Asianet Suvarna News Asianet Suvarna News

ರಾಜ್ಯದಲ್ಲಿ ಕೊರೋನಾ ಜಾಗೃತಿಯ ಧ್ವನಿ ದಕ್ಷಿಣಕನ್ನಡದ ಹೆಣ್ಮಕ್ಕಳದ್ದು!

ಕೊರೋನಾ ಜಾಗೃತಿಯ ಧ್ವನಿ ದಕ್ಷಿಣಕನ್ನಡದ ಹೆಣ್ಮಗಳದ್ದು!| ಮಂಗ್ಳೂರ ಡಾರೆಲ್‌, ವಿಟ್ಲದ ವಿದ್ಯಾ ಫುಲ್‌ ಫೇಮಸ್‌

Two Kannada Voice Over Artists From Mangalore Becomes Voice to Covid 19 Caller tune In Karnataka
Author
Bangalore, First Published May 14, 2020, 8:23 AM IST

ದುರ್ಗಾಕುಮಾರ್‌ ನಾಯರ್‌ಕೆರೆ

ಮಂಗಳೂರು(ಮೇ.14): ಇದು ಕೊರೋನಾ ಕಾಲ. ಕೊರೋನಾದ ಆರಂಭ ದಿನಗಳಿಂದಲೂ ಫೋನ್ ಮೂಲಕ ಜಾಗೃತಿಯ ಧ್ವನಿ ಸಂದೇಶ ಬಿತ್ತರವಾಗತೊಡಗಿತು. ಕೋಟ್ಯಾಂತರ ಜನ ಇದನ್ನು ಆಲಿಸಿದರು. ಈಗಂತೂ ಈ  ಸಂದೇಶ ಫೋನ್ ಕರೆಗಳ ಅವಿಭಾಜ್ಯ ಅಂಗವೇ ಆಗಿದೆ. ಆದರೆ ದೇಶದ ಎರಡು ಪ್ರಮುಖ ರಾಜ್ಯಗಳಲ್ಲಿ ಈ ಸಂದೇಶಕ್ಕೆ ಧ್ವನಿ ನೀಡಿದವರು ದಕ್ಷಿಣ ಕನ್ನಡ ಜಿಲ್ಲೆಯವರು ಎಂಬ ಸಂಗತಿ ಬಹುತೇಕರಿಗೆ ಗೊತ್ತಿಲ್ಲ. 

ಜಗತ್ತಿನಲ್ಲಿ ಕಾಣಿಸಿಕೊಂಡ ಕೊರೋನಾ ಭಾರತದಲ್ಲೂ ತನ್ನ ಪರಿಣಾಮ ಬೀರುವ ಆರಂಭದ ದಿನಗಳಲ್ಲೇ ಈ ಕುರಿತಾದ ಮೊಬೈಲ್ ಧ್ವನಿ ಸಂದೇಶಗಳು ಮೊಳಗಿ ಜಾಗೃತಿಯ ಸಂದೇಶ ನೀಡತೊಡಗಿತು. ಯಾರಿಗೇ ಯಾರು ಕರೆ ಮಾಡಿದರೂ ಕನೆಕ್ಟ್ ಆದ ಕೂಡಲೇ ಕೊರೋನಾ ಜಾಗೃತಿ ಕುರಿತಾದ ಈ ಧ್ವನಿ ಸಂದೇಶ ಕೇಳತೊಡಗಿತು. ಆರಂಭದಲ್ಲಿ ಇಲ್ಲಿನ ಇದನ್ನು ಜನ ಬೈದದ್ದೂ, ಗೊಣಗಿದ್ದೂ ಆಯಿತು. ಆದರೆ ಭಾರತದಲ್ಲೂ ಕೊರೋನಾ ಸೋಂಕು ವ್ಯಾಪಕವಾಗಿ ಕಾಣಿಸಿಕೊಳ್ಳತೊಡಗಿದಾಗ ಈ ಧ್ವನಿ ಜಾಗೃತಿಯ ಧ್ವನಿಯಾಯಿತು. ಈಗಂತೂ ಈ ಧ್ವನಿ ತಾಯಿಯೊಬ್ಬಳು ಮಕ್ಕಳಿಗೆ ಹೇಳುವ ವಾತ್ಸಲ್ಯದ, ಉಪದೇಶದ ನುಡಿಗಳಂತೆ ಅನಿಸತೊಡಗಿದೆ.

ಹಾಗಾದರೆ ಈ ಧ್ವನಿ ಯಾರದ್ದು ಎಂಬ ಕುತೂಹಲ ಎಲ್ಲರದ್ದು. ಆ ಕುತೂಹಲಕ್ಕೆ ಇಲ್ಲಿದೆ ಉತ್ತರ : 

ಡಾರೆಲ್ ಜೆಸಿಕಾ ಫೆರ್ನಾಂಡಿಸ್

ಕನ್ನಡದಲ್ಲಿ ಮೂರು ಹಂತಗಳಲ್ಲಿ ಈ ಧ್ವನಿ ಸಂದೇಶ ಬಂದಿದೆ. ಈ ಪೈಕಿ ಮೊದಲ ಹಂತದ ಧ್ವನಿ ಮಂಗಳೂರು ಮೂಲದ ಡಾರೆಲ್ ಜೆಸಿಂತಾ ಫೆರ್ನಾಂಡಿಸ್ ಅವರದು. ಪಡೀಲ್‌ನಲ್ಲಿರುವ ದಿ.ವಲೇರಿಯನ್ ಫೆರ್ನಾಂಡಿಸ್ ಹಾಗೂ ಲವೀನಾ ಫೆರ್ನಾಂಡಿಸ್ ಅವರ ಪುತ್ರಿಯಾಗಿರುವ ಡಾರೆಲ್ ಜೆಸಿಂತಾರವರು ತನ್ನ ಎಂ.ಪಿ.ಎಡ್ ಪದವಿಯ ಬಳಿಕ ಸ್ವಲ್ಪ ಕಾಲ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕಿಯಾಗಿದ್ದರು. 2013 ರಲ್ಲಿ ದೆಹಲಿಯ ಕನ್ನಡ ಸೀನಿಯರ್ ಸೆಕೆಂಡರಿ ಸ್ಕೂಲ್ ಗೆ ದೈಹಿಕ ಶಿಕ್ಷಕಿಯಾಗಿ ಸೇರಿದರು. ಈ ಶಾಲೆಯ ಸಂಚಾಲಕರಾಗಿದ್ದ ಖ್ಯಾತ ವಾಯ್ಸ್ ಆರ್ಟಿಸ್ಟ್ ಸರವು ಕೃಷ್ಣ ಭಟ್ ಅವರು  ಡಾರೆಲ್ ಅವರ ಧ್ವನಿ ಶಕ್ತಿ ಗುರುತಿಸಿ ವಾಯ್ಸ್ ಓವರ್ ಅವಕಾಶ ನೀಡಲು ಕಾರಣರಾದರು. ರೇಡಿಯೋ ಹಾಗೂ ಟಿ.ವಿ.ಗಳಲ್ಲಿ ಅನೇಕ ಪ್ರಕಟನೆಗಳಿಗೆ ಧ್ವನಿ ನೀಡಿದ ಡಾರೆಲ್ ಅವರಿಗೆ ಕೊರೋನಾ ಜಾಗೃತಿಯ ಪ್ರಕಟನೆಗೆ ಧ್ವನಿ ನೀಡುವ ಅವಕಾಶವೂ ಬಂತು. 

ಹಾಕಿ, ತ್ರೋಬಾಲ್, ವಾಲಿಬಾಲ್ ಸಹಿತ ಅತ್ಯುತ್ತಮ ಕ್ರೀಡಾಪಟುವಾಗಿರುವ ಡಾರೆಲ್ ಅವರು ಹಲವು ಕಡೆ ಚಿನ್ನದ ಪದಕ ಗೆದ್ದುಕೊಂಡವರು. ಶಾಲೆಯ ವಿದ್ಯಾರ್ಥಿಗಳೂ ಕ್ರೀಡಾ ಸಾಧನೆ ಮೆರೆಯಲು ಕಾರಣರಾದವರು. ಎನ್.ಸಿ.ಸಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಿಮಾಚಲ ಪ್ರದೇಶ ಮೂಲದ ಡೋರ್ಜೆಯವರು ಡಾರೆಲ್ ಅವರ ಪತಿ. ಸೈನಿಕರಾಗಿರುವ ಇವರು ಪ್ರಸ್ತುತ ಚಂಡೀಗಢದಲ್ಲಿದ್ದಾರೆ. 

ಕೊರೋನಾ ಕಾರಣದ ಲಾಕ್‌ಡೌನ್‌ಗೆ ಕೆಲವು ದಿನಗಳ ಮುಂಚೆಯಷ್ಟೆ ಡಾರೆಲ್ ಮಂಗಳೂರಿಗೆ ಬಂದಿದ್ದಾರೆ. ಹಾಗಾಗಿ ಅವರಿಗೆ ನಂತರದ ದಿನಗಳಲ್ಲಿ ಈ ಅವಕಾಶ ಒದಗಿ ಬರಲಿಲ್ಲ. 

"ನನ್ನದು ಕೊರೋನಾ ಆರಂಭ ದಿನಗಳ ಜಾಗೃತಿ ಸಂದೇಶ ಧ್ವನಿಯಾದದ್ದರಿಂದ ಬೈದವರೆ ಜಾಸ್ತಿ ಇರಬಹುದು. ಹಾಗಾಗಿ ನಾನು ಕೂಡ ಇದು ನನ್ನ ಧ್ವನಿ ಎಂದು ಹೇಳುವ ಸ್ಥಿತಿ ಇರಲಿಲ್ಲ. ಆದರೆ ನಂತರದ ದಿನಗಳಲ್ಲಿ  ಈ ಜಾಗೃತಿಯ ಅನಿವಾರ್ಯತೆ ಜನಗಳಿಗೆ ಮನದಟ್ಟಾಯಿತು. ಜಾಗೃತಿ ಮೂಡಿಸಿದ ಹೆಮ್ಮೆ ನನಗೂ ಇದೆ" ಎನ್ನುತ್ತಾರೆ ಡಾರೆಲ್ ಜೆಸಿಕಾ.

ಕೋಟ್ಯಾಂತರ ಕಿವಿಗಳಿಗೆ ತಟ್ಟಿದ ಕೊರೋನಾ ಜಾಗೃತಿಯ ಧ್ವನಿ ಸುಳ್ಯದ್ದು!

ವಿದ್ಯಾ ನಾರಾಯಣ ಭಟ್
 
ಕನ್ನಡ ಭಾಷೆಯ ಎರಡು ಮತ್ತು ಮೂರನೆಯ ಹಂತದಲ್ಲಿ ಜಾಗೃತಿ ಸಂದೇಶಕ್ಕೆ ಧ್ವನಿ ನೀಡಿದವರು ವಿಟ್ಲದ ಮುಳಿಯದವರಾದ ವಿದ್ಯಾ ನಾರಾಯಣ ಭಟ್. 

ಮುಳಿಯದ ಗೋಪಾಲಕೃಷ್ಣ ಭಟ್, ವಾಣಿ ಭಟ್ ದಂಪತಿಯ ಪುತ್ರಿಯಾಗಿರುವ ವಿದ್ಯಾ ಅವರು ಮುಚ್ಚೂರುಪದವು, ಅಳಿಕೆ, ಮೂಡಬಿದಿರೆಗಳಲ್ಲಿ ಶಿಕ್ಷಣ ಪೂರೈಸಿದ ಬಳಿಕ ಕಾಸರಗೋಡಿನ ಸಿ.ಪಿ.ಸಿ.ಆರ್.ಐ ಯಲ್ಲಿ ಸೈಂಟಿಸ್ಟ್ ಆಗಿದ್ದ ಪುತ್ತೂರು ಮೂಲದ ಡಾ| ನಾರಾಯಣ ಭಟ್ ಅವರೊಂದಿಗೆ ವಿವಾಹವಾಯಿತು. ಪತಿಯ ಉದ್ಯೋಗ ನಿಮಿತ್ತ ಶಿಲ್ಲಾಂಗ್, ಸಿಕ್ಕಿಂ, ಸೂರತ್ ಮೊದಲಾದ ಸ್ಥಳಗಳಲ್ಲಿ ನೆಲೆಸಿ 2009ರಲ್ಲಿ ದೆಹಲಿಗೆ ಬಂದರು. 

ಅದಾಗಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿದ್ದ ಅವರಿಗೆ ದೆಹಲಿಗೆ ಬಂದ ನಂತರ ಕರ್ನಾಟಕ ಸಂಘ ಉತ್ತಮ ವೇದಿಕೆ ಒದಗಿಸಿತು. `ಸೇವಂತಿ ಪ್ರಸಂಗ' ನಾಟಕದ ಸೇವಂತಿ, ' ಕಣ್ಣು' ನಾಟಕದ ಸೀತಾ ಎಂಬ ಕುರುಡಿಯ ಪಾತ್ರ ವಿದ್ಯಾ ಅವರೊಳಗಿದ್ದ ಪ್ರಬುದ್ಧ ಅಭಿನಯವನ್ನು ಅನಾವರಣಗೊಳಿಸಿತು. ರಕ್ತ ರಾತ್ರಿ, ಜೋಗಿಯ ರಾಣಿ, ಅಂತಿಗೊನೆ ಮೊದಲಾದ ನಾಟಕದ ಮೂಲಕ ರಂಗ ಸಾಮರ್ಥ್ಯ ಮೆರೆದರು. ಅದು ಇನ್ನಷ್ಟು ಅವಕಾಶಗಳ ಬಾಗಿಲು ತೆರೆಯಿತು. ವಾಯ್ಸ್ ಓವರ್ ಅವಕಾಶವೂ ಬಂತು. ಮುಂದೆ ಸರವು ಕೃಷ್ಣ ಭಟ್ ಮಾರ್ಗದರ್ಶನದಲ್ಲಿ ವಿದ್ಯಾ ಕೂಡ ಈ ರಂಗದಲ್ಲಿ ಸಕ್ರಿಯರಾದರು. ದೂರದರ್ಶನದ ಗ್ರಾಮವಿಕಾಸ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಂಡರು, ರೇಡಿಯೋಗಳಲ್ಲಿ ಧ್ವನಿ ಕಲಾವಿದರಾಗಿ, ರೇಡಿಯೋ ನಾಟಕದಲ್ಲಿ ಪಾತ್ರಧಾರಿಯಾಗಿ ಕಾಣಿಸಿಕೊಂಡರು. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಕಿಸಾನ್ ಮಾನ್ ಧನ್ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಮೊದಲಾದ ಪ್ರಕಟಣೆಗಳಿಗೆ ಧ್ವನಿ ನೀಡಿದರು. ಕೊರೋನಾ ಕುರಿತ ಎರಡು ಹಾಗೂ ಮೂರನೆ ಹಂತದ ಸಂದೇಶಕ್ಕೂ ಧ್ವನಿ ನೀಡಿದರು. 

"ಲಾಕ್‌ಡೌನ್ ದಿನಗಳಲ್ಲಿ ಜನ ಟಿ.ವಿ.ಯ ಮುಂದೆ ಕುಳಿತುಕೊಳ್ಳುವುದಕ್ಕಿಂತ ಫೋನ್ ಕರೆಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಹೀಗಾಗಿ ನಮ್ಮ ಧ್ವನಿಯೂ ಸಾಕಷ್ಟು ಪ್ರಸಿದ್ಧಿ ಪಡೆಯಿತು. ನಿರ್ಣಾಯಕ ಸಂದರ್ಭದ ಒಂದು ದೊಡ್ಡ ಜಾಗೃತಿ ಅಭಿಯಾನದಲ್ಲಿ ಸಣ್ಣ ಪಾತ್ರ ವಹಿಸಿದ ತೃಪ್ತಿ ನನಗಿದೆ " ಎನ್ನುತ್ತಾರೆ ವಿದ್ಯಾ ನಾರಾಯಣ ಭಟ್.

ಟಿಂಟು ಮೋಳ್ ಜೋಸೆಫ್

ವಿಶೇಷವೆಂದರೆ ಕೇರಳ ರಾಜ್ಯಕ್ಕೆಂದು ತಯಾರಾದ ಮಲಯಾಳಂ ಜಾಗೃತಿ ಸಂದೇಶಕ್ಕೆ ಧ್ವನಿ ನೀಡಿದವರು ಕೂಡ ದಕ್ಷಿಣ ಕನ್ನಡ ಜಿಲ್ಲೆಯವರದ್ದೇ. ಇವರ ಕುರಿತಂತೆ ಈಗಾಗಲೇ ಮಲಯಾಳಂ ಮತ್ತು ಕನ್ನಡ ಮಾಧ್ಯಮಗಳಲ್ಲಿ ದೊಡ್ಡ ಹವಾ ಎದ್ದಿದೆ.

ಪ್ರಸುತ್ತ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಬಲ್ನಾಡುಪೇಟೆಯಲ್ಲಿ ವಾಸ್ತವ್ಯವಿರುವ ಟಿ.ವಿ.ಜೋಸೆಫ್ ಹಾಗೂ ಅಲೀಸಾ ದಂಪತಿಯ ಪುತ್ರಿಯಾಗಿರುವ ಟಿಂಟು ಮೋಳ್ ಜೋಸೆಫ್ ಈ ಧ್ವನಿ ನೀಡಿದ್ದಾರೆ. 

ಕೇರಳದ ಕೊಟ್ಟಾಯಂ ಮೂಲದ ಈ ಕುಟುಂಬ 24 ವರ್ಷಗಳ ಹಿಂದೆ ಸುಳ್ಯ ಪರಿಸರಕ್ಕೆ ಬಂದಿತ್ತು. ಕಡಬ, ಮೊಡಂಕಾಪು, ಮಂಗಳೂರಿನ ಸೈಂಟ್ ಆಗ್ನೇಸ್ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಟಿಂಟು ಮೋಳ್ ಜೋಸೆಫ್ ಕಲಿಕೆಯಲ್ಲೂ, ಸ್ಪೋರ್ಟ್ಸ್‌ನಲ್ಲಿಯೂ ಅಗ್ರಸ್ಥಾನಿಯಾಗಿದ್ದರು. ಮುಂದೆ ಸ್ನಾತಕೋತ್ತರ ಶಿಕ್ಷಣಕ್ಕೆ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಸೀಟು ದೊರೆಯಿತು. ಐ.ಎ.ಎಸ್ ಅಧಿಕಾರಿಯಾಗುವ ಕನಸಿನೊಂದಿಗೆ ದೆಹಲಿಯ ರೈಲು ಹತ್ತಿದರು. 

ಜೆ.ಎನ್.ಯುನಲ್ಲಿ ವಿದ್ಯಾರ್ಥಿಯಾಗಿದ್ದಾಗ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪ್ರತಿಭೆ ಅನಾವರಣಗೊಂಡಿತು. ಅಲ್ಲೇ ಕನ್ನಡ ಪೀಠದ ಮುಖ್ಯಸ್ಥರಾದ ಡಾ| ಪುರುಷೋತ್ತಮ ಬಿಳಿಮಲೆಯವರ ಪರಿಚಯವಾಯಿತು. ಕಲಿಕೆ ಮುಗಿಯುತ್ತಿದ್ದಂತೆ ಬಿಳಿಮಲೆಯವರ ಶಿಫಾರಸಿನಂತೆ ಸರವು ಕೃಷ್ಣ ಭಟ್ ಅವರ ನೆರವಿನೊಂದಿಗೆ ವಾಯ್ಸ್ ಓವರ್ ರಂಗದ ಫೀಲ್ಡಿಗಿಳಿದರು. ವಿಶೇಷವೆಂದರೆ ಟಿಂಟು ಮೋಳ್ ಹೋದದ್ದು ಕನ್ನಡ  ಧ್ವನಿ ನೀಡಲು. ಕೆಲವು ಪ್ರಕಟಣೆಗಳಿಗೆ ನೀಡಿದರೂ ಕೂಡಾ. ಆದರೆ ಮಲಯಾಳಂ ಕೂಡಾ ಕರಗತವಾಗಿರುವ ಟಿಂಟು ಮೋಳ್ ಅವರಿಗೆ ಅಲ್ಲೇ ಯಥೇಚ್ಛ ಅವಕಾಶ ಒದಗಿ ಬಂತು. ಟಿ.ವಿ., ರೇಡಿಯೋಗಳಲ್ಲಿ ಮಿಂಚತೊಡಗಿದರು. ಕೊರೋನಾ ಜಾಗೃತಿಯ ಧ್ವನಿ ಸಂದೇಶ ನೀಡುವ ಅವಕಾಶವೂ ಒದಗಿ ಬಂತು. ಮಲಯಾಳಂ ನಲ್ಲಿ ಮೂರು ಹಂತದ ಜಾಗೃತಿ ಸಂದೇಶಗಳಿಗೂ ಅವರೇ ಧ್ವನಿ ನೀಡಿದ್ದು ಈಗ ಗೂಗಲ್ ಪ್ರಶ್ನೋತ್ತರ,  ಹೋಂ ಕ್ವಾರಂಟೈನ್ ಕುರಿತಾದ ಪ್ರಕಟಣೆಗಳಿಗೂ ಅವರದ್ದೇ ಧ್ವನಿ ಇದೆ.

ಉತ್ತಮ ನಾಟಕ  ಕಲಾವಿದೆಯೂ ಆಗಿರುವ ಟಿಂಟು ಅಭಿನಯದ ರಾಣಿ ಅಬ್ಬಕ್ಕ ನಾಟಕ, ದೇಶದ ರಾಜಧಾನಿಯಲ್ಲಿ ಕನ್ನಡ ನಾಡಿನ ವೀರ ವಿಪ್ಲವದ ಕಥೆ ಹೇಳಿತು. ನೃತ್ಯ ಕಲಾವಿದೆಯೂ ಶಗಿರುವ  ಅವರು ಕೂಚುಪುಡಿ, ಕಳರಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. ದೆಹಲಿಯ ಸಾಂಸ್ಕೃತಿಕ ರಾಯಭಾರಿಯಂತೆ ಕ್ರಿಯಾಶೀಲರಾಗಿದ್ದಾರೆ. ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ಪ್ರೇರಕ ಶಕ್ತಿಯಾಗಿದ್ದಾರೆ.

"ಈ ಧ್ವನಿ ಸಂದೇಶ ಟಿ.ವಿ.ಯಲ್ಲೋ, ರೇಡಿಯೋದಲ್ಲೋ ಬರುಬಹುದೆಂಬ ನಿರೀಕ್ಷೆಯಿಂದ ಧ್ವನಿ ನೀಡಿದ್ದೆ. ಆದರೆ ಫೋನ್‌ಗಳಲ್ಲಿ ಬಂದು ಇಷ್ಟು ದೊಡ್ಡ ಮಟ್ಟದಲ್ಲಿ ಜಾಗೃತಿ ಆಗುವಂತಾಯಿತು. ಈ ಮಹಾನ್ ದೌತ್ಯದಲ್ಲಿ ನಾನೂ ಭಾಗವಾಗಿರುದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ" ಟಿಂಟು ಮೋಳ್ ಜೋಸೆಫ್.

ಸರವು ಕೃಷ್ಣ ಭಟ್

ಒಂದು ರೀತಿಯಲ್ಲಿ ಈ ಮೂವರೂ ಕಲಾವಿದರಿಗೆ ಸಹಕಾರ ಮತ್ತು ಮಾರ್ಗದರ್ಶನ ನೀಡಿದವರು, ಅವರ ಪ್ರತಿಭೆ ಬೆಳಗಲು ಕಾರಣರಾದವರು ದಕ್ಷಿಣ ಕನ್ನಡ ಮೂಲದವರೇ ಆದ ಸರವು ಕೃಷ್ಣ ಭಟ್. ಯಕ್ಷಗಾನ ಕಲಾವಿದರೂ ಆಗಿರುವ ಅವರು ಅನೇಕ ವರ್ಷಗಳಿಂದ ದೆಹಲಿಯಲ್ಲಿ ಶಿಕ್ಷಣ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ವಾಯ್ಸ್ ಆರ್ಟಿಸ್ಟ್ ಹಾಗೂ ಅನುವಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟಿ.ವಿ., ರೇಡಿಯೋಗಳಿಗಾಗಿ ಧ್ವನಿ ನೀಡಿದ್ದಾರೆ.

"ದಕ್ಷಿಣ ಕನ್ನಡ ಮೂಲದವರಲ್ಲಿ  ಭಾಷಾ ಶುದ್ಧಿ ಮತ್ತು ಸ್ಪಷ್ಟತೆ ಹೆಚ್ಚು ಎಂಬ ಮಾತಿದೆ. ಇದು ಇಲ್ಲಿನವರು ಇಂತಹ ಅವಕಾಶಗಳನ್ನು ಪಡೆಯುದಕ್ಕೂ ಸಾಧ್ಯವಾಗಿದೆ ಎನ್ನುತ್ತಾರೆ" ಸರವು ಕೃಷ್ಣ ಭಟ್.

ಏನೇ ಇರಲಿ, ಜಗತ್ತಿಗೇ ಬಾಧಿಸಿದ ಕೊರೋನಾ ಮಹಾಮಾರಿಯ ಸಂದರ್ಭ ಕೋಟ್ಯಾಂತರ ಕಿವಿಗಳಿಗೆ ತಟ್ಟಿದ, ಮುಟ್ಟಿದ ಆ ಮೂಲಕ ಜಾಗೃತಿಯ ಸಂದೇಶ ನೀಡಿದ ಮೂವರು ಮತ್ತು ಅದಕ್ಕೆ ಕಾರಣರಾದವರು ದಕ್ಷಿಣ ಕನ್ನಡದವರು ಎಂಬುದು ವಿಶೇಷವೇ ಸರಿ.

Follow Us:
Download App:
  • android
  • ios