೆ. ಹೆಣ್ಣುಮಕ್ಕಳು ಸುರಕ್ಷಿತವಾಗಿ ಓಡಾಡುವ ವಾತಾವರಣ ಇಲ್ಲದಂತಾಗಿದೆ. ಕುರ್ಚಿಗೆ ಅಂಟಿಕೊಂಡು ಇನ್ನೆಷ್ಟು ದಿನ ಇಂತಹ ಕೆಟ್ಟ ಸರ್ಕಾರ ನಡೆಸುತ್ತೀರಿ. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಈ ದುರಾಡಳಿತದಿಂದ, ಆರಾಜಕತೆಯಿಂದ ರಾಜ್ಯದ ಜನತೆಗೆ ಮುಕ್ತಿ ನೀಡಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಯೇ ನಿಜವಾದ ಗಾಂಧಿ; ಇಂದಿರಾ, ರಾಹುಲ್ ನಕಲಿ ಗಾಂಧಿಗಳು; ಆರ್. ಅಶೋಕ

ಮತ್ತೊಂದೆಡೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಕೇವಲ ಗುರುವಾರದ ಸರ್ಕಾರವಾಗಿದ್ದು, ಸಂಪುಟ ಸಭೆ ನಡೆಯುವ ದಿನ ಮಾತ್ರ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುತ್ತಾರೆ. ಪರಿಸ್ಥಿತಿ ಹೀಗಿರುವಾಗ ಇನ್ನು ಬೇರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ತಾನೇ ಏನು ಮಾಡುತ್ತಾರೆ? ಕೊಠಡಿಗೆ ಬೀಗ, ಸಿಬ್ಬಂದಿ ಗೈರು! ಇದು ಕಾಂಗ್ರೆಸ್ ಸರ್ಕಾರದ ಹೊಸ ಘೋಷವಾಕ್ಯ! ಆಗಿದೆ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Scroll to load tweet…