ಬೆಂಗಳೂರು(ಜೂ.14): ಲೋಕೋಪಯೋಗಿ ಇಲಾಖೆಯಲ್ಲಿ 570 ಸಹಾಯಕ ಇಂಜಿನಿಯರ್ ಹಾಗೂ 300 ಕಿರಿಯ ಇಂಜಿನಿಯರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೆಎಟಿ ಈಗಾಗಲೇ ರದ್ದು ಪಡಿಸಿದೆ.

ಹೀಗಿದ್ದರೂ ಲೋಕೋಪಯೋಗಿ ಇಲಾಖೆ ಮಾತ್ರ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದೆ. ಅಲ್ಲದೇ ಅಭ್ಯರ್ಥಿಗಳ ಫಲಿತಾಂಶ ಪ್ರಕಟಿಸುವಲ್ಲೂ ವಿಳಂಬ ಮಾಡುತ್ತಿದೆ. ಇಲಾಖೆಯ ಈ ವರ್ತನೆಯಿಂದ ಬೇಸತ್ತ ಅಭ್ಯರ್ಥಿಗಳು ಟ್ವಿಟರ್ ಅಭಿಯಾನ ನಡೆಸುತ್ತಿದ್ದಾರೆ.

ಹೌದು ನ್ಯಾಯಾಲಯ ನೀಡಿದ ಆದೇಶವನ್ನು ಪಾಲಿಸದೆ, ವಿಳಂಬ ನೀತಿ ಅನುಸರಿಸುತ್ತಿರುವ ಲೋಕೋಪಯೋಗಿ ಇಲಾಖೆ ನಿಲುವನ್ನು ಖಂಡಿಸಿ ಇಲಾಖೆಯ ಕಿರಿಯ ಹಾಗೂ ಸಹಾಯಕ ಅಭಿಯಂತರ ಹುದ್ದೆಗಳ ಆಕಾಂಕ್ಷಿಗಳು ಭಾನುವಾರ (ಜೂ. 14)ರಂದು ಬೆಳಗ್ಗೆ 11 ಗಂಟೆಯಿಂದ ಟ್ವಿಟರ್ ಅಭಿಯಾನವನ್ನು ನಡೆಸುತ್ತಿದ್ದಾರೆ.

#KpwdAnyaya #Kpwdresults #Justiceforpwdstudents ಎಂಬ ಹ್ಯಾಷ್ ಟ್ಯಾಗ್‌ ಬಳಸಿ ನ್ಯಾಯ ಕೇಳುತ್ತಿದ್ದಾರೆ. ಈ ಮೂಲಕ ತಮಗೆ ತಾತ್ಕಾಲಿಕ ನೇಮಕಾತಿ ಬೇಡ, ಖಾಯಂ ನೇಮಕಾತಿಗೆ ಫಲಿತಾಂಶ ಪ್ರಕಟಿಸಿ ಎಂದು ಆಗ್ರಹಿಸುತ್ತಿದ್ದಾರೆ.

6.5 ಕೋಟಿ ರು. ಖರ್ಚು ಮಾಡಲು ಟಾರ್ಗೆಟ್‌ ಕೊಟ್ಟ ಕಾರಜೋಳ!

ಪ್ರಕರಣದ ಹಿನ್ನೆಲೆ:

ಹಿಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ 570 ಎಇ ಗ್ರೇಡ್-1 ಹುದ್ದೆಗಳು ಹಾಗೂ 300 ಜೆಇ ಹುದ್ದೆಗಳ ಭರ್ತಿಗೆ 2019ರ ಮಾರ್ಚ್ 7 ರಂದು ಅಧಿಸೂಚನೆ ಹೊರಡಿಸಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶವನ್ನೂ ನೀಡಲಾಗಿತ್ತು. ಅನಂತರ KEA ಲಿಖಿತ ಪರೀಕ್ಷೆಯನ್ನೂ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ತಾತ್ಕಾಲಿಕ ಪಟ್ಟಿಯನ್ನೂ ಸಿದ್ಧಪಡಿಸಿತ್ತು. ಅವರ ಸಂದರ್ಶನ ನಡೆಸಿ ಅಂತಿಮ ಆಯ್ಕೆ ಪ್ರಕ್ರಿಯೆ ಕೂಡಾ ಮಾಡಬೇಕಿತ್ತು.

ಆದರೆ ಅಷ್ಟರೊಳಗೆ ಸರ್ಕಾರ ಬದಲಾಗಿ ಹೊಸದಾಗಿ ಬಿಜೆಪಿ  ಸರ್ಕಾರ ಅಸ್ಥಿತ್ವಕ್ಕೆ ಬಂತು. ಹೀಗಿರುವಾಗ ನೂತನ ಸರ್ಕಾರ ಇನ್ನಷ್ಟು ಹುದ್ದೆಗಳನ್ನು ಸೇರಿಸಿ ಭರ್ತಿ ಮಾಡಬೇಕು ಎನ್ನುವ ಆಲೋಚನೆಯಲ್ಲಿ KEA ನಡೆಸಿದ್ದ ನೇಮಕ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ 2019ರ ಅಕ್ಟೋಬರ್ 30 ರಂದು ನಿರ್ಣಯಿಸಿ, ಆ ಕುರಿತು ಲೋಕೋಪಯೋಗಿ ಇಲಾಖೆಗೆ ಆದೇಶ ನೀಡಿತ್ತು. ಅಲ್ಲದೇ, ಖಾಲಿ ಇರುವ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡಲಾಗುವುದು ಎಂದಿತ್ತು.