ಅಭಿವೃದ್ಧಿಯ ದಿಕ್ಕಿನತ್ತ ಅರ್ಥ ವ್ಯವಸ್ಥೆ ಸಾಗುತ್ತಿದೆ, ಭಾರತ ವಿಶ್ವದಲ್ಲೇ ಮುಂಚೂಣಿಯಲ್ಲಿರಬೇಕು: ಅಮಿತ್‌ ಶಾ

ಬೆಂಗಳೂರು(ಆ.05): ಆತ್ಮನಿರ್ಭರತೆ ಮತ್ತು ಮೇಕ್‌ ಇನ್‌ ಇಂಡಿಯಾ ಜತೆಗೆ ಭಾರತದ ಅರ್ಥ ವ್ಯವಸ್ಥೆಯನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಕೊಂಡೊಯುತ್ತಿದ್ದು, ದೇಶದ ಅರ್ಥವ್ಯವಸ್ಥೆಯನ್ನು ಲಘುವಾಗಿ ನೋಡುತ್ತಿದ್ದವರ ಮನಸ್ಥಿತಿ ಬದಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ನಗರದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟಗಳ ವತಿಯಿಂದ ಆಯೋಜಿಸಿದ್ದ ‘ಸಂಕಲ್ಪದಿಂದ ಸಿದ್ಧಿ’ ಸಮ್ಮೇಳನದ ಮೂರನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಅಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಇದರ ಹಿಂದೆ ಒಳ್ಳೆಯ ಉದ್ದೇಶ ಇದೆ. ಯುವ ಪೀಳಿಗೆಗೆ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸಬೇಕಿದೆ. ದೇಶದ ವಿಕಾಸದಲ್ಲಿ ಯುವ ಪೀಳಿಗೆ ಪಾತ್ರ ಅನಿವಾರ್ಯ. 75 ವರ್ಷದ ದೇಶದ ಸಾಧನೆಗಳನ್ನು ಜನತೆಗೆ ತಲುಪಿಸುವ ಉದ್ದೇಶವನ್ನು ಹೊಂದಲಾಗಿದೆ. ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮಾಡಲಾಗುತ್ತಿದ್ದು, ಮುಂದೆ ಶತಮಾನೋತ್ಸವವನ್ನು ಸಹ ಆಚರಿಸುತ್ತೇವೆ. ಮುಂದಿನ ಅವಧಿಯಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ಭಾರತ ಮುಂದಿರಬೇಕು. ಜಗತ್ತನ್ನು ಮುನ್ನಡೆಸುವ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿರಬೇಕು. ಇದನ್ನು ಸಾಕಾರಗೊಳಿಸಲು ಎಲ್ಲರೂ ಉಳಿದ 25 ವರ್ಷ ಶ್ರಮಿಸಬೇಕಿದೆ ಎಂದು ಹೇಳಿದರು.

ಪ್ರಾಥಮಿಕ ಕೃಷಿ ಸಾಲ ಸಂಸ್ಥೆಗಳಲ್ಲಿ ಪೆಟ್ರೋಲಿಯಂ, ಪಡಿತರ ಸೇಲ್‌?: ಅಮಿತ್‌ ಶಾ

ಕಾರ್ಯಕ್ರಮದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ.ಕಿಶನ್‌ ರೆಡ್ಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಭಾರತೀಯ ಕೈಗಾರಿಕಾ ಒಕ್ಕೂಟ ಮಹಾನಿರ್ದೇಶಕ ಚಂದ್ರಜಿತ್‌ ಬ್ಯಾನರ್ಜಿ, ಜೆಟ್‌ಲೈನ್‌ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ರಾಜನ್‌ ನವನಿ, ಐಟಿಸಿ ಲಿಮಿಟೆಡ್‌ ಅಧ್ಯಕ್ಷ ಸಂಜೀವ್‌ ಪುರಿ ಇತರರು ಉಪಸ್ಥಿತರಿದ್ದರು.

ಆರ್‌ ಅಂಡ್‌ ಡಿ ನೀತಿಗೆ ಅನುಮೋದನೆ: ಸಿಎಂ

ರಾಜ್ಯದಲ್ಲಿ ಆರ್‌ ಅಂಡ್‌ ಡಿ (ಸಂಶೋಧನೆ ಮತ್ತು ಅಭಿವೃದ್ಧಿ) ನೀತಿಗೆ ಸಚಿವ ಸಂಪುಟದ ಅನುಮೋದನೆ ದೊರೆತಿದ್ದು, ಗ್ಯಾರೇಜ್‌ ಸಂಶೋಧನೆಯಿಂದ ಹಿಡಿದು ಸಾಂಸ್ಥಿಕ ಸಂಶೋಧನೆವರೆಗೆ ಪ್ರೋತ್ಸಾಹ, ಸಹಕಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಲ್ಲಿ ಜೆನೋಮ್ಯಾಟಿಕ್ಸ್‌ನಿಂದ ಏರೋಸ್ಪೇಸ್‌ವರೆಗೆ 400 ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ. ಬೆಂಗಳೂರು ಹೊರತುಪಡಿಸಿದರೆ ವಿಶ್ವದ ಯಾವುದೇ ನಗರದಲ್ಲಿ ಈ ಸಂಖ್ಯೆಯ ಆರ್‌ ಅಂಡ್‌ ಡಿ ಕೇಂದ್ರಗಳನ್ನು ಕಾಣಲು ಸಾಧ್ಯವಿಲ್ಲ. ರಾಜ್ಯದಲ್ಲಿ ಉದ್ಯೋಗ ನೀತಿಯನ್ನು ರೂಪಿಸಲಾಗಿದ್ದು, ಉದ್ಯೋಗದಾತ ಉದ್ಯಮಿಗಳಿಗೆ ಪ್ರೋತ್ಸಾಹಕಗಳನ್ನು ನೀಡಲಾಗುವುದು. ರಾಜ್ಯಕ್ಕೆ 110 ಲಕ್ಷ ಕೋಟಿ ರು. ವಿದೇಶಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.