Asianet Suvarna News Asianet Suvarna News

ಕೇಂದ್ರ ಸರ್ಕಾರ ತೆರಿಗೆ ವಿಚಾರದಲ್ಲಿ ಮಾತ್ರವಲ್ಲ, ನೀರಿನ ಸಮಸ್ಯೆಯಲ್ಲೂ ಅನ್ಯಾಯ ಮಾಡಿದೆ: ಸಚಿವ ಕೃಷ್ಣ ಬೈರೇಗೌಡ

ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕವಾಗಿದ್ದರೂ, ಅತಿ ಕಡಿಮೆ ಅನುದಾನ ಪಡೆಯುತ್ತಿದೆ. ನಮ್ಮ ರಾಜ್ಯಕ್ಕೆ ತೆರಿಗೆ ವಿಚಾರದಲ್ಲಿ ಮಾತ್ರವಲ್ಲ, ನೀರಿನ ಸಮಸ್ಯೆಯ ವಿಚಾರಗಳಲ್ಲಿಯೂ ಅನ್ಯಾಯವಾಗಿದೆ.

Union govt not only unfair on taxation but also on water issue said Minister Krishna Byre Gowda sat
Author
First Published Apr 13, 2024, 5:51 PM IST

ಬೆಂಗಳೂರು (ಏ.13): ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕವಾಗಿದ್ದರೂ, ಅತಿ ಕಡಿಮೆ ಅನುದಾನ ಪಡೆಯುತ್ತಿದೆ. ನಮ್ಮ ರಾಜ್ಯಕ್ಕೆ ತೆರಿಗೆ ವಿಚಾರದಲ್ಲಿ ಮಾತ್ರವಲ್ಲ, ನೀರಿನ ಸಮಸ್ಯೆಯ ವಿಚಾರಗಳಲ್ಲಿಯೂ ಅನ್ಯಾಯವಾಗಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ನಮ್ಮ ಎಂಪಿಗಳನ್ನು ಹಾಗೂ ಆಡಳಿತ ಮಾಡಲು ನಮ್ಮ ತೆರಿಗೆ ಹಣ ತಗೆದುಕೊಳ್ಳುತ್ತಾರೆ.ಆದರೆ ನಮ್ಮನ್ನ‌ ಕಡೆಗಣಿಸುತ್ತಿದ್ದಾರೆ. ನಮ್ಮ ರಾಜ್ಯದಕ್ಕೆ ಉಂಡು ಹೋದಾ ಕೊಂಡು ಹೋದಾ ಪರಿಸ್ಥಿತಿ ಬಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ನಾವು ಕೆಲ ಪ್ರಶ್ನೆಗಳನ್ನ ಕೇಳುತ್ತೇವೆ. ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ಹಾಗೆಯೇ ಕೇಂದ್ರದ ಅತಿ ಕಡಿಮೆ ಅನುದಾನ ಬರೋದು ಕರ್ನಾಟಕಕ್ಕೆ.. ನಮ್ಮ ತೆರಿಗೆ ಹಣ ಹಾಗೂ ನಮ್ಮ ರಾಜ್ಯದಿಂದ ಎಂಪಿಗಳನ್ನು ತಗೆದುಕೊಳ್ಳುತ್ತಾರೆ. ಆದ್ರೆ ನಮ್ಮನ್ನ‌ ಕಡೆಗಣಿಸುತ್ತಿದ್ದಾರೆ. ಉಂಡು ಹೋದಾ ಕೊಂಡು ಹೋದಾ ಪರಿಸ್ಥಿತಿ ಬಂದಿದೆ. ಕರ್ನಾಟಕಕ್ಕೆ ತೆರಿಗೆ ಕಡಿಗಣನೆ ಅಲ್ಲದೇ, ನೀರಿನ ಸಮಸ್ಯೆಯಲ್ಲೂ ನ್ಯಾಯ ಸಿಕ್ಕಿಲ್ಲ ಎಂದು ಹೇಳಿದರು.

ದೇಶದಲ್ಲಿ ಅತಿ ಹೆಚ್ಚು ಖುಷ್ಕಿ ಪ್ರದೇಶದ ಜಮೀನು ಹೊಂದಿರುವುದು ಕರ್ನಾಟಕ. ಅಂದರೆ, ಮಳೆ ಮೇಲೆ ಹೆಚ್ಚು ಅವಲಂಬಿತ ರಾಜ್ಯವಾಗಿದೆ. ಕೃಷಿಗಾಗಿ ಅತಿಹೆಚ್ಚು ಮಳೆ ಮತ್ತು ನದಿ ನೀರಿನ ಮೇಲೆ ಅವಲಂಬಿತವಾಗಿರುವ ರಾಜ್ಯಕ್ಕೆ ನದಿ ನೀರಿನ ವಿಚಾರದಲ್ಲೂ ಕೇಂದ್ರ ಅನ್ಯಾಯ ಮಾಡಿದೆ. ಪ್ರಧಾನಿ ಮೋದಿಯವರು ನಾಳೆ ರಾಜ್ಯಕ್ಕೆ ಬರ್ತಿದ್ದಾರೆ. ಅವರಿಗೆ ನಾವು ಕೆಲ ಪ್ರಶ್ನೆಗಳನ್ನ ಕೇಳ್ತಿದ್ದೇವೆ ಅದಕ್ಕೆ ಅವರು ಉತ್ತರಿಸಬೇಕು ಎಂದು ಪಟ್ಟು ಹಿಡಿದರು.

2023ರ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಭದ್ರಾ ಯೋಜನೆಗೆ 5,300 ಕೋಟಿ ಘೋಷಣೆ ಮಾಡಲಾಗಿತ್ತು. ಯೋಜನೆ ಘೋಷಣೆ ಮಾಡಿದರೂ ಯಾಕೆ ಹಣ ಕೊಟ್ಟಿಲ್ಲ, ಇದಕ್ಕೆ ಉತ್ತರಿಸಿ. ರಾಜ್ಯ ಸರ್ಕಾರದಿಂದ ಭದ್ರಾ ಯೋಜನೆಯ ಹಣ ಬಿಡುಗಡೆಗೆ ಪತ್ರ ಬರೆದರು ಉತ್ತರವಿಲ್ಲ. ರಾಜ್ಯದ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಭೇಟಿಯಾದರೂ ಹಣ ನೀಡಲಿಲ್ಲ. ಸ್ವತಃ ಬಿಜೆಪಿ ಸಚಿವ ನಾರಾಯಣಸ್ವಾಮಿ ಪತ್ರ ಬರೆದರೂ ಸಹ ಭದ್ರಾ ಯೋಜನೆಗೆ ಹಣ ಕೊಡಲಿಲ್ಲ. ಯೋಜನೆ ಘೋಷಣೆ ಮಾಡಿ ಯಾಕೆ ನಯಾ ಪೈಸಾ ಕೊಡಲಿಲ್ಲ. ನಾಳೆ ನೀವು ಭದ್ರಾ ಯೋಜನೆಗೆ ಹಣ ಘೋಷಣೆ ಮಾಡ್ತೀರಾ? ಇಲ್ಲ ಅಂದ್ರೆ ನಾವು ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದೇವೆ, ಮೂರು ನಾಮ ಹಾಕಿದ್ದೇವೆ ಅಂತ ಸಾರ್ವಜನಿಕವಾಗಿ ಒಪ್ಪಿಕೊಳ್ಳಿ ಎಂದು ಸವಾಲು ಹಾಕಿದರು.

ಈಗಾಗಲೇ ಮಹದಾಯಿ ನದಿ ನೀರು ಹಂಚಿಕೆಯಾಗಿದೆ. ಆದರೆ, ಈ ಯೋಜನೆಗೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಮಹದಾಯಿ ಯೋಜನೆ ಕೆಲಸ ಮಾಡಲು ಅನುಮತಿ ಕೊಟ್ಟಿಲ್ಲ. ನಾಲ್ಕು ವರ್ಷಗಳಿಂದ ಅನುಮತಿ ಕೊಟ್ಟಿಲ್ಲ. ಈ ಮೂಲಕ ನಮ್ಮ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನ ತಪ್ಪಿಸಿದೆ. ನಮ್ಮ ರಾಜ್ಯದ ಕಿತ್ತೂರು ಕರ್ನಾಟಕ ಭಾಗದ ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ ಎಂಬ ದುರುದ್ದೇಶದಿಂದ ಕೇಂದ್ರ ಸರ್ಕಾರದ  ಪರಿಸರ ಇಲಾಖೆ ಒಂದು ಅನುಮತಿಗಾಗಿ ನಾಲ್ಕು ವರ್ಷಗಳಿಂದ ತಡೆ ಹಿಡಿದಿದ್ದಾರೆ. ನಾಳೆ ಮೋದಿಯವರು ಇದಕ್ಕೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು.

ಪ್ರಧಾನಿಗಳೇ ರಾಜ್ಯಕ್ಕೆ ಏಕಿಷ್ಟು ಅನ್ಯಾಯ ಮಾಡ್ತಿದ್ದೀರಾ?
ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಮಾತನಾಡಿ, ಘನವೆತ್ತ ಪ್ರಧಾನಿಗಳೇ ರಾಜ್ಯಕ್ಕೆ ಏಕಿಷ್ಟು ಅನ್ಯಾಯ ಮಾಡ್ತಿದ್ದೀರಾ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪರಿಹಾರ ಹಣ ಸಮರ್ಪಕವಾಗಿ ನೀಡಿಲ್ಲ. ರಾಜ್ಯಕ್ಕೆ ಸುಮಾರು 1.90 ಲಕ್ಷ ಕೋಟಿ ರೂ. ಹಣ ಬರಬೇಕಿದೆ ಅದನ್ನ ಕೊಟ್ಟಿಲ್ಲ. ಬರ ಪರಿಹಾರ ಹಣ ಒಂದು ರೂಪಾಯಿ ಕೊಟ್ಟಿಲ್ಲ. ಕುಡಿಯುವ ನೀರಿನ ಮೇಕೆದಾಟು ಯೋಜನೆಗೆ ಅನುಮತಿ ನೀಡಿಲ್ಲ. ಮಹಾದಾಯಿ ಯೋಜನೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಇಷ್ಟೆಲ್ಲ ಅನ್ಯಾಯ ಆಗಿದ್ದರೂ, ಯಾವ ಮುಖ ಹೊತ್ತು ರಾಜ್ಯದಲ್ಲಿ ಪ್ರಚಾರ ಮಾಡ್ತೀರಿ. ರಾಜ್ಯದ ಜನರಿಗೆ ಈ ಬಗ್ಗೆ ಉತ್ತರ ನೀಡಿ ಎಂದು ಸವಾಲೆಸೆದರು.

Follow Us:
Download App:
  • android
  • ios