ಬೆಂಗಳೂರು(ಮೇ.14): ರಾಜ್ಯದಲ್ಲಿ ದಿನೇ ದಿನೇ ತನ್ನ ಅಟ್ಟಹಾಸ ಹೆಚ್ಚಿಸಿಕೊಂಡೇ ಸಾಗುತ್ತಿರುವ ಕಿಲ್ಲರ್‌ ಕೊರೋನಾ ಸೋಂಕಿಗೆ ಬುಧವಾರ ಮತ್ತಿಬ್ಬರು ಕಲಬುರಗಿ ಹಾಗೂ ದಕ್ಷಿಣ ಕನ್ನಡದಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ವರೆಗೆ ಮೃತಪಟ್ಟಒಟ್ಟು ಸೋಂಕಿತರ ಸಂಖ್ಯೆ 33ಕ್ಕೇರಿದೆ.

ಮತ್ತೊಂದೆಡೆ ಬುಧವಾರ ಒಂದೇ ದಿನ ಹೊಸದಾಗಿ 34 ಜನರಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ ಬೀದರ್‌ನ 12, ಕಲಬುರಗಿ 8, ಹಾಸನ 4, ವಿಜಯಪುರ 2, ದಾವಣಗೆರೆ 2, ಉತ್ತರ ಕನ್ನಡ 2 ಹಾಗೂ ಬೆಂಗಳೂರು 2, ದಕ್ಷಿಣ ಕನ್ನಡ ಹಾಗೂ ಬಳ್ಳಾರಿಯ ತಲಾ ಒಬ್ಬರಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 959ರಷ್ಟಾಗಿದ್ದು, ಇನ್ನು ಒಂದೆರಡು ದಿನಗಳಲ್ಲೇ ಸಾವಿರದ ಗಡಿ ದಾಟುವ ಸಾಧ್ಯತೆ ಇದೆ.

ಪ್ರಧಾನಿ ಕೇರ್ಸ್‌ನಿಂದ ಮೊದಲ ಕಂತು, 3100 ಕೋಟಿ ರಿಲೀಸ್‌!

ಮೃತರ ವಿವರ:

ಮೃತಪಟ್ಟಇಬ್ಬರು ಸೋಂಕಿತರಲ್ಲಿ ಒಬ್ಬರು ಕಲಬುರಗಿ ಜಿಲ್ಲೆಯ ಕಂಟೈನ್ಮೆಂಟ್‌ ವಲಯದ ಪಿ-927 ಸಂಖ್ಯೆಯ 60 ವರ್ಷದ ವ್ಯಕ್ತಿ. ಇವರು ಮೇ 11ರಂದು ಕೋವಿಡ್‌ ರೋಗಿಗಳ ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು. ಬಳಿಕ ಅವರ ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಬುಧವಾರ ವರದಿ ಪಾಸಿಟಿವ್‌ ಬಂದಿದೆ.

ಮತ್ತೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಪಿ-536 ಸಂಖ್ಯೆಯ ಮಹಿಳೆ. 58 ವರ್ಷದ ಇವರು ಖಾಸಗಿ ಆಸ್ಪತ್ರೆಯಲ್ಲಿ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಏ. 28 ರಂದು ಸೋಂಕು ದೃಢಪಟ್ಟು ನಿಗದಿತ ಆಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಬುಧವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಲಾಕ್‌ಡೌನ್‌ ಎಫೆಕ್ಟ್ 50% ಜನರ ಊಟ ಕಡಿತ!

ಬೀದರ್‌ಗೆ ಕೊರೋನಾ ಶಾಕ್‌:

ಹೊಸ 34 ಪ್ರಕರಣಗಳ ಪೈಕಿ ಬೀದರ್‌ನ ಕಂಟೈನ್ಮೆಂಟ್‌ ಪ್ರದೇಶ ಸಂಪರ್ಕದ ಒಂಬತ್ತು ಜನ ಮಹಿಳೆಯರು ಸೇರಿ 12 ಜನರಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಆ ಪ್ರದೇಶದಲ್ಲಿ ಸಮುದಾಯಕ್ಕೆ ಸೋಂಕು ಹಬ್ಬಿರುವ ಆತಂಕ ಶುರುವಾಗಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ಕಲಬುರಗಿಯಲ್ಲಿ ಪಿ.806 ಮತ್ತು ಪಿ.848 ಸಂಖ್ಯೆಯ ರೋಗಿಗಳ ಸಂಪರ್ಕದ ಐವರು ಮಹಿಳೆಯರು ಸೇರಿ 6 ಜನರಿಗೆ ಹಾಗೂ ಆಂಧ್ರಪ್ರದೇಶಕ್ಕೆ ಪ್ರಯಾಣದ ಹಿನ್ನೆಲೆ ಮತ್ತು ಕಂಟೈನ್ಮೆಂಟ್‌ ಪ್ರದೇಶದ ಹಿನ್ನೆಲೆಯ ಇಬ್ಬರು ವ್ಯಕ್ತಿಗಳಿಗೆ ಸೋಂಕು ದೃಢಪಟ್ಟು ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 81ರಷ್ಟಾಗಿದೆ.

ಇನ್ನು, ಮುಂಬೈ ಪ್ರವಾಸದ ಹಿನ್ನೆಲೆಯಲ್ಲಿ ಹಾಸನÜದಲ್ಲಿ ಮತ್ತೆ ನಾಲ್ವರಿಗೆ, ವಿಜಯಪುರ ಜಿಲ್ಲೆಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಹಸಿರು ವಲಯದಲ್ಲಿದ್ದ ಹಾಸನದಲ್ಲಿ ಮೂರೇ ದಿನದಲ್ಲಿ ಸೋಂಕಿತರ ಸಂಖ್ಯೆ 9 ರಷ್ಟಾಗಿದೆ. ವಿಜಯಪುರದಲ್ಲಿ ಒಟ್ಟು 52ಕ್ಕೇರಿದೆ. ಇನ್ನು ದಾವಣಗೆರೆಯಲ್ಲಿ ಪಿ-695 ಸಂಖ್ಯೆಯ ರೋಗಿಯ ಸಂಪರ್ಕದಲ್ಲಿದ್ದ ಮತ್ತಿಬ್ಬರಿಗೆ ಸೋಂಕು ಹರಡಿದೆ. ಉತ್ತರ ಕನ್ನಡದಲ್ಲಿ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆಯಿಂದ ಓರ್ವ ಪುರುಷ ಹಾಗೂ ಪಿ-786 ರೋಗಿಯ ಸಂಪರ್ಕದಿಂದ ಓರ್ವ ಮಹಿಳೆಗೆ ಸೋಂಕು ದೃಢಪಟ್ಟಿದೆ. ಅದೇ ರೀತಿ ದಕ್ಷಿಣ ಕನ್ನಡದಲ್ಲಿ ಪಿ-507 ರೋಗಿಯಿಂದ ಓರ್ವ ಮಹಿಳೆಗೆ, ಬಳ್ಳಾರಿಯಲ್ಲಿ ಉಸಿರಾಟ ತೊಂದರೆಯಿಂದ ದಾಖಲಾದ ಮತ್ತೊಬ್ಬ ಮಹಿಳೆಗೆ ಸೋಂಕು ಹರಡಿದೆ.

ವಿಕ್ಟೋರಿಯಾ ಆಸ್ಪತ್ರೆ ನರ್ಸ್‌ಗೆ ಸೋಂಕು:

ರಾಜಧಾನಿ ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ, ಓರ್ವ ನರ್ಸ್‌ ಹಾಗೂ ಲಂಡನ್‌ನಿಂದ ಬಂದಿದ್ದ ವ್ಯಕ್ತಿಯೊಬ್ಬನಿಗೆ ಸೋಂಕು ತಗುಲಿದೆ. ನರ್ಸ್‌ ಸಂಪರ್ಕದಲ್ಲಿದ್ದ ಆಸ್ಪತ್ರೆಯ ಇತರೆ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ರಾಜ್ಯದಲ್ಲಿ ಕೊರೋನಾ ಜಾಗೃತಿಯ ಧ್ವನಿ ದಕ್ಷಿಣಕನ್ನಡದ ಹೆಣ್ಮಕ್ಕಳದ್ದು!

18 ಜನ ಗುಣಮುಖ, ಡಿಸ್‌ಚಾಜ್‌ರ್‍

ಬುಧವಾರ ಬೆಳಗಾವಿ, ಮಂಗಳೂರಿನಲ್ಲಿ ತಲಾ 5 ಜನ, ಬೆಂಗಳೂರಿನ 4, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್‌ ಮತ್ತು ವಿಜಯಪುರದಲ್ಲಿ ತಲಾ ಒಬ್ಬರು ಸೇರಿ ಒಟ್ಟು 18 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದರಿಂದ ಸೋಂಕಿನಿಂದ ಮುಕ್ತರಾದವರ ಒಟ್ಟು ಸಂಖ್ಯೆ 451ಕ್ಕೇರಿದೆ. ಉಳಿದ 474 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 10 ಜನರ ಆರೋಗ್ಯ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಂದು ಆರೋಗ್ಯ ಇಲಾಖೆ ತಿಳಿಸಿದೆ.