ಉಳ್ಳಾಲ[ಜ.14]: ಪೌರತ್ವ ಸಂರಕ್ಷಣಾ ಸಮಿತಿ ಹೋರಾಟಕ್ಕೆ ಬಳಸಿದ ಕುರ್ಚಿಗಳನ್ನು ಹೊತ್ತಿದ್ದ ಲಾರಿ ಬೆಂಕಿಗೆ ಆಹುತಿಯಾಗಿರುವ ಘಟನೆ ದೇರಳಕಟ್ಟೆಜಲಾಲ್‌ ಬಾಗ್‌ನಲ್ಲಿ ಭಾನುವಾರ ತಡರಾತ್ರಿ ವೇಳೆ ನಡೆದಿದ್ದು, ಹೋರಾಟದ ಯಶಸ್ಸಿನಿಂದ ಆಕ್ರೋಶಗೊಂಡು ಕಿಡಿಗೇಡಿಗಳು ಬೆಂಕಿ ಹಚ್ಚಿ ದ್ದಾರೆಂದು ಪೌರತ್ವ ಸಂರಕ್ಷಣಾ ಸಮಿತಿ ಆರೋಪಿಸಿದೆ. ಘಟನೆಯಿಂದ ಸ್ಥಳೀಯರು ಜಮಾಯಿಸಿ ದೇರಳಕಟ್ಟೆಪರಿಸರದಲ್ಲಿ ಸೋಮವಾರ ಬೆಳಗ್ಗೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪೌರತ್ವ ಕಾಯ್ದೆಗೆ ಬೇಸರ ವ್ಯಕ್ತಪಡಿಸಿದ ಮೈಕ್ರೋಸಾಫ್ಟ್ ಸಿಇಒ!

ಪೌರತ್ವ ಸಂರಕ್ಷಣಾ ಸಮಿತಿ ದೇರಳಕಟ್ಟೆಸಿಟಿ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಾರ್ಯಕ್ರಮ ಆಯೋಜಿಸಿತ್ತು. ಸಂಜೆ 6.30 ಹೊತ್ತಿಗೆ ಕಾರ್ಯಕ್ರಮ ಮುಗಿದಿತ್ತು. ರಾತ್ರಿ 11.30 ಹೊತ್ತಿಗೆ ಸಂಘಟಕರು ಕುರ್ಚಿಗಳನ್ನು ಲಾರಿಯೊಳಕ್ಕೆ ಇಟ್ಟು ಸಹಕರಿಸಿದ್ದರು. ಮತ್ತೆ ಜ.15ರಂದು ಅಡ್ಯಾರು ಕಣ್ಣೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಇದೇ ಕುರ್ಚಿ ಪೂರೈಸುವ ಹಿನ್ನೆಲೆಯಲ್ಲಿ ಲಾರಿಯಲ್ಲೇ ಇಟ್ಟು ಸೋಮವಾರದಂದು ಕಣ್ಣೂರಿನತ್ತ ಸಾಗಾಟ ನಡೆಸುವ ಉದ್ದೇಶ ಹೊಂದಿದ್ದರು. ಆದರೆ ರಾತ್ರಿ ಲಾರಿಗೆ ಬೆಂಕಿ ತಗುಲಿ ಕುರ್ಚಿ ಹಾಗೂ ಲಾರಿ ಸಂಪೂರ್ಣ ಸುಟ್ಟಿದೆ. ಈ ಲಾರಿ ರಫೀಕ್‌ ಎಂಬವರಿಗೆ ಸೇರಿದ್ದಾಗಿದೆ. ಘಟನೆಯಲ್ಲಿ 2500ಕ್ಕೂ ಹೆಚ್ಚು ಕುರ್ಚಿಗಳು ಭಸ್ಮವಾಗಿವೆ.

CAA ಮೋದಿ, ಶಾ ಕಾಯ್ದೆಯಲ್ಲ: ಸಂಸದ

ಘಟನೆ ಹಿನ್ನೆಲೆಯಲ್ಲಿ ದೇರಳಕಟ್ಟೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಪೌರತ್ವ ತಿದ್ದುಪಡಿ ವಿರೋಧಿ ಹೋರಾಟಗಾರರು ಆಗ್ರಹಿಸಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.