ಬೆಂಗಳೂರು (ಜೂ. 27): ಅತ್ಯಾಚಾರ ನಡೆದ ನಂತರ ಸುಸ್ತಾಗಿ ನಿದ್ರಿಸಿದ ಕಾರಣಕ್ಕೆ ದೂರು ನೀಡಲು ವಿಳಂಬವಾಯಿತು ಎಂಬುದಾಗಿ ದೂರಿನಲ್ಲಿ ಮಹಿಳೆ ನೀಡಿದ ಕಾರಣವನ್ನು ಒಪ್ಪದ ಹೈಕೋರ್ಟ್‌, ಬಲತ್ಕಾರದ ನಂತರ ಸುಸ್ತಾಗಿ ನಿದ್ದೆ ಮಾಡುವುದು ಭಾರತೀಯ ಮಹಿಳೆಯ ಸಹಜ ಪ್ರತಿಕ್ರಿಯೆಯಲ್ಲ ಎಂದು ಅಭಿಪ್ರಾಯಪಟ್ಟು ಅತ್ಯಾಚಾರ ಪ್ರಕರಣದ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.

ನಗರದ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಆರೋಪಿ ರಾಕೇಶ್‌ (27) ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಸಚಿವ ಸುರೇಶ್ ಕುಮಾರ್ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಜನಾಧಿಕಾರ ಸಂಘರ್ಷ ಪರಿಷತ್ ಅಧ್ಯಕ್ಷ

ಅತ್ಯಾಚಾರದಂತಹ ಗಂಭೀರ ಆರೋಪವಿದೆ ಎಂಬ ಒಂದೇ ಕಾರಣಕ್ಕೆ ಆರೋಪಿಯ ಸ್ವಾತಂತ್ರ್ಯ ನಿರ್ಬಂಧಿಸಲಾಗದು. ಮಹಿಳೆಯ ಮಾಲಿಕತ್ವದ ಕಂಪನಿಯಲ್ಲಿ ಎರಡು ವರ್ಷಗಳಿಂದ ಉದ್ಯೋಗ ಮಾಡುತ್ತಿರುವ ಆರೋಪಿ ಲೈಂಗಿಕ ಸಂಪರ್ಕ ಬೆಳೆಸಲು ಒತ್ತಾಯಿಸಿದ ಕೂಡಲೇ ಕೋರ್ಟ್‌ಗೆ ಮೊರೆ ಹೋಗಿಲ್ಲ. ಆರೋಪಿಯೊಂದಿಗೆ ತನ್ನ ಕಚೇರಿಗೆ ತಡರಾತ್ರಿ 11ಕ್ಕೆ ಹೋಗಿರುವುದಕ್ಕೆ ಹಾಗೂ ಆರೋಪಿ ಜೊತೆಗೆ ಮದ್ಯ ಸೇವಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸದೇ ಇರುವುದಕ್ಕೆ ಮಹಿಳೆ ಸರಿಯಾದ ವಿವರಣೆ ನೀಡಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಬೆಳೆಗ್ಗೆಯವರೆಗೆ ತನ್ನೊಂದಿಗೆ ಇರಲು ಆರೋಪಿಗೆ ಅನುಮತಿ ಕೊಟ್ಟಿದ್ದಕ್ಕೆ ಮಹಿಳೆ ಸೂಕ್ತ ಕಾರಣ ನೀಡಿಲ್ಲ. ಇನ್ನು ಬಲತ್ಕಾರ ನಡೆದ ನಂತರ ಸುಸ್ತಾಗಿ ನಿದ್ರಿಸಿದೆ ಎಂದು ದೂರಿನಲ್ಲಿ ಮಹಿಳೆ ಹೇಳುತ್ತಾರೆ. ತಮ್ಮ ಮೇಲೆ ಅತ್ಯಾಚಾರ ನಡೆದಾಗ ಬಸವಳಿದು ನಿದ್ದೆ ಮಾಡುವುದು ಭಾರತೀಯ ಮಹಿಳೆಯ ಸಹಜ ಪ್ರತಿಕ್ರಿಯೆಯಲ್ಲ. ಹೀಗಾಗಿ, ದೂರುದಾರ ಮಹಿಳೆಯ ಆರೋಪಗಳನ್ನು ಈ ಹಂತದಲ್ಲಿ ನಂಬಲು ಕಷ್ಟವಾಗಿದೆ ಎಂದು ತಿಳಿಸಿದ ನ್ಯಾಯಪೀಠ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದೆ.

ಮಲಗಿದ ಭಂಗಿಯಲ್ಲಿ ವಕೀಲ ಸುಪ್ರೀಂ ವಿಚಾರಣೆಗೆ ಹಾಜರು!

ಆರೋಪಿ ಒಂದು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌, ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಒದಗಿಸಬೇಕು. ಸಾಕ್ಷ್ಯ ನಾಶಪಡಿಸಬಾರದು, ತನಿಖೆಗೆ ಸಹಕರಿಸಬೇಕು, ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೇ ವ್ಯಾಪ್ತಿಯಿಂದ ಹೊರಹೋಗಬಾರದು. ಎರಡು ವಾರಕ್ಕೊಮ್ಮೆ ಪೊಲೀಸ್‌ ಠಾಣೆಗೆ ತೆರಳಿ ಸಹಿ ಹಾಕಬೇಕು ಎಂಬ ಷರತ್ತು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಕರಣವೇನು?

ಪ್ರಕರಣದ ಸಂತ್ರಸ್ತೆ ಬೆಂಗಳೂರಿನಲ್ಲಿ ನಡೆಸುತ್ತಿರುವ ಎಚ್‌.ಆರ್‌.ಕಂಪನಿಯಲ್ಲಿ ಆರೋಪಿ ರಾಕೇಶ್‌ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಕಳೆದ ಮೇ 2ರಂದು ಮಹಿಳೆ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದ ಸಂತ್ರಸ್ತೆ, ಏ.22 ರಂದು ರಾಕೇಶ್‌ ತನ್ನೊಂದಿಗೆ ಕಾರಿನಲ್ಲಿ ಕಚೇರಿಗೆ ಬಂದು ತನ್ನ ಮೇಲೆ ಅತ್ಯಾಚಾರ ಎಸಗಿದ. ಏ.23ರಂದು ನನ್ನ ನಗ್ನ ಚಿತ್ರಗಳನ್ನು ನನಗೆ ಕಳುಹಿಸಿದ. ಇದನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದರು. ಪೊಲೀಸರು ರಾಕೇಶ್‌ ವಿರುದ್ಧ ಐಪಿಸಿ ಸೆಕ್ಷನ್‌ 376, 420, 506 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 66(ಬಿ) ಅಡಿ ದೂರು ದಾಖಲಿಸಿದ್ದರು. ನಿರೀಕ್ಷಣಾ ಜಾಮೀನು ಕೋರಿ ರಾಕೇಶ್‌ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್‌ ಕೋರ್ಟ್‌ ವಜಾಗೊಳಿಸಿತ್ತು.