ಕರ್ನಾಟಕ ಹೈಕೋರ್ಟ್‌ಗೆ ಹೆಚ್ಚುವರಿಯಾಗಿ ಐವರು ನ್ಯಾಯಮೂರ್ತಿಗಳನ್ನ ನೇಮಕ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.   ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಜುಲೈ 19ರಂದು ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ಬೆಂಗಳೂರು, (ಆಗಸ್ಟ್.12): ಕರ್ನಾಟಕ ಹೈಕೋರ್ಟ್‌ಗೆ ಹೆಚ್ಚುವರಿಯಾಗಿ ಐವರು ನ್ಯಾಯಮೂರ್ತಿಗಳನ್ನ ನೇಮಕ ಮಾಡಿ ಕೇಂದ್ರ ಸರ್ಕಾರ ಇಂದು(ಶುಕ್ರವಾರ) ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಟಿ ಜಿ ಶಿವಶಂಕರೇಗೌಡ ಮತ್ತು ಹಾಲಿ ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಧೀಶರಾಗಿರುವ ಚಂದ್ರಶೇಖರ ಮೃತ್ಯುಂಜಯ ಜೋಶಿ ಹಾಗೂ ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಅನಿಲ್‌ ಭೀಮಸೇನ ಕಟ್ಟಿ ಸೇರಿದಂತೆ ಐವರನ್ನು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ.

ನ್ಯಾಯಮೂರ್ತಿ, ನ್ಯಾಯಾಂಗ ಅಧಿಕಾರಿಗಳಿಗೆ ರಕ್ಷಣೆ ಅಗತ್ಯ: ಹೈಕೋರ್ಟ್‌ ನ್ಯಾಯಮೂರ್ತಿ

ಐವರ ನ್ಯಾಯಾಧೀಶರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಜುಲೈ 19ರಂದು ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅದರಂತೆ ಐವರು ನ್ಯಾಯಮೂರ್ತಿಗಳನ್ನ ನೇಮಿಸಿದೆ.

ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಗುರುಸಿದ್ದಯ್ಯ ಬಸವರಾಜ ಮತ್ತು ರಾಜ್ಯ ಕೈಗಾರಿಕಾ ನ್ಯಾಯ ಮಂಡಳಿಯ ಮೇಲುಸ್ತುವಾರಿ ಅಧಿಕಾರಿ ಹಾಗೂ ಹಿಂದಿನ ಧಾರವಾಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿದ್ದ ಉಮೇಶ್‌ ಮಂಜುನಾಥ್‌ ಭಟ್‌ ಅಡಿಗ ಅವರನ್ನೂ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿದೆ.

ನ್ಯಾ. ಅನಿಲ್‌ ಕಟ್ಟಿ ಅವರು ತಾವು ಅಧಿಕಾರ ವಹಿಸಿಕೊಳ್ಳುವ ದಿನದಿಂದ 2024ರ ಏಪ್ರಿಲ್‌ 16ರವರೆಗೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿರಲಿದ್ದಾರೆ. ನ್ಯಾಯಾಧೀಶರಾದ ಜಿ ಬಸವರಾಜ, ಚಂದ್ರಶೇಖರ ಮೃತ್ಯುಂಜಯ ಜೋಶಿ, ಉಮೇಶ್‌ ಮಂಜುನಾಥ್‌ಭಟ್‌ ಅಡಿಗ ಮತ್ತು ಟಿ ಜಿ ಶಿವಶಂಕರೇಗೌಡ ಅವರು ಅಧಿಕಾರವಹಿಸಿಕೊಂಡ ದಿನದಿಂದ ಎರಡು ವರ್ಷಗಳವರೆಗೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿರಲಿದ್ದಾರೆ. ಸಂವಿಧಾನದ 224ನೇ ವಿಧಿಯ ಕಲಂ (1)ರ ಅಡಿ ದೊರೆತಿರುವ ಅಧಿಕಾರ ಬಳಸಿ ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.