ತುಂಗಾಭದ್ರಾ ಡ್ಯಾಂ ಕ್ರಸ್ಟ್ ಗೇಟ್ ನಿರ್ಮಾಣಕ್ಕೆ ನೀಡಿದ್ದ 10 ಕೋಟಿ ರೂ. ಅನುದಾನವನ್ನು ಸರ್ಕಾರ ವಾಪಸ್ ಪಡೆದಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಈ ನಿರ್ಧಾರದಿಂದ ರೈತರಿಗೆ ಅನ್ಯಾಯವಾಗಿದ್ದು, ಹಣ ಬಿಡುಗಡೆ ಮಾಡದಿದ್ದರೆ ನಾಲ್ಕು ಜಿಲ್ಲೆಗಳ ರೈತರು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಬೆಂಗಳೂರು (ಜ.30): ತುಂಗಾಭದ್ರಾ ಡ್ಯಾಂ ಕ್ರಸ್ಟ್ ಗೇಟ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಘೋಷಿಸಿದ್ದ 10 ಕೋಟಿ ರೂಪಾಯಿ ಅನುದಾನವನ್ನು ವಾಪಸ್ ಪಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಜನಾರ್ದನ ರೆಡ್ಡಿ, ಸರ್ಕಾರದ ಈ ನಿರ್ಧಾರ ತುಂಗಾಭದ್ರಾ ಭಾಗದ ರೈತರಿಗೆ ಎಸಗಿದ ದ್ರೋಹ ಎಂದು ಆಕ್ರೋಶ ಹೊರಹಾಕಿದ್ದಾರೆ. ಅನುದಾನ ವಾಪಸ್ ಪಡೆದಿರುವುದರಿಂದ ಹೊಸ ಗೇಟ್ ನಿರ್ಮಾಣ ಕಾರ್ಯ ಕುಂಠಿತಗೊಳ್ಳುವ ಭೀತಿ ಎದುರಾಗಿದೆ.

ಡಿಕೆಶಿ ಕೊಟ್ಟ ಭರವಸೆ ಏನಾಯ್ತು?

'ಸದನದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಾವೇ ಹೊಸ ಗೇಟ್ ಅಳವಡಿಸುತ್ತೇವೆ ಎಂದು ರೈತರಿಗೆ ಭರವಸೆ ನೀಡಿದ್ದರು. ಎರಡನೇ ಬೆಳೆಗೆ ನೀರು ಸಿಗುವುದಿಲ್ಲ ಎಂದು ಆತಂಕ ಪಡಬೇಡಿ ಎಂದು ರೈತರನ್ನು ಸಮಾಧಾನಪಡಿಸಿದ್ದರು. ಆದರೆ ನಾನು ಅಣೆಕಟ್ಟಿಗೆ ಭೇಟಿ ನೀಡಿದಾಗ ಗೇಟ್ ನಂ. 18ರ ಕೆಲಸ ನಡೆದಿತ್ತು. ಆದರೆ ಈಗ ಅನುದಾನ ವಾಪಸ್ ಪಡೆದಿರುವುದು ನೋಡಿದರೆ ಸರ್ಕಾರದ ಬದ್ಧತೆ ಎಲ್ಲಿಗೆ ಹೋಗಿದೆ ಎಂಬ ಪ್ರಶ್ನೆ ಮೂಡುತ್ತಿದೆ' ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.

ಇಂಜಿನಿಯರ್ ಕನ್ಹಯ್ಯ ನಾಯ್ಡು ಬಿಚ್ಚಿಟ್ಟ ಸ್ಫೋಟಕ ಸತ್ಯ

ಅಣೆಕಟ್ಟಿನ ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿರುವ ಖ್ಯಾತ ಇಂಜಿನಿಯರ್ ಕನ್ಹಯ್ಯ ನಾಯ್ಡು ಅವರೇ ಹಣದ ಕೊರತೆಯ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರ ಸರಿಯಾಗಿ ಹಣ ಬಿಡುಗಡೆ ಮಾಡುತ್ತಿಲ್ಲ, ಕೊಟ್ಟಿದ್ದ ಹಣವನ್ನೂ ವಾಪಸ್ ಪಡೆಯಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ತಾಂತ್ರಿಕ ತಂಡಕ್ಕೆ ಹಣಕಾಸಿನ ಬೆಂಬಲ ನೀಡದಿದ್ದರೆ ಕಾಮಗಾರಿ ಪೂರ್ಣಗೊಳ್ಳುವುದು ಕಷ್ಟ ಎಂಬ ಆತಂಕ ವ್ಯಕ್ತವಾಗಿದೆ.

ರೈತರ ಹೋರಾಟದ ಎಚ್ಚರಿಕೆ

ತುಂಗಾಭದ್ರಾ ನೀರನ್ನೇ ನಂಬಿಕೊಂಡಿರುವ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳ ರೈತರು ಈಗ ಸರ್ಕಾರ ಹತ್ತು ಕೋಟಿ ಅನುದಾನ ವಾಪಸ್ ಪಡೆದಿರುವ ಸರ್ಕಾರದ ವಿರುದ್ಧ ರೊಚ್ಚಿಗೆಳುವ ಸಾಧ್ಯತೆಯಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಹಣ ಬಿಡುಗಡೆ ಮಾಡದಿದ್ದರೆ ನಾಲ್ಕು ಜಿಲ್ಲೆಗಳ ರೈತರು ಬೀದಿಗೆ ಬಂದು ಹೋರಾಟ ಮಾಡುವುದು ಖಚಿತ. ಇದು ರೈತರ ಬದುಕಿನ ಪ್ರಶ್ನೆಯಾಗಿದ್ದು, ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಜನಾರ್ದನ ರೆಡ್ಡಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ.