ಬೆಂಗಳೂರು :  ಮಾಧ್ಯಮ ಕ್ಷೇತ್ರ ವಾಣಿಜ್ಯೋದ್ಯಮವಾಗಿ ಬದಲಾಗಿದೆ. ಈ ಬದಲಾವಣೆ ಸ್ವಾಭಾವಿಕವಾಗಿ ಕಲುಷಿತ ವಾತಾವರಣ ಸೃಷ್ಟಿಮಾಡಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಕನ್ನಡಪ್ರಭ’ ಪತ್ರಿಕೆಯ ಹಿರಿಯ ಸಿನಿಮಾ ವರದಿಗಾರ ದೇಶಾದ್ರಿ ಹೊಸ್ಮನೆ (ಅರಗಿಣಿ ಪ್ರಶಸ್ತಿ), ಮಂಡ್ಯ ಜಿಲ್ಲೆ ಪ್ರಧಾನ ವರದಿಗಾರ ಕೆ.ಎನ್‌.ರವಿಕುಮಾರ್‌ (ವಾರ್ಷಿಕ ಪ್ರಶಸ್ತಿ) ಹಾಗೂ ಹಿರಿಯ ಪತ್ರ​ಕರ್ತ ಧರ್ಮ​ಪ​ರವು ಬಾಲಾಜಿ ಅವರಿಗೆ ‘ಜೀವಮಾನ ಸಾಧನೆ ವಿಶೇಷ ಪ್ರಶಸ್ತಿ’ ಸೇರಿ​ದಂತೆ ಒಟ್ಟು 56 ಮಂದಿ ಪತ್ರ​ಕ​ರ್ತ​ರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡ ಮಾಡುವ 2018ನೇ ಸಾಲಿನ ‘ವಾರ್ಷಿಕ ಪ್ರಶಸ್ತಿ’ಯನ್ನು ಸೋಮವಾರ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್‌ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಡಾ.ಜಿ.ಪರಮೇಶ್ವರ್‌, ಮಾಧ್ಯಮದಲ್ಲಿ ಇರುವವರು ಈಗಲೂ ಮನೆಯಿಲ್ಲದೆ, ಊಟಕ್ಕೆ ಹಣವಿಲ್ಲದೆ ವೃತ್ತಿ ಜೀವನ ನಡೆಸುವವರಿದ್ದಾರೆ. ಅನೇಕ ಹಿರಿಯರು ತೋರಿದ ಹಾದಿಯಲ್ಲಿ ಪತ್ರಕರ್ತರು ಸಾಗುತ್ತಿದ್ದಾರೆ. ಆದರೆ ಇಂದು ಮಾಧ್ಯಮ ಕ್ಷೇತ್ರ ವಾಣಿಜ್ಯೋದ್ಯಮವಾಗಿ ಬದಲಾಗಿದೆ. ಈ ಬದಲಾವಣೆ ಸ್ವಾಭಾವಿಕವಾಗಿ ಕಲುಷಿತ ವಾತಾವರಣ ಸೃಷ್ಟಿಮಾಡಿದೆ. ಮಾಧ್ಯಮ ಕ್ಷೇತ್ರ ಸಮಾಜ ಪ್ರತಿಬಿಂಬವಾಗಿ ನೈಜಸ್ಥಿತಿಯನ್ನು ಜನ ಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕಾಗಿದೆ. ಆದರೆ, ಅದನ್ನು ಮರೆತಿರುವಂತೆ ಕಾಣುತ್ತಿದೆ. ಇದು ಮುಂದೊಂದು ದಿನ ಸಮಾಜಕ್ಕೆ ಮಾರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, ಕಲಾವಿದರು ಬಣ್ಣ ಹಾಕಿ ನಟಿಸುತ್ತಾರೆ. ಆದರೆ, ರಾಜಕಾರಣಿಗಳು ಬಣ್ಣ ಹಾಕದೆ ನಾಟಕ ಮಾಡುತ್ತೇವೆ. ಮಾಧ್ಯಮಗಳು ಆ ನಾಟಕವನ್ನು ವಿಜೃಂಭಿಸಿ ಬಿಂಬಿಸುತ್ತವೆ. ನಮ್ಮನ್ನು ನೋಡಿ ಮಕ್ಕಳು ಕಳ್ಳ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಸ್ತಂಭ ಮಾಧ್ಯಮ ಎಂದು ಗುರುತಿಸಲಾಗುತ್ತದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಸಮತೋಲನದಿಂದ ಕೆಲಸ ಮಾಡುತ್ತಿವೆ. ಅದು ಮಾಧ್ಯಮಗಳಿಗೂ ಅನ್ವಯವಾಗಬೇಕು. ಅದು ಸಮಾಜದ ಮೇಲೆ ಪರಿಣಾಮ ಬೀರುವಂತಾಗಿದೆ ಎಂದರು.

ರಾಜಕೀಯ ಮರ್ಡರ್‌:  ಬ್ರೇಕಿಂಗ್‌ ನ್ಯೂಸ್‌ನ ಬೆನ್ನತ್ತಿ ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳಿಂದ ರಾಜಕೀಯ ಮರ್ಡರ್‌ಗಳಾಗಿವೆ. ಅನೇಕ ನಾಯಕರು ಮಾಧ್ಯಮಗಳ ಸುದ್ದಿಗಳಿಂದಾಗಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕಾಗಿದೆ. ಹಲವು ವರ್ಷಗಳ ಕಾಲ ಮನೆ, ಸಂಸಾರವನ್ನು ಬಿಟ್ಟು ಕೆಲಸ ಮಾಡುವ ರಾಜಕಾರಣಿಗಳ ಇಡೀ ವೃತ್ತಿ ಜೀವನವನ್ನು ಸಾಯಿಸಲಾಗುತ್ತಿದೆ. ಹೀಗೆ ನಾಯಕರನ್ನು ಸಾಯಿಸಿದರೆ ಅಂತಹವರನ್ನು ಮತ್ತೆ ಹುಟ್ಟು ಹಾಕಲು ಸಾಧ್ಯವಿಲ್ಲ. ನಾವು ರಾಜಕೀಯ ಮಾಡಿದರೂ, ನಮ್ಮ ಕುಟುಂಬದವರಿಗೆ ಅರ್ಧ ಗಂಟೆ ಸಮಯ ಕೊಡಲಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದೇವೆ. ಅದನ್ನೆಲ್ಲ ಅರ್ಥ ಮಾಡಿಕೊಂಡು ಸತ್ಯವನ್ನು ಸುದ್ದಿ ಬಿತ್ತರಿಸಬೇಕು. ಸಮಾಜವನ್ನು ಒಟ್ಟುಗೂಡಿಸುವ ಕೆಲಸವಾಗಬೇಕು. ಅದಕ್ಕಿಂತ ಹೆಚ್ಚಾಗಿ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ವಾರ್ತಾ ಇಲಾಖೆ ನಿರ್ದೇಶಕ ಎಂ.ರವಿಕುಮಾರ್‌, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು, ಶಾಸಕ ವೆಂಕಟಪ್ಪ ನಾಯಕ, ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಎಚ್‌.ಕಾಂತರಾಜ್‌, ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ದಿನೇಶ್‌ ಉಪಸ್ಥಿತರಿದ್ದರು.

ಜೀವಮಾನ ಸಾಧನೆಗೆ ನೀಡುವ ವಿಶೇಷ ಪ್ರಶಸ್ತಿಗೆ .50 ಸಾವಿರ ನಗದು, ವಾರ್ಷಿಕ ಪ್ರಶಸ್ತಿಗೆ .25 ಸಾವಿರ ನಗದು ಹಾಗೂ ವಿವಿಧ ವಿಭಾಗಗಳ ಪ್ರಶಸ್ತಿಗೆ ತಲಾ .10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.

ವಾರ್ಷಿಕ ಪ್ರಶಸ್ತಿ ಪುರಸ್ಕೃತರು

ರಾಜು ವಿಜಾಪುರ- ಡೆಕ್ಕನ್‌ ಹೆರಾಲ್ಡ್‌, ಪ್ರೇಮಕುಮಾರ್‌ ಹರಿಯಬ್ಬೆ- ಪ್ರಜಾವಾಣಿ, ಬಿ.ಎಸ್‌.ಸತೀಶಕುಮಾರ್‌- ದಿ ಹಿಂದೂ, ರಾಮು ಪಾಟೀಲ್‌- ಇಂಡಿಯನ್‌ ಎಕ್ಸ್‌ಪ್ರೆಸ್‌, ಕೆ.ಎಸ್‌.ಜನಾರ್ಧನಾಚಾರಿ- ಈ ಸಂಜೆ, ವಿಶ್ವನಾಥ ಸುವರ್ಣ- ಪ್ರಜಾವಾಣಿ, ಮೋಹನ ಹೆಗಡೆ- ವಿಜಯವಾಣಿ, ಭಾನುತೇಜ್‌- ಎಕನಾಮಿಕ್‌ ಟೈಮ್ಸ್‌, ಜಿ.ಎಂ.ಕುಮಾರ್‌- ಬಿ ಟಿವಿ, ಕೆ.ಎನ್‌.ಚನ್ನೇಗೌಡ- ವಿಜಯವಾಣಿ, ಮರಿಯಪ್ಪ ಕೆ.ಜೆ.- ಪ್ರಜಾವಾಣಿ, ಅನಿಲ್‌ಕುಮಾರ್‌- ನ್ಯೂಸ್‌ 9, ಕೆ.ಎನ್‌.ನಾಗೇಶ ಕುಮಾರ್‌- ಸಿನಿಮಾ ಛಾಯಾಗ್ರಾಹಕ, ಮೋಹನಕುಮಾರ್‌- ಛಾಯಾಗ್ರಾಹಕ, ರಾಜು ನದಾಫ್‌- ವಿಜಯ ಕರ್ನಾಟಕ, ಪ್ರಕಾಶ ಕುಗ್ವೆ- ಪ್ರಜಾವಾಣಿ, ಎಚ್‌.ಬಿ.ಮಂಜುನಾಥ್‌- ಉದಯವಾಣಿ, ಪಾ.ಶ್ರೀ. ಅನಂತರಾಂ- ವಿಜಯವಾಣಿ, ಕಾಗತಿ ನಾಗರಾಜಪ್ಪ- ಉದಯವಾಣಿ, ಪ್ರಕಾಶ ಶೆಟ್ಟಿ- ವ್ಯಂಗ್ಯಚಿತ್ರಕಾರ, ಎನ್‌.ಎಸ್‌.ಸುಭಾಷಚಂದ್ರ- ಇಂಡಿಯನ್‌ ಎಕ್ಸ್‌ಪ್ರೆಸ್‌, ಮಂಜುಶ್ರೀ ಕಡಕೋಳ- ಪ್ರಜಾವಾಣಿ ಸೇರಿದಂತೆ 50 ಮಂದಿಗೆ ಪ್ರಶಸ್ತಿ ನೀಡಲಾಯಿತು.

ವಿಶೇಷ ಪ್ರಶಸ್ತಿಗಳು

ತಳ ಸಮುದಾಯದ ಬಗೆಗಿನ ಬರಹಗಳ ಅಂಕಣಕಾರರಿಗೆ ನೀಡುವ ‘ಡಾ. ಬಿ.ಆರ್‌.ಅಂಬೇಡ್ಕರ್‌ ಮೂಕನಾಯಕ ಪ್ರಶಸ್ತಿ-2018’ ಗೆ ಹಿರಿಯ ಪತ್ರಕರ್ತ ಡಾ.ಸಿ.ಎಸ್‌.ದ್ವಾರಕಾನಾಥ್‌ ಭಾಜನರಾಗಿದ್ದರೆ, ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ‘ಆಂದೋಲನ ಪ್ರಶಸ್ತಿ- 2018’ಗೆ ಕೋಲಾರವಾಣಿ, ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ‘ಅಭಿಮಾನಿ ಪ್ರಶಸ್ತಿಗೆ’ ವಿಜಯವಾಣಿಯ ಪರಮೇಶ್ವರ ಭಟ್‌, ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ‘ಮೈಸೂರು ದಿಗಂತ ಪ್ರಶಸ್ತಿ-2018’ಗೆ ‘ಇಂದು ಸಂಜೆ’ ಪತ್ರಿಕೆಯ ಜಿ.ಎನ್‌.ನಾಗರಾಜು ಅವರನ್ನು ಪುರಸ್ಕರಿಸಲಾಯಿತು.