ಬೆಂಗಳೂರು[ಫೆ.16]: ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಹಾಗೂ ಯಾವುದೇ ಅನುದಾನ ಉಳಿಕೆಯಾಗಬಾರದು. ಒಂದು ವೇಳೆ ಉಳಿಕೆಯಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರಿಗಳನ್ನಾಗಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಶನಿವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನವರಿ ಅಂತ್ಯಕ್ಕೆ 6,594 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಇದರಲ್ಲಿ 4,675 ಕೋಟಿ ರು. ವೆಚ್ಚ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆ ಘಟಕಕ್ಕೆ 341 ಕೋಟಿ ರು. ಬಿಡುಗಡೆಯಾಗಿದ್ದು, 317 ಕೋಟಿ ರು. ವೆಚ್ಚ ಮಾಡಲಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತಕ್ಕೆ 300 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, ಶೇ.100ರಷ್ಟುವೆಚ್ಚ ಮಾಡಲಾಗಿದೆ. ಅಂತೆಯೇ ರಾಜ್ಯ ಹೆದ್ದಾರಿ ಘಟಕದಲ್ಲಿ 333 ಕೋಟಿ ರು. ಬಿಡುಗಡೆಯಾಗಿದ್ದು, ಶೇ.100ರಷ್ಟುವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ವೇಗಮಿತಿ ಫಲಕಗಳನ್ನು ಅಳವಡಿಸಬೇಕು. ನೂತನ ರಸ್ತೆ ಕಾಮಗಾರಿಗಳನ್ನು ನಿರ್ಮಿಸುವಾಗ ಕನಿಷ್ಠ ಪ್ರಮುಖ ಸ್ಥಳಗಳಲ್ಲಿ, ಶಾಲಾ ಕಾಲೇಜು, ಅಪಘಾತ ವಲಯಗಳ ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ, ವಿಶೇಷ ಅಭಿವೃದ್ಧಿ ಯೋಜನೆಯಡಿ ಯಾವುದೇ ಅನುದಾನ ಉಳಿಕೆಯಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮುಖ್ಯ ಎಂಜಿನಿಯರ್‌ಗಳು ಕಾರ್ಯನಿರ್ವಾಹಕ ಎಂಜಿನಿಯರ್‌ಗಳೊಂದಿಗೆ ನಿಯಮಿತವಾಗಿ ಸಭೆ ನಡೆಸಿ ಸಮಗ್ರವಾಗಿ ಚರ್ಚಿಸಬೇಕು. ಮುಖ್ಯ ಎಂಜಿನಿಯರ್‌ಗಳು ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿ ಪ್ರಗತಿಯನ್ನು ಪರಿಶೀಲನೆ ನಡೆಸಬೇಕು. ಯಾವುದೇ ಲೋಪವಾದರೆ ಕಾರ್ಯ ನಿರ್ವಹಣೆ ವರದಿಯಲ್ಲಿ ನಮೂದಿಸಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಜನೀಶ್‌ ಗೋಯಲ್‌, ಕಾರ್ಯದರ್ಶಿ ಬಿ.ಗುರುಪ್ರಸಾದ್‌, ಮುಖ್ಯ ಎಂಜಿನಿಯರ್‌ಗಳು, ಅಧೀಕ್ಷಕ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.