ತುಂಗಭದ್ರಾ ಡ್ಯಾಂ ಅವಘಡ ಇದೇ ಮೊದಲಲ್ಲ, 2019ರಲ್ಲೂ ನಡೆದಿತ್ತು ದುರಸ್ಥಿಗಾಗಿ ವಾರಗಳ ಕಾಲ ಹರಸಾಹಸ!
ತುಂಗಭದ್ರಾ ಜಲಾಶಯದ 19ನೇ ಗೇಟ್ ಚೈನ್ ಲಿಂಕ್ ತುಂಡಾಗಿರುವ ಪ್ರಕರಣ ಜಲಾಶಯದ ಇತಿಹಾಸದಲ್ಲಿ ಮೊದಲ ಬಹುದೊಡ್ಡ ಪ್ರಕರಣ. ಆದರೂ ಐದು ವರ್ಷಗಳ ಹಿಂದೆ ಲಘು ದುರಂತವೊಂದು ಸಂಭವಿಸಿತ್ತು.
ಕೊಪ್ಪಳ (ಆ.11): ತುಂಗಭದ್ರಾ ಜಲಾಶಯದ 19ನೇ ಗೇಟ್ ಚೈನ್ ಲಿಂಕ್ ತುಂಡಾಗಿರುವ ಪ್ರಕರಣ ಜಲಾಶಯದ ಇತಿಹಾಸದಲ್ಲಿ ಮೊದಲ ಬಹುದೊಡ್ಡ ಪ್ರಕರಣವಾಗಿದ್ದರೂ ಐದು ವರ್ಷಗಳ ಹಿಂದೆ ಲಘು ದುರಂತವೊಂದು ಸಂಭವಿಸಿತ್ತು. ಅಂದು 2019 ರಲ್ಲಿ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯ( ಮುನಿರಾಬಾದ್) ಬಳಿ ಗೇಟ್ ಮುರಿದಿತ್ತು. ಹಾಗಲೂ ಸಹಿತ ನಾಲ್ಕು ದಿನಗಳ ಕಾಲ ಅಪಾರ ಪ್ರಮಾಣದ ನೀರು ಹರಿದು ಹೋಗಿತ್ತು.
ಅಂದು ವಿವಿಧ ತಜ್ಞರ ತಂಡ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿ, ವಾರಗಳ ಕಾಲ ರಿಪೇರಿಗೆ ಹರಸಾಹಸ ಪಟ್ಟಿದ್ದರು. ಆ ಬಳಿಕ ಆರ್ ಕೆ ಮೆಡಿಕ್ ಮೆಥಾಡಲಿಜಿ ಬಳಸಿ ಈ ಹಿಂದಿನ ನೀರಾವರಿ ನಿಗಮದ ಎಂಡಿಯಾಗಿದ್ದ ಮಲ್ಲಿಕಾರ್ಜುನ ಗುಂಗೆ ಅವರ ಸತತ ಪ್ರಯತ್ನದಿಂದ ಬೃಹದಾಕಾರದ ಮರಳಿನ ಮೂಟೆ ಮೂಲಕ ಮುರಿದ ಗೇಟಿನ ಸ್ಥಳಕ್ಕೆ ಬೃಹತ್ ಕ್ರೇನ್ ಗಳ ಮೂಲಕ ಅವುಗಳನ್ನು ಇಳಿ ಬಿಡಲಾಗಿತ್ತು.
ತುಂಗಭದ್ರಾ ಡ್ಯಾಂ ಗೇಟ್ ಹಾಳಾಗಬಾರದಿತ್ತು ಆಗಿದೆ; ಇದಕ್ಕೆ ಕೇಂದ್ರ ದುಡ್ಡು ಕೊಡಬೇಕು: ಮಧು ಬಂಗಾರಪ್ಪ
ನೀರನ್ನು ಉಳಿಸಿಕೊಂಡು ಗೇಟ್ ದುರಸ್ತಿ ಬಗ್ಗೆ ತಜ್ಞರ ವರದಿ ಬಳಿಕ ತೀರ್ಮಾನ: ಡಿಸಿಎಂ
"ಮೂರು ರಾಜ್ಯಗಳಿಗೆ ಸೇರಿರುವ ನೀರನ್ನು ಹೇಗಾದರೂ ಮಾಡಿ ಉಳಿಸಿಕೊಂಡು ತುಂಗಭದ್ರಾ ಅಣೆಕಟ್ಟಿನ ಗೇಟನ್ನು ದುರಸ್ತಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ತುಂಗಭದ್ರಾ ಜಲಾಶಯಕ್ಕೆ ತೆರಳುವ ಮುನ್ನ ಸದಾಶಿವ ನಗರದ ನಿವಾಸದ ಬಳಿ ಮಾಧ್ಯಮದವರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು "ನೀರನ್ನು ಹೊರಗೆ ಬಿಡದ ಹೊರತು ಗೇಟ್ ದುರಸ್ತಿ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದ ಕಾರಣ ತಂತ್ರಜ್ಞರ ವರದಿಯ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ತಿಳಿಸಿದರು.
ತುಂಗಭದ್ರಾ ಜಲಾಶಯದಿಂದ 98 ಟಿಎಂಸಿ ನೀರು ನದಿಪಾಲು!
"ಅಣೆಕಟ್ಟಿನ 1 ರಿಂದ 16 ನೇ ಗೇಟುಗಳನ್ನು ಸಿಡಬ್ಲ್ಯೂಸಿ ನಿರ್ವಹಣೆ ಮಾಡುತ್ತದೆ. 17 ರಿಂದ 32 ರವರೆಗಿನ ಜವಾಬ್ದಾರಿ ಕರ್ನಾಟಕ ಸರ್ಕಾರದ್ದಾಗಿದೆ. ಕೇಂದ್ರ ಜಲ ಆಯೋಗದವರು ಸಹ ಒಂದಷ್ಟು ತಂತ್ರಜ್ಞರನ್ನು ಕಳುಹಿಸಿದ್ದಾರೆ. ನಾವು ಸಹ ನುರಿತ ತಂತ್ರಜ್ಞರನ್ನು ಕಳುಹಿಸಿದ್ದೇವೆ. ನಾನು ಸಹ ಶನಿವಾರ ರಾತ್ರಿಯಿಂದಲೇ ಅಧಿಕಾರಿಗಳ ಜೊತೆ ದೂರವಾಣಿ ಸಂಪರ್ಕದಲ್ಲಿದ್ದು ಪ್ರತಿ ಕ್ಷಣದ ಮಾಹಿತಿ ಪಡೆಯುತ್ತಿದ್ದೇನೆ" ಎಂದು ಹೇಳಿದರು.
"ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿದ ಕಾರಣ ಈ ತೊಂದರೆ ಉಂಟಾಗಿದೆ. ಭಾರಿ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿದ್ದು, ಅಣೆಕಟ್ಟಿನ ಭದ್ರತೆಯ ದೃಷ್ಟಿಯಿಂದ ಎಲ್ಲಾ ಗೇಟ್ ಗಳನ್ನು ತೆರೆದು ನದಿಗೆ ನೀರು ಬಿಡಲಾಗುತ್ತಿದೆ. ಅಣೆಕಟ್ಟಿನ ಕೆಳಭಾಗದ ಹಾಗೂ ನದಿ ಪಾತ್ರದ ಎಲ್ಲಾ ಜನರಿಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ" ಎಂದರು.
ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗುತ್ತದೆಯೇ ಎಂದು ಪ್ರಶ್ನಿಸಿದಾಗ "ಇದು ಅತ್ಯಂತ ಗಂಭೀರವಾದ ವಿಚಾರವಾಗಿದ್ದು. ಇದರಲ್ಲಿ ನಾನು ಯಾರ ಮಾತನ್ನು ಕೇಳುವುದಿಲ್ಲ. ಸ್ಥಳೀಯರು ಹಾಗೂ ರೈತರು ಒಂದಷ್ಟು ಅಭಿಪ್ರಾಯಗಳನ್ನು ಸೂಚಿಸುತ್ತಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನು ಗೌರವಿಸಲಾಗುವುದು. ಆದರೆ ಅಂತಿಮವಾಗಿ ತಂತ್ರಜ್ಞರ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು. ನಮಗೆ ನಮ್ಮ ರೈತರ ಹಿತ ಮುಖ್ಯ" ಎಂದು ಹೇಳಿದರು.