ಕಾರವಾರ: ಕಳಪೆ ಕಾಮಗಾರಿಯಿಂದ ಬಂದ್‌ ಆಗಿದ್ದ ಸುರಂಗ ಮಾರ್ಗ ಪರಿಶೀಲನೆ

ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಾಣವಾಗಿರುವ ಸುರಂಗ ಮಾರ್ಗದ ಸುರಕ್ಷತೆ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ಉತ್ತರಕನ್ನಡ ಜಿಲ್ಲಾಡಳಿತದ ಆದೇಶದಂತೆ ಪುಣೆಯ ಸಿ.ಒ.ಇ.ಪಿ ತಾಂತ್ರಿಕ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಮರು ಪರಿಶೀಲನೆ ನಡೆಸಿದ್ದಾರೆ. 

IRB Experts Did Tunnel Inspection at Kawar in Uttara Kannada grg

ಉತ್ತರಕನ್ನಡ(ಅ.09): ಉತ್ತರಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಾಣವಾಗಿದ್ದ ಅವಳಿ ಸುರಂಗ ಮಾರ್ಗಗಳನ್ನು ಕಳಪೆ ಕಾಮಗಾರಿ ಹಿನ್ನೆಲೆ‌ ಕಳೆದ 3 ತಿಂಗಳ‌ ಹಿಂದೆ ಬಂದ್ ಮಾಡಲಾಗಿತ್ತು. ಬಳಿಕ ಜನಸಾಮಾನ್ಯರು ಹೋರಾಟ ನಡೆಸಿ‌ದ ಕಾರಣ ಜಿಲ್ಲಾಡಳಿತ ಐಆರ್‌ಬಿ ತಜ್ಞರು ಸ್ಥಳ ಪರಿಶೀಲನೆ ನಡೆಸುವವರೆಗೆ ಪ್ರಯಾಣಕ್ಕೆ ಬಳಸಬಹುದಾದ ಷರತ್ತಿನೊಂದಿಗೆ ಸುರಂಗ ಮಾರ್ಗಗಳನ್ನು ಮತ್ತೆ ತೆರೆದಿತ್ತು. ಜಿಲ್ಲಾಡಳಿತದ ಷರತ್ತಿನ ಹಿನ್ನೆಲೆ‌ ನಿನ್ನೆ(ಭಾನುವಾರ) ಐಆರ್‌ಬಿ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳು ಕಾರವಾರದ ಸುರಂಗ ಮಾರ್ಗವನ್ನು ಪರಿಶೀಲನೆ ನಡೆಸಿದ್ದಾರೆ‌. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ...

ಹೌದು, ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಾಣವಾಗಿರುವ ಸುರಂಗ ಮಾರ್ಗದ ಸುರಕ್ಷತೆ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ಉತ್ತರಕನ್ನಡ ಜಿಲ್ಲಾಡಳಿತದ ಆದೇಶದಂತೆ ಪುಣೆಯ ಸಿ.ಒ.ಇ.ಪಿ ತಾಂತ್ರಿಕ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಮರು ಪರಿಶೀಲನೆ ನಡೆಸಿದ್ದಾರೆ. 

ಕಾರವಾರ: ಕೊನೆಗೂ ಸಂಚಾರಕ್ಕೆ ತೆರೆದುಕೊಂಡ ಸುರಂಗ..!

ಈ ಮೊದಲು ಪುಣೆಯ ಸಿ.ಇ.ಒ.ಪಿ ತಾಂತ್ರಿಕ ವಿಶ್ವ ವಿದ್ಯಾನಿಲಯ ಸುರಂಗಗಳ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿತ್ತು. ಆದರೆ, ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿರಲಿಲ್ಲ. ಹೀಗಾಗಿ ವರದಿಯ ಕುರಿತು ಜಿಲ್ಲಾಡಳಿತ ಸ್ಪಷ್ಟನೆ ಕೇಳಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಕಾರವಾರ ನಗರಕ್ಕೆ ಬಂದ ಪುಣೆಯ ಅಧಿಕಾರಿಗಳ ತಂಡವು ಜಿಲ್ಲಾಧಿಕಾರಿ, ಸ್ಥಳೀಯ ಶಾಸಕ ಸತೀಶ ಸೈಲ್, ಐಆರ್‌ಬಿ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದರು. 

ಈ ವೇಳೆ ಹಿಂದೆ ನಡೆಸಿದ ಪರಿಶೀಲನೆ ಬಗ್ಗೆ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ವರದಿಯನ್ನು ಗಮನಿಸಿದ ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು, ಸ್ಥಳದಲ್ಲಿಯೇ ಸುರಂಗದಲ್ಲಿರುವ ಇನ್ನಷ್ಟು ನ್ಯೂನ್ಯತೆಗಳನ್ನು ಗಮನಕ್ಕೆ ತಂದು ಪರಿಹರಿಸುವಂತೆ ತಿಳಿಸಿದ್ದಾರೆ. ಅಲ್ಲದೇ, ಸುರಂಗದ ಎರಡು ಭಾಗದಲ್ಲಿ ಬಂಡೆ ಕಲ್ಲುಗಳು ಬೀಳುವ ಸಾಧ್ಯತೆಗಳಿದ್ದು, ಹಲವು ಕಡೆಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಜತೆಗೆ ಪಕ್ಕದ ಗುಡ್ಡಗಳಿಂದ ನೀರು ಹರಿದುಬರುತ್ತಿದ್ದು, ಅದಕ್ಕೆ ಪೈಪುಗಳನ್ನು ಅಳವಡಿಸಬೇಕು ಎಂದು ತಿಳಿಸಿದ್ದಾರೆ. 

ಬಳಿಕ ಮಾಧ್ಯಮದ ಜತೆ ಮಾತನಾಡಿದ ಜಿಲ್ಲಾಧಿಕಾರಿ, ಹಳೆಯ ವರದಿ ಸರಿ ಇದೆ. ಆದರೆ ಕೆಲವು ನ್ಯೂನ್ಯತೆಗಳು ಬಾಕಿ ಇದ್ದು, ಈ ಬಗ್ಗೆಯೂ ಗಮನಕ್ಕೆ ತರಲಾಗಿದೆ. ಜತೆಗೆ ಹೆದ್ದಾರಿಯ ಕಾಮಗಾರಿಯನ್ನು ಕೂಡ ತ್ವರಿತವಾಗಿ ಪೂರ್ಣಗೊಳಿಸುವಂತೆ ಐಆರ್‌ಬಿ ಅಧಿಕಾರಿಗಳಿಗೆ ಸೂಚನೆ ನಿಡಲಾಗಿದೆ ಎಂದರು.  

ಇನ್ನು ಈ ಬಗ್ಗೆ ಮಾತನಾಡಿದ ಶಾಸಕ ಸತೀಶ್ ಸೈಲ್, ಐಆರ್‌ಬಿ ಹಾಗೂ ಹೆದ್ದಾರಿ ಪ್ರಾಧಿಕಾರ ಪುಣೆಯ ತಾಂತ್ರಿಕ ವಿಶ್ವ ವಿದ್ಯಾನಿಲಯಕ್ಕೆ ಪರಿಶೀಲನೆ ನಡೆಸಲು ಹೇಳಿರಲಿಲ್ಲ. ಬದಲಾಗಿ ಸುರಂಗ ಹಾಗೂ ಹೆದ್ದಾರಿಯ ಸುರಕ್ಷತೆಯನ್ನು ನೋಡಿಕೊಳ್ಳುವ ಅಧಿಕಾರಿಗಳ ಒತ್ತಾಯಕ್ಕೆ ಪರಿಶೀಲನೆ ನಡೆಸಿದ್ದರು. ಹೀಗಾಗಿಯೇ ಅವರು ಯಾರಿಗೂ ತಿಳಿಸದೇ ವರದಿ ನೀಡಿದ್ದಾರೆ. ಮರು ಪರಿಶೀಲನೆಯಲ್ಲಿ ಕೆಲವು ಮುಖ್ಯ ನ್ಯೂನ್ಯತೆಗಳನ್ನು ತಿಳಿಸಲಾಗಿದೆ. ಶೀಘ್ರದಲ್ಲಿಯೇ ಅಧಿಕಾರಿಗಳು ಉತ್ತರ ನೀಡಲಿದ್ದಾರೆ. ಸದ್ಯ ಸುರಂಗ ಮಾರ್ಗದಲ್ಲಿ ಸಂಚಾರ ಇರಲಿದೆ. ಸಣ್ಣ ಕಾಮಗಾರಿಗಳು ಇರುವುದರಿಂದ ಸಂಚಾರ ನಿಲ್ಲಿಸುವುದಿಲ್ಲ. ಕಾಮಗಾರಿ ಮುಗಿದ ಬಳಿಕ‌ ನಿರ್ವಹಣೆಯ ಸಮಯ ಮುಗಿಯುವ ವರೆಗೆ ಸುರಂಗವು ಐಆರ್‌ಬಿಯ ಅಧೀನಲ್ಲಿಯೇ ಇರಲಿದ್ದು ಸಂಪೂರ್ಣ ಹೊಣೆಗಾರಿಕೆ ಅವರದ್ದೇ ಆಗಿರುತ್ತದೆ ಎಂದು ಹೇಳಿದ್ದಾರೆ. 

ಬಾಳಗಾರ ಭಾಗದಲ್ಲಿ ಚಿರತೆಗಳ ಓಡಾಟ: ಜಮೀನುಗಳಿಗೆ ಹೋಗಲು ರೈತರು ಆತಂಕ

ಬಳಿಕ ಪ್ರತಿಕ್ರಿಯಿಸಿದ ಸಿ.ಇ.ಒ.ಪಿ ತಾಂತ್ರಿಕ ವಿಶ್ವ ವಿದ್ಯಾನಿಲಯದ ಅಧಿಕಾರಿ, ಈ ಎಲ್ಲಾ ವಿಷಯಗಳ ಬಗ್ಗೆ ಜಿಲ್ಲಾಡಳಿಕ್ಕೆ ಉತ್ತರ ನೀಡುತ್ತೇವೆ. ಬಳಿಕ ಐಆರ್‌ಬಿ ಕಂಪೆನಿಯ ಮೂಲಕ ಸರಿಪಡಿಸಲಾಗುತ್ತದೆ ಎಂದು ಸಿ.ಇ.ಒ.ಪಿ ತಾಂತ್ರಿಕ ವಿಶ್ವ ವಿದ್ಯಾನಿಲಯದ ಅಧಿಕಾರಿಗಳು ತಿಳಿಸಿದರು.  

ಒಟ್ಟಿನಲ್ಲಿ ಜಿಲ್ಲಾಡಳಿತ ನೀಡಿದ ಎಚ್ಚರಿಕೆ ಹಿನ್ನೆಲೆ ಐಆರ್‌ಬಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಟನಲ್ ಪರೀಕ್ಷಣೆ ನಡೆಸಿದ್ದಾರೆ. ಶೀಘ್ರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಟನಲ್‌‌‌ ಸಮಸ್ಯೆ ಪರಿಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟಗಳು ನಡೆಯುವ ಸಾಧ್ಯತೆಗಳಿವೆ.

Latest Videos
Follow Us:
Download App:
  • android
  • ios