RIP Umesh Katti ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ, ಸಿಎಂ ಬೊಮ್ಮಾಯಿ ಸಂತಾಪ!

ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್‌ ಕತ್ತಿ ಇನ್ನಿಲ್ಲ

Karnataka Food civil supplies and forest minister Umesh Katti Dies Of Heart Attack at ramaiah hospital bengaluru grg

ಬೆಂಗಳೂರು(ಸೆ.06):  ಸಚಿವ ಉಮೇಶ್‌ ಕತ್ತಿ(61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು(ಮಂಗಳವಾರ) ರಾತ್ರಿ ನಗರದ ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಉಮೇಶ್‌ ಕತ್ತಿ ಅವರಿಗೆ ಹೃದಯಾಘಾತವಾಗಿದ್ದರಿಂದ ತಕ್ಷಣ ಅವರನ್ನ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಉಮೇಶ್‌ ಕತ್ತಿ ನಿಧನರಾಗಿದ್ದಾರೆ. 

ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಉಮೇಶ್‌ ಕತ್ತಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಉಮೇಶ್‌ ಕತ್ತಿ ಅವರ ಅಗಲಿಕೆಯ ಸುದ್ದಿ ಕೇಳಿ ಅವರ ಕುಟುಂಬಸ್ಥರು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 

ಮುರುಘಾ ಶ್ರೀಗಳ ವಿರುದ್ಧ ಆರೋಪಿಸಿದ್ದು ತಪ್ಪು: ಉಮೇಶ್ ಕತ್ತಿ

ಹೃದಯಾಘಾತದಿಂದ ವಿಧಾಸನಭೆಯಲ್ಲಿ ನಿಧನರಾಗಿದ್ದ ಕತ್ತಿ ತಂದೆ

ಉಮೇಶ್ ಕತ್ತಿ ತಂದೆ ವಿಶ್ವನಾಥ್ ಕತ್ತಿಗೆ ವಿಧಾನಸಭೆಯಲ್ಲಿ ಹೃದಯಾಘಾತ ಆಗಿತ್ತು.  ತೀವ್ರ ಹೃದಯಾಘಾತದಿಂದ ಬಳಲಿಗ ವಿಶ್ವನಾಥ್ ಕತ್ತಿ ವಿಧಾನಸಭೆಯಲ್ಲಿ ನಿಧನರಾಗಿದ್ದರು. ಇದೀಗ ಉಮೇಶ್ ಕತ್ತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಉಮೇಶ್ ಕತ್ತಿ ನಿವಾಸದಲ್ಲಿದ್ದ ವೇಳೆ ತೀವ್ರ ಅಸ್ವಸ್ಥಗೊಂಡಿದ್ದರು. ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ಹೀಗಾಗಿ ತಕ್ಷಣ ಕತ್ತಿ ಅವರನ್ನು ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕತ್ತಿ ನಿಧನರಾಗಿದ್ದಾರೆ.

ಬಿಜೆಪಿ ಸರ್ಕಾರದ ಅರಣ್ಯ ಹಾಗೂ ಆಹಾರ ಇಲಾಖೆ ಸಚಿವರಾಗಿದ್ದ ಉಮೇಶ್ ಕತ್ತಿ ತಮ್ಮ ಪ್ರಖರ ಮಾತುಗಳಿಂದಲೇ ಜನಪ್ರಿಯರಾಗಿದ್ದಾರೆ. 1985ರಲ್ಲಿ ಉಮೇಶ್ ಕತ್ತಿ ತಂದೆ ವಿಶ್ವನಾಥ್ ಕತ್ತಿ ನಿಧನದ ಬಳಿಕ ರಾಜಕೀಯ ಪ್ರವೇಶಿಸಿದ ಉಮೇಶ್ ಕತ್ತಿ ಉತ್ತರ ಕರ್ನಾಟಕದ ಪ್ರಬಲ ನಾಯಕನಾಗಿ ಬೆಳೆದರು. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗನ್ನು ಎಬ್ಬಿಸಿ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ್ ಕತ್ತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಮತ್ತು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿ ಇದ್ದರು. 

9 ಸಲ ಚುನಾವಣೆ ಎದುರಿಸಿ 8 ಬಾರಿ ಗೆದ್ದಿರುವ ಉಮೇಶ್ ಕತ್ತಿ ನಾಲ್ಕನೇ ಬಾರಿಗೆ ಸಚಿವರಾಗಿದ್ದರು. 1985ರಲ್ಲಿ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ, ಆರು ಪಕ್ಷಗಳನ್ನು ಬದಲಿಸಿದ್ದರು. ಬೆಳಗಾವಿಯ ಕೆಎಲ್‌ಇ ಸೊಸೈಟಿಯ ಲಿಂಗರಾಜ್ ಕಾಲೇಜಿನಲ್ಲಿ ಪಿಯುಸಿ ತನಕ ವ್ಯಾಸಂಗ ಮಾಡಿರುವ ಹುಕ್ಕೇರಿ ಕ್ಷೇತ್ರದಿಂದ 1985ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಚುನಾವಣಾ ಕಣಕ್ಕಿಳಿದರು. ಮೊದಲ ಪ್ರಯತ್ನದಲ್ಲೇ ಗೆಲುವು ಕಂಡಿದ್ದರು. 

1989ರಲ್ಲಿ ಜನತಾದಳಕ್ಕೆ ಬಂದು ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದರು. 1994ರಲ್ಲಿಯೂ ಗೆದ್ದು ಹ್ಯಾಟ್ರಿಕ್ ಬಾರಿಸಿದರು. 1999ರಲ್ಲಿ ಸಂಯುಕ್ತ ಜನತಾದಳ (ಜೆಡಿಯು)ನಿಂದ ಸ್ಪರ್ಧಿಸಿ 4ನೇ ಬಾರಿಯೂ ಗೆದ್ದಿದ್ದರು. 2004ರಲ್ಲಿ ಕಾಂಗ್ರೆಸ್‌ಗೆ ಬಂದ ಉಮೇಶ್ ಕತ್ತಿ ಚುನಾವಣೆಯಲ್ಲಿ ಸೋಲು ಕಂಡರು. ರಾಜಕೀಯ ಜೀವನದಲ್ಲಿ ಇದೊಂದೇ ಚುನಾವಣೆಯಲ್ಲಿ ಉಮೇಶ್ ಕತ್ತಿ ಸೋಲು ಕಂಡಿರುವುದು. 2008ರಲ್ಲಿ ಜೆಡಿಎಸ್ ಸೇರಿದರು, ಗೆಲುವು ಕಂಡರು. ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 6ನೇ ಗೆಲುವು ಸಾಧಿಸಿದರು. 2013, 2018ರ ಚುನಾವಣೆಯಲ್ಲಿಯೂ ಹುಕ್ಕೇರಿ ಕ್ಷೇತ್ರದಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು.

ಶಾಸಕರಾಗಿದ್ದ ತಂದೆ ವಿಶ್ವನಾಥ್ ಕತ್ತಿ ನಿಧನದಿಂದಾಗಿ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ 1996ರಲ್ಲಿ ಮೊದಲ ಬಾರಿಗೆ ಸಕ್ಕರೆ ಖಾತೆ ಸಚಿವರಾಗಿದ್ದರು. 2008ರಲ್ಲಿ ತೋಟಗಾರಿಕೆ ಮತ್ತು ಬಂಧಿಖಾನೆ ಸಚಿವರಾದರು. 2010ರಲ್ಲಿ ಕೃಷಿ ಸಚಿವರಾದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಉಮೇಶ್ ಕತ್ತಿ ಅವರದ್ದು. 2019ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸೇರಿದರು, ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಿಕ್ಕಿತು.
2021ರಲ್ಲಿಯೂ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದರು. ಅರಣ್ಯ ಇಲಾಖೆ ಖಾತೆ ಸಚಿವರಾಗಿದ್ದಾರೆ. ಸಹೋದರ ರಮೇಶ್ ಕತ್ತಿ ಸಹ ರಾಜಕೀಯದಲ್ಲಿದ್ದು, ಮಾಜಿ ಸಂಸದರು.

ಕತ್ತಿ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ 

ರಾಮಯ್ಯ ಆಸ್ಪತ್ರೆಗೆ ಇದೀಗ ಬಿಜೆಪಿ ನಾಯಕರು, ಸಚಿವರು ದೌಡಾಯಿಸಿದ್ದಾರೆ. ಇತ್ತ ಸಿಎಂ ಬಸವರಾಜ ಬೊಮ್ಮಾಯಿ ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಶ್ರೀ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ, ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಉತ್ತರ ಕರ್ನಾಟಕ ಅಲ್ಲ, ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗಿದೆ; ಉಮೇಶ್ ಕತ್ತಿ

ಕತ್ತಿ ನಿಧನಕ್ಕೆ ಗಣ್ಯರ ಸಂತಾಪ

ಉಮೇಶ್ ಕತ್ತಿ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ, ಆರ್‌.ಅಶೋಕ್‌, ಡಾ.ಕೆ. ಸುಧಾಕರ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಸಂಸದ ಪ್ರತಾಪ್‌ ಸಿಂಹ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. 

ನಾಳೆ ಬೆಳಿಗ್ಗೆ ಬೆಂಗಳೂರಿನಲ್ಲಿ ಉಮೇಶ್‌ ಕತ್ತಿ ಅವರ ಅಂತಿಮ ದರ್ಶನಕ್ಕೆ ವ್ಯವ್ತಸ್ಥೆ ಮಾಡಲಾಗುವುದು. ಬಳಿಕ ವಿಶೇಷ ವಿಮಾನದಲ್ಲಿ ಬೆಳಗಾವಿಗೆ ಪಾರ್ಥಿವ ಶರೀರ ರವಾನೆಯಾಗಲಿದೆ. ಪಾರ್ಥಿವ ಶರೀರದ ಜೊತೆ ಸಚಿವರು ಬೆಳಗಾವಿಗೆ ತೆರಳಲಿದ್ದಾರೆ. 

ಬಾತ್‌ರೂಮ್‌ಗೆ ತೆರಳಿದ್ದಾಗ ಉಮೇಶ್‌ ಕತ್ತಿಗೆ ತೀವ್ರಹೃದಯಾಘಾತ ಸಂಭಿವಿಸಿತ್ತು. ಕುಸಿದು ಬಿದ್ದ ಕತ್ತಿ ಅವರನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಕತ್ತಿ ನಿಧನರಾಗಿದ್ದರು ಅಂತ ಸಚಿವ ಆರ್‌. ಅಶೋಕ್‌ ಅವರು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios