ಬೆಂಗ್ಳೂರಲ್ಲಿ ಪುಂಡರ ದಾಂಧಲೆ, ಶಾಸಕರ ಮನೆ ಮೇಲೆ ದಾಳಿ, ಸುವರ್ಣ ವರದಿಗಾರರ ಮೇಲೆ ಹಲ್ಲೆ
ಪಾದರಾಯನಪುರದ ನಂತರ ಕಾವಲ್ ಭೈರಸಂದ್ರದಲ್ಲಿ ಗಲಾಟೆ/ ಹಿಂಸಾಚಾರಕ್ಕೆ ಕಾರಣವಾದ ಸೋಶಿಯಲ್ ಮೀಡಿಯಾ ಪೋಸ್ಟ್/ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ
ಬೆಂಗಳೂರು(ಆ. 11) ಬೆಂಗಳೂರಿನ ಕಾವಲ್ ಭೈರ ಸಂದ್ರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪುಂಡರು ಕೆಜಿ ಹಳ್ಳಿ ಪೊಲೀಸ್ ಠಾಣೆ ಮೇಲೆಯೂ ದಾಳಿ ಮಾಡಿದ್ದು ಬೆಂಕಿ ಹಚ್ಚಿದ್ದಾರೆ. ಅಮಾಯಕರ ಮನೆಗೆ ನುಗ್ಗಿ ದಾಳಿ ಮಾಡುತ್ತಿದ್ದಾರೆ.
ವರದಿ ಮಾಡಲು ತೆರಳಿದ್ದ ಸುವರ್ಣ ನ್ಯೂಸ್ ವರದಿಗಾರ ಮತ್ತು ಕ್ಯಾಮರಾ ಮೆನ್ ಮೇಲೆಯೂ ಪುಂಡರು ದಾಳಿ ಮಾಡಿದ್ದಾರೆ.
ಬೆಂಗಳೂರಿನ ಕಾವಲ್ ಭೈರಸಂದ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಡಿ. ಜೆ. ಹಳ್ಳಿ ಪೊಲೀಸ್ ಠಾಣೆ ಮೇಲೂ ಪುಂಡರು ದಾಳಿ ಮಾಡಿದ್ದಾರೆ.
ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ದಾಳಿ ಮಾಡಿದ್ದ ಪುಂಡರು
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ನವೀನ್ ಸಮುದಾಯವೊಂದರ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಶಾಸಕರ ಮನೆ ಮೇಲೆ ಮಂಗಳವಾರ ರಾತ್ರಿ ಕಲ್ಲು ತೂರಾಟ ನಡೆದಿದೆ. ನಿಯಂತ್ರಣಕ್ಕೆ ತೆರಳಿದ ಪೊಲೀಸರ ಮೇಲೂ ದಾಳಿಗೆ ಪುಂಡರು ಮುಂದಾಗಿದ್ದಾರೆ.
ಶಾಸಕರ ಸಂಬಂಧಿಯೊಬ್ಬರು ಸಮುದಾಯವೊಂದಕ್ಕೆ ಅವಹೇಳನಕಾರಿಯಾಗಿ ಪೋಸ್ಟ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು ಎನ್ನುವ ವಿಚಾರ ದಾಂಧಲೆಗೆ ಕಾರಣವಾಗಿದೆ. ಶಾಸಕ ಜಮೀರ್ ಅಹಮದ್ ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಫೇಸ್ ಬುಕ್ ನಲ್ಲಿ ವೈರಲ್ ಆದ ಪೋಸ್ಟ್ ಇದೀಗ ಆಕ್ರೋಶ ಭುಗಿಲೇಳಲು ಕಾರಣವಾಗಿದೆ. ಅಮಾಯಕರ ಮೇಲೆ ಪುಂಡರು ದಾಳಿ ಮಾಡುತ್ತಿದ್ದು ಪರಿಸ್ಥಿತಿ ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಗೃಹಸಚಿವ ಬಸವರಾಜ್ ಬೊಮ್ಮಾಯಿ, ಹೆಚ್ಚಿನ ಪೊಲೀಸ್ ಪಡೆ ಕಳುಹಿಸಿಕೊಡಲಾಗಿದೆ ಎಂದು ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ. ಪೊಲೀಸ್ ಕಮಿಷನರ್ ಪಂಥ್ ಸಹ ಭೇಟಿ ನೀಡಿದ್ದಾರೆ.