ಪೈಗಂಬರ್ ಅವಹೇಳನ ಆರೋಪ, ಬೆಂಗಳೂರು ಪೂರ್ವ ಧಗಧಗ: ಗೋಲಿಬಾರ್‌ಗೆ 2 ಬಲಿ!
ಗೋಲಿಬಾರ್‌ಗೆ 1 ಬಲಿ| ಪೈಗಂಬರ್ ಅವಹೇಳನ ಆರೋಪ| ಕಾವಲ್ ಬೈರಸಂದ್ರದಲ್ಲಿ ವ್ಯಾಪಕ ಹಿಂಸಾಚಾರ| ಪೊಲೀಸ್ ಗೋಲಿಬಾರ್‌ಗೆ ಇಬ್ಬರು ಬಲಿ| ಶಾಸಕ ಅಖಂಡ ಮನೆ ಉದ್ರಿಕ್ತರ ಕಿಚ್ಚಿಗೆ ಭಸ್ಮ| ಪೊಲೀಸರ ವಾಹನಕ್ಕೆ ಬೆಂ| 50ಕ್ಕೂ ಹೆಚ್ಚು ವಾಹನಗಳು ಧ್ವಂಸ| ಮನೆಗಳಿಗೆ ನುಗ್ಗಿ ಹಿಂಸೆ| ಡಿ.ಜೆ. ಹಳ್ಳಿ ಪೊಲೀಸ್ ಠಾಣೆ, ಶಾಸಕರ ನಿವಾಸಕ್ಕೆ ಕಲ್ಲೆಸೆತ| ಮಾರಕಾಸ್ತ್ರ ಹಿಡಿದು ಪುಂಡಾಟಿಕೆ
ಬೆಂಗಳೂರು(ಆ.12): ಇಸ್ಲಾಂ ಧರ್ಮಗುರು ಮಹಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ರಾಜಧಾನಿಯ ಕಾವಲ್ ಬೈರಸಂದ್ರದಲ್ಲಿ ಮಂಗಳವಾರ ರಾತ್ರಿ ವ್ಯಾಪಕ ಹಿಂಸಾಚಾರ ನಡೆಸಲಾಗಿದೆ.
ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸ, ಸುತ್ತಲಿನ ಮನೆಗಳು ಹಾಗೂ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಉದ್ರಿಕ್ತ ಮುಸ್ಲಿಮರ ಗುಂಪು ದಾಂಧಲೆ ನಡೆಸಿ, ಸಿಕ್ಕ ಸಿಕ್ಕ ವಾಹನಗಳು, ಮನೆ- ಮಳಿಗೆಗಳಿಗೆ ಬೆಂಕಿ ಹಚ್ಚಿದೆ. ಶಾಸಕರ ನಿವಾಸ ಹಾಗೂ ಪಕ್ಕದ ಮನೆ ಭಸ್ಮವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದು, ಇಬ್ಬರು ವ್ಯಕ್ತಿ ಬಲಿಯಾಗಿದ್ದಾನೆ.
ದಾಂಧಲೆಯ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ: ಗೃಹ ಸಚಿವ ಬಸವರಾಜ ಬೊಮ್ಮಾಯಿ
ನೂರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತರ ಗುಂಪು ಮಾರಕಾಸ್ತ್ರಗಳನ್ನು ಹಿಡಿದು ಹಿಂಸಾಚಾರ ನಡೆಸಿದೆ. ಪಟಾಕಿ ಸಿಡಿಸಿ ವಿಕೃತಿ ಮೆರೆದಿದೆ. ಇದರಿಂದಾಗಿ ಅಖಂಡ ಶ್ರೀನಿವಾಸಮೂರ್ತಿ ನಿವಾಸ ಹಾಗೂ ಅವರ ಮನೆ ಸುತ್ತಲಿನ ಪ್ರದೇಶ ರಾತ್ರಿಯಿಡೀ ಅಕ್ಷರಶಃ ಹೊತ್ತಿ ಉರಿದಿದ್ದು, ಕಾವಲ್ ಬೈರಸಂದ್ರ ಭಾಗದ ನಿವಾಸಿಗಳು ಆತಂಕದಲ್ಲಿ ಮುಳುಗುವಂತಾಗಿದೆ. ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ಆವರಣಕ್ಕೂ ನುಗ್ಗಿದ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ, ಇನ್ನೋವಾ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನೂ ಸುಟ್ಟು ಹಾಕಿದ್ದಾರೆ. ಹೊಯ್ಸಳ ವಾಹನ ಹಾಗೂ ಪೊಲೀಸರ ಬೈಕ್‌ಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಕೆಲವರ ಮನೆಗಳಿಗೂ ನುಗ್ಗಿದ ಉದ್ರಿಕ್ತರ ಗುಂಪು ಪುಂಡಾಟ ನಡೆಸಿದೆ. ಒಟ್ಟಾರೆ ಈ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಇದನ್ನು ನೋಡಿದರೆ ಪೂರ್ವ ನಿಯೋಜಿತ ಕೃತ್ಯದಂತೆ ಕಂಡು ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಾಸಕರ ಬಂಧುವೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೈಗಂಬರ್ ಅವಹೇಳನ ಮಾಡಿದ್ದಾನೆ ಎಂದು ರಾತ್ರಿ 9.30ರ ಸುಮಾರಿಗೆ ಹಿಂಸಾಚಾರ ಆರಂಭವಾಯಿತು. ನೋಡನೋಡುತ್ತಿದ್ದಂತೆ ಪರಿಸ್ಥಿತಿ ಕೈಮೀರಿತು. ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದರು. ಇಷ್ಟಾದರೂ ಉದ್ರಿಕ್ತರನ್ನು ನಿಯಂತ್ರಿಸಲಾಗಲಿಲ್ಲ. ಪರಿಸ್ಥಿತಿ ಕೈಮೀರುವ ಸುಳಿವು ಲಭಿಸಿದ ಹಿನ್ನೆಲೆಯಲ್ಲಿ ಮಧ್ಯರಾತ್ರಿ 12.30ರ ಸುಮಾರಿಗೆ ಗಾಳಿಯಲ್ಲಿ ಗುಂಡು ಹಾರಿಸಿದರು. ಆಗ ಒಬ್ಬ ವ್ಯಕ್ತಿ ಮೃತನಾಗಿದ್ದಾನೆ.
ಏನಿದು ಘಟನೆ?:
ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಹೋದರ ಸಂಬಂಧಿ ನವೀನ್ ಎಂಬಾತ ಮಹಮದ್ ಪೈಗಂಬರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ವಿಷಯ ತಿಳಿದ ಮುಸ್ಲಿಂ ಸಮುದಾಯದ ಐದು ನೂರಕ್ಕೂ ಹೆಚ್ಚು ಮಂದಿ ಮಂಗಳವಾರ ರಾತ್ರಿ 9.30ರ ಸುಮಾರಿಗೆ ಏಕಾಏಕಿ ಕಾವಲ್ ಬೈರಸಂದ್ರದಲ್ಲಿನ ಶಾಸಕರ ಮನೆ ಬಳಿ ಜಮಾಯಿಸಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳ ಗುಂಪು ಶಾಸಕರ ಮನೆ ಒಳಗೆ ಪ್ರವೇಶಿಸಲು ಯತ್ನಿಸಿತು. ಆ ಸಂದರ್ಭ ಗುಂಪೊಂದು ಏಕಾಏಕಿ ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಿದೆ.
ಬೆಂಗ್ಳೂರಲ್ಲಿ ಪುಂಡರ ದಾಂಧಲೆ, ಶಾಸಕರ ಮನೆ ಮೇಲೆ ದಾಳಿ, ಸುವರ್ಣ ವರದಿಗಾರರ ಮೇಲೆ ಹಲ್ಲೆ
ಈ ವೇಳೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಅವರ ಕುಟುಂಬಸ್ಥರು ಇರಲಿಲ್ಲ. ಘಟನೆಯಲ್ಲಿ ಶಾಸಕರ ಮನೆ ಕಿಟಕಿ ಗಾಜು ಪುಡಿಪುಡಿಯಾಗಿದೆ. ನೋಡನೋಡುತ್ತಿದ್ದಂತೆ ಕಿಡಿಗೇಡಿಗಳ ಗುಂಪು ಶಾಸಕರ ನೆರೆ ಮನೆಗಳ ಮೇಲೂ ಕಲ್ಲು ತೂರಿದೆ. ಶಾಸಕರ ಮನೆ ಬಳಿ ಇದ್ದ ರಸ್ತೆಗಳನ್ನು ಬಂದ್ ಮಾಡಿದೆ. ಸ್ಥಳದಲ್ಲಿದ್ದ ಬೆರಳಣಿಕೆಯಷ್ಟುಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ. ಇದಕ್ಕೆ ಬಗ್ಗದ ದುಷ್ಕರ್ಮಿಗಳು ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷಣಾರ್ಧದಲ್ಲಿ ಗುಂಪು ಘೋಷಣೆ ಕೂಗುತ್ತಾ ಗುಂಪು ಗುಂಪಾಗಿ ಮನೆ ಬಳಿ ನಿಲುಗಡೆ ಮಾಡಲಾಗಿದ್ದ ದ್ವಿಚಕ್ರ ವಾಹನಗಳು ಹಾಗೂ ಕಾರಿಗೆ ಬೆಂಕಿ ಹಾಕುತ್ತಾ ಹೊರಟಿದೆ. ಇದರಿಂದ ಹೆದರಿದ ನೆರೆ-ಮನೆ ನಿವಾಸಿಗಳು ಮಕ್ಕಳನ್ನು ಕರೆದುಕೊಂಡು ಆತಂಕದಲ್ಲಿ ಹೊರಗೆ ಓಡಿ ಬರುತ್ತಿದ್ದ ದೃಶ್ಯಗಳು ಕಂಡುಬಂದಿವೆ. ಇನ್ನು ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರ ಮೊಬೈಲ್‌ಗಳನ್ನು ದುಷ್ಕರ್ಮಿಗಳು ಕಸಿದಿದ್ದಾರೆ ಎಂದು ಹೇಳಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಆತಂರಿಕ ಭದ್ರತಾ ಠಾಣೆಯಲ್ಲಿ ಮೊದಲ ಕೇಸ್ ದಾಖಲು: ಭಾಸ್ಕರ್ ರಾವ್
ಏನಾಯ್ತು?
ಶಾಸಕರ ಸಂಬಂಧಿಯಿಂದ ಪೈಂಗಬರ್ ಬಗ್ಗೆ ಅವಹೇಳನ ಪೋಸ್ಟ್ ಆರೋಪ
ಶಾಸಕರ ಮನೆ ಬಳಿ ಸೇರಿದ ಉದ್ರಿಕ್ತ ಗುಂಪಿಂದ ಮನೆಗೆ ಕಲ್ಲು ತೂರಿ ಬೆಂಕಿ
ಬಳಿಕ ಶಾಸಕರ ಮನೆ ಸುತ್ತಲಿನ ರಸ್ತೆಯಲ್ಲಿದ್ದ ವಾಹನಗಳಿಗೆ ಬೆಂಕಿ
ಪೊಲೀಸ್ ಠಾಣೆ ಮೇಲೂ ದಾಳಿ, ಈ ವೇಳೆ ಫೈರಿಂಗ್ ಇಬ್ಬರು ಸಾವು