ಹುಬ್ಬಳ್ಳಿ(ಮಾ.26): ಧಾರವಾಡ ಕಟ್ಟಡ ದುರಂತದ ಬೆನ್ನಲ್ಲೇ, ಹುಬ್ಬಳ್ಳಿಯಲ್ಲೂ ನಿರ್ಮಾಣ ಹಂತದ ಕಟ್ಟಡದ ಗೋಡೆಯೊಂದು ಕುಸಿದಿದೆ.

ನಗರದ ಕೇಶ್ವಾಪೂರ ಬಳಿ ನಿರ್ಮಾಣ ಹಂತದ ಕಟ್ಟಡದ ಗೋಡೆ ಪಕ್ಕದ ಮನೆಯ ಮೇಲೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಘಟನೆ ನಡೆದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಇಲ್ಲಿನ ಮೊಹಮ್ಮದ್ ಅಲಿ ಮಕಾಂದಾರ್ ಎಂಬುವವರಿಗೆ ಸೇರಿದ ಮನೆ ಮೇಲೆ ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದಿದೆ. ಘಟನೆಗೆ ಬಿಲ್ಡರ್ ರಾಹು ಹಿರೇಮಠ ಅವರ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಸದ್ಯ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.