ಉಮೇಶ್‌ ಕತ್ತಿ ವಿಧಿವಶ: 8 ಬಾರಿ ಶಾಸಕರಾಗಿ ಗೆದ್ದಿದ್ದ ವರ್ಣರಂಜಿತ ರಾಜಕಾರಣಿ

6 ಬಾರಿ ಪಕ್ಷ ಬದಲಾಯಿಸಿದ್ದ ಕತ್ತಿ ಸೋತಿದ್ದು 1 ಬಾರಿಯಷ್ಟೇ, ಹಲವು ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ ಧೀಮಂತ

Umesh Katti Who Won 8 Times as an MLA at Hukkeri in Belagavi grg

ಬೆಳಗಾವಿ(ಸೆ.07):  1960ರಂದು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಆಗರ್ಭ ಶ್ರೀಮಂತ ಕತ್ತಿ ಮನೆತನದಲ್ಲಿ ಉಮೇಶ ಅವರು ಹಿರಿಯ ಸಹಕಾರಿ ವಿಶ್ವನಾಥ ಹಾಗೂ ರಾಜೇಶ್ವರಿ ದಂಪತಿ ಜೇಷ್ಠ ಪುತ್ರನಾಗಿ ಜನಿಸಿದ್ದರು. ಸ್ವಗ್ರಾಮದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದು ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಹುಕ್ಕೇರಿ ಶಾಸಕರಾಗಿದ್ದ ತಂದೆ ವಿಶ್ವನಾಥ ಕತ್ತಿ ಅಕಾಲಿಕ ನಿಧನದ ಬಳಿಕ 1985ರಲ್ಲಿ ರಾಜಕಾರಣ ಪ್ರವೇಶಿಸಿ, ಹುಕ್ಕೇರಿ ವಿಧಾಸಭಾ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು.

ಇಲ್ಲಿಯವೆರೆಗೆ 8 ಬಾರಿ ಶಾಸಕರಾಗಿರುವ ಇವರು ಇಲ್ಲಿಯವರೆಗೆ ಆರು ಪಕ್ಷಗಳನ್ನು ಬದಲಿಸಿದ್ದಾರೆ. ಇಷ್ಟೆಲ್ಲ ಪಕ್ಷ ಬದಲಿಸಿಯೂ ಇವರು ಸೋತಿದ್ದು ಒಮ್ಮೆ ಮಾತ್ರ. ಮೇಲಿಂದ ಮೇಲೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಯ ಪ್ರಸ್ತಾಪ, ನಾನು ಡಿಸಿಎಂ ಅಲ್ಲ- ಸಿಎಂ ಸ್ಥಾನದ ಆಕಾಂಕ್ಷಿ ಎನ್ನುವುದು; ಹೀಗೆ ಆಗಾಗ ಸುದ್ದಿಗೆ ಗ್ರಾಸವಾಗುತ್ತಿದ್ದ ಉಮೇಶ ಕತ್ತಿ ವರ್ಣರಂಜಿತ ರಾಜಕಾರಣಿಯಾಗಿದ್ದರು.

RIP Umesh Katti ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ, ಸಿಎಂ ಬೊಮ್ಮಾಯಿ ಸಂತಾಪ!

ಅಪರೂಪದ ಧೀಮಂತ ರಾಜಕಾರಣಿ, ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ ಕತ್ತಿ, ಪ್ರಸ್ತುತ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅರಣ್ಯ ಖಾತೆ ಸಚಿವವರಾಗಿದ್ದರು.

ದೊಡ್ಡ ಸಾಹುಕಾರರೆಂದೇ ಖ್ಯಾತಿ: ಹಿರಿಯ ರಾಜಕಾರಣಿ ಉಮೇಶ ಕತ್ತಿ ಅವರು ಬಹುಮುಖ ಪ್ರತಿಭೆ. ಸದಾ ಚಟುವಟಿಕೆಯಿಂದ ಕೂಡಿದ ಪಾದರಸದಂತೆ ಕ್ರಿಯಾಶೀಲ ನಡೆ ಉಳ್ಳವರು. ಕೃಷಿ ಕುಟಂಬದಿಂದ ಬಂದ ಅವರಿಗೆ ರೈತರ ಸಮಸ್ಯೆಗಳ ಬಗ್ಗೆ ನಿಖರ ಅರಿವಿತ್ತು. ರೈತರ ಬಗ್ಗೆ ಅಪಾರ ಗೌರವ, ಸಹಾನುಭೂತಿ, ಅನುಕಂಪವಿದೆ. ಹೋರಾಟದ ಮನೋಭಾವ ಅವರ ಶಕ್ತಿ ಹೊಂದಿದ್ದ ಅವರು ನೇರ ನಡೆ-ನುಡಿಯ ವ್ಯಕ್ತಿತ್ವ ಹೊಂದಿದ್ದರು. ದೊಡ್ಡ ಸಾಹುಕಾರ ಎಂಬ ಖ್ಯಾತಿ ಪಡೆದಿದ್ದ ಅವರು ಮೂರು ದಶಕಗಳಿಂದ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಂಡು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಕೆಲಸ ಮಾಡುತ್ತ ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿ ಕೈಗೊಂಡಿದ್ದರು.

ಉಮೇಶ ಕತ್ತಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ 2011ರ ಮಾಚ್‌ರ್‍ 11ರಿಂದ 13ರವರೆಗೆ ವಿಶ್ವವೇ ಬೆರಗಾಗುವಂತೆ ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಏರ್ಪಡಿಸುವ ಮೂಲಕ ಎಲ್ಲಾ ಕನ್ನಡಿಗರಿಂದ ಭೇಷ್‌ ಎನಿಸಿಕೊಂಡಿದ್ದರು. ಉತ್ತರ ಕರ್ನಾಟಕ ಜನರ ಬಹು ನಿರೀಕ್ಷಿತ ಸುವರ್ಣ ವಿಧಾನಸೌಧ ಲೋಕಾರ್ಪಣೆ ಮಾಡಿ ಪ್ರಪ್ರಥಮ ಅಧಿವೇಶನ ಏರ್ಪಡಿಸಿ ಬೆಳಗಾವಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಿದ್ದ ಕೀರ್ತಿ ಅವರಿಗೆ ಸಲ್ಲುತ್ತಿದೆ.

ಸಹೋದರನ ಗೆಲುವಿನ ಸರದಾರ: ಉಮೇಶ ತಮ್ಮ ಸಂಘಟನಾ ಚಾತುರ್ಯ, ರಾಜಕೀಯ ಚಾಣಾಕ್ಷತೆ ಹೊಂದಿರುವ ಸಹೋದರ ರಮೇಶ ಕತ್ತಿ ಅವರನ್ನು 2009ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ತಮ್ಮ ಪುತ್ರ ನಿಖಿಲ ಮತ್ತು ಸಹೋದರ ರಮೇಶ ಅವರ ಪುತ್ರ ಪವನ ಕತ್ತಿ ಅವರನ್ನು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಜನಸೇವೆ ಮಾಡಲು ಅವಕಾಶ ನೀಡಿದ್ದರು.

ಹಲವು ಖಾತೆಗಳ ನಿರ್ವಹಣೆ: ಉಮೇಶ ಕತ್ತಿ ಅವರು ಶಾಸಕರಾಗಿದ್ದಲ್ಲದೇ ರಾಜ್ಯದಲ್ಲಿ ತೋಟಗಾರಿಕೆ, ಬಂದೀಖಾನೆ, ಸಕ್ಕರೆ, ಕೃಷಿ, ಆಹಾರ ಸಂಸ್ಕರಣೆ, ಲೋಕೋಪಯೋಗಿ ಸೇರಿದಂತೆ ಹಲವಾರು ಪ್ರಮುಖ ಖಾತೆಗಳ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮೊದಲ ಬಾರಿ ಕೃಷಿ ಬಜೆಟ್‌ ರೂಪಿಸಿದ ಹೆಗ್ಗಳಿಕೆಯೂ ಕೂಡ ಕತ್ತಿಯವರಿಗೆ ಸಲ್ಲುತ್ತದೆ.

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗೆಬ್ಬಿಸಿದ ನಾಯಕ

ಉತ್ತರ ಕರ್ನಾಟಕ ಹಿಂದುಳಿದರ ಬಗ್ಗೆ ತೀವ್ರ ನೋವು, ಆತಂಕ ವ್ಯಕ್ತಪಡಿಸುವ ಮೂಲಕ ಆಗಾಗ ತಮ್ಮ ಅಭಿವೃದ್ಧಿಯ ತುಡಿತವನ್ನು ಕತ್ತಿ ಪ್ರಕಟಿಸಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಅವರ ಹೇಳಿಕೆ ಹಿಂದಿರುವ ಭಾವನೆಯಾದರೂ, ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂಬ ಅವರ ಮಾತನ್ನು ಅಲ್ಲಗಳೆಯುವಂತಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು. ಈ ಭಾಗದ ಜನರೂ ರಾಜ್ಯದ, ದೇಶದಪ್ರಗತಿಯ ಭಾಗವಾಗಬೇಕೆಂಬ ಅವರ ಕನಸಾಗಿತ್ತು. ಆ ದಿಸೆಯಲ್ಲಿ ಈ ಭಾಗದ ಬಹುತೇಕ ರಾಜಕಾರಣಿಗಳಂತೆ ಮೊಸಳೆ ಕಣ್ಣೀರು ಸುರಿಸದೇ ನೇರವಾಗಿ ಹೇಳುವ ಛಾತಿ ಪ್ರದರ್ಶಿಸಿ ಸ್ಪಷ್ಟಅರ್ಥದಲ್ಲಿಯೇ ಜನನಾಯಕರೆನಿಸಿ ಜನರ ಮನಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. 2024ರ ಹೊತ್ತಿಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಅಸ್ತಿತ್ವಕ್ಕೆ ಬರುತ್ತದೆ, ಅದರ ಮುಖ್ಯಮಂತ್ರಿ ನಾನು ಅಥವಾ ಬೇರೆ ಇನ್ನಾರೋ ಆಗಬಹುದು ಎಂದು ಅವರು ಈಚೆಗೆ ಹೇಳಿಕೆ ನೀಡಿದ್ದರು.

ಉತ್ತರ ಕರ್ನಾಟಕ ಅಲ್ಲ, ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗಿದೆ; ಉಮೇಶ್ ಕತ್ತಿ

ಸಂಪೂರ್ಣ ಸಹಕಾರಿ ಕುಟುಂಬ

ಬೆಲ್ಲದ ಬಾಗೇವಾಡಿಯ ಕತ್ತಿ ಮನೆತನ ಆರಂಭದಿಂದಲೂ ಸಹಕಾರಿ ಚಳವಳಿಯ ಜೊತೆ ಬೆಳೆದು ಬಂದಿದೆ. ಇವರ ತಂದೆ ವಿಶ್ವನಾಥ ಕತ್ತಿ ಬೆಳಗಾವಿ ಜಿಲ್ಲೆಯಲ್ಲೇ ಸಹಕಾರ ಚಳವಳಿ ಆರಂಭಿಸಿದವರು. ಉಮೇಶ ಕತ್ತಿ, ರಮೇಶ ಕತ್ತಿ ಸಹ ಆರಂಭದಲ್ಲಿ ಸಹಕಾರಿ ಚಳವಳಿ ಜೊತೆಗೆ ಸಾಮಾಜಿಕ ಚಟುವಟಿಕೆ ಆರಂಭಿಸಿದ್ದರು. ಇವರು ಪ್ರತಿನಿಧಿಸಿದ ಸಹಕಾರ ಸಂಘಗಳೆಲ್ಲ ಇಂದು ರಾಜ್ಯದ ಮಾದರಿ ಸಹಕಾರಿ ಸಂಸ್ಥೆಗಳಾಗಿ ಗುರುತಿಸಲ್ಪಡುತ್ತಿವೆ.

ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಇರಬಹುದು. ಬೆಲ್ಲದ ಬಾಗೇವಾಡಿ ಸಹಕಾರಿ ಸಂಸ್ಥೆ ಇರಬಹುದು, ರಾಜ್ಯಕ್ಕೆ ಮಾದರಿ ಎನಿಸಿರುವ ಹುಕ್ಕೇರಿ ಗ್ರಾಮೀಣ ಸಹಕಾರಿ ವಿದ್ಯುತ್‌ ಸಂಘ ಇರಬಹುದು, ಬೆಳಗಾವಿಯ ಕೇಂದ್ರ ಸಹಕಾರಿ ಬ್ಯಾಂಕ್‌, ಬೆಳಗಾವಿ ಹಾಲು ಒಕ್ಕೂಟ ಇರಬಹುದು. ಹೀಗೆ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಕತ್ತಿ ಸಹೋದರರ ಛಾಪು ನಿರಂತರವಾಗಿ ನಾವು ನೋಡಬಹುದು.

ಸಹಕಾರಿ ಪಿತಾಮಹ ಅಪ್ಪಣಗೌಡ ಪಾಟೀಲರ ಗರಡಿಯಲ್ಲಿ ಪಳಗಿದ ಇವರು ಇಂದು ಜಿಲ್ಲೆಯ ಸಹಕಾರ ಚಳವಳಿಯ ಭಾಗವಾಗಿದ್ದಾರೆ. ರಾಜಕೀಯ, ಸಾಮಾಜಿಕ ಸೇವೆಯ ಜೊತೆ ಜೊತೆಯಲ್ಲೇ ಸಹಕಾರ ಸಂಘಗಳನ್ನೂ ಪುನಶ್ಚೇತನಗೊಳಿಸಿ ಬೆಳಗಾವಿಯನ್ನು ಸಹಕಾರಿ ಜಿಲ್ಲೆಯಾಗಿ ರೂಪಿಸಿದ ನಿಷ್ಣಾತರು ಉಮೇಶ ಕತ್ತಿ.
 

Latest Videos
Follow Us:
Download App:
  • android
  • ios