ಬೆಂಗಳೂರು[ಜ.15]: ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ‘ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ’ ಪೂರ್ವಸಿದ್ಧತಾ ಪರೀಕ್ಷೆ ನಡೆಸುವ ಶಾಲೆಗಳಲ್ಲಿ ‘ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ’ ಪೂರ್ವ ಸಿದ್ಧತಾ ಪರೀಕ್ಷೆ ನಡೆಸುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.

ರಾಜ್ಯಾದ್ಯಂತ ಒಟ್ಟಾರೆ 14,989 ಶಾಲೆಗಳ ಪೈಕಿ 2,123 ಶಾಲೆಗಳಲ್ಲಿ ಶಿಕ್ಷಕರ ಸಂಘಕ್ಕೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ಉಳಿದ 12,886 ಶಾಲೆಗಳಿಗೆ ಮಾತ್ರ ಎಸ್‌ಎಸ್‌ಎಲ್‌ಸಿ ಮಂಡಳಿ ಪರೀಕ್ಷೆ ನಡೆಸಲಿದೆ ಎಂದು ಮಂಗಳವಾರ ಪ್ರೌಢಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಶಿಕ್ಷಕರ ಸಂಘ ಹಾಗೂ ಪರೀಕ್ಷಾ ಮಂಡಳಿ ನಡೆಸುವ ಎರಡೆರಡು ಪರೀಕ್ಷೆಗಳಿಂದ ವಿದ್ಯಾರ್ಥಿಗಳಿಗೆ ಉಂಟಾಗುವ ಭಾರವನ್ನು ಇಳಿಸುವುದಕ್ಕಾಗಿಯೇ ಏಕರೂಪದ ಪೂರ್ವಸಿದ್ಧತಾ ಪರೀಕ್ಷೆ ನಡೆಸುವುದಾಗಿ ಸರ್ಕಾರ ಘೋಷಿಸಿತ್ತು. ಈ ನಡುವೆ ಪೂರ್ವ ಸಿದ್ಧತಾ ಪರೀಕ್ಷೆಗೆ ಸಿದ್ಧತೆ ನಡೆಸಿದ್ದು, ಅನುಮತಿ ನೀಡಿ ಎಂದು ಮುಖ್ಯಶಿಕ್ಷಕರ ಸಂಘ ಮನವಿ ಮಾಡಿಕೊಂಡಿದ್ದರ ಪರಿಣಾಮ, ಪರೀಕ್ಷಾ ಮಂಡಳಿಯ ಪರೀಕ್ಷೆ ಜತೆಗೆ ಶಿಕ್ಷಕರು ಹೆಚ್ಚುವರಿಯಾಗಿ ನಡೆಸುವ ಎರಡನೇ ಪರೀಕ್ಷೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು.

SSLC, PUC ವಿದ್ಯಾರ್ಥಿಗಳಿಗೆ 10 ಗ್ರಾಂ ಚಿನ್ನದ ಸರ ಕೊಡುಗೆ

ಆದರೆ ವಿದ್ಯಾರ್ಥಿಗಳು ಎರಡೆರಡು ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ, ಶಿಕ್ಷಕರ ಸಂಘ ಪರೀಕ್ಷೆ ನಡೆಸುವ ಶಾಲೆಗಳಲ್ಲಿ ಮಂಡಳಿಯ ಪರೀಕ್ಷೆ ಇರುವುದಿಲ್ಲ. ಮಂಡಳಿ ಪರೀಕ್ಷೆ ನಡೆಸುವ ಶಾಲೆಗಳಲ್ಲಿ ಶಿಕ್ಷಕರ ಸಂಘ ಪರೀಕ್ಷೆ ನಡೆಸಬಾರದು ಎಂದು ತಾಕೀತು ಮಾಡಿದೆ.

2020ರ ಫೆ.17ರಿಂದ 24ರವರೆಗೆ ಪರೀಕ್ಷಾ ಮಂಡಳಿ ವತಿಯಿಂದ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯಲಿವೆ. ಮಂಡಳಿಯೇ ಪ್ರಶ್ನೆಪತ್ರಿಕೆಗಳನ್ನು ಸರಬರಾಜು ಮಾಡಲಿದೆ. ವಾರ್ಷಿಕ ಪರೀಕ್ಷೆ ಮಾದರಿಯಲ್ಲಿಯೇ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯಲಿವೆ. ಶಿಕ್ಷಕರ ಸಂಘದಿಂದ ನಡೆಸುವ ಪರೀಕ್ಷೆಗಳು ಮಾಚ್‌ರ್‍ ಮೊದಲ ವಾರದಲ್ಲಿ ನಡೆಯಲಿವೆ ಎಂದು ತಿಳಿದು ಬಂದಿದೆ.