ಬೆಂಗಳೂರು(ಜು.15): ಉಸಿರಾಟ ಸಮಸ್ಯೆ (ಎಸ್‌ಎಆರ್‌ಐ-ಸಾರಿ) ಇರುವ ಕೊರೋನಾ ಸೋಂಕಿತರ ಸಾವಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಎಚ್ಚೆತ್ತ ಸರ್ಕಾರ ಇಂತಹ ಪ್ರಕರಣಗಳಲ್ಲಿ ಕೋವಿಡ್‌ ವರದಿಗೆ ಕಾಯುವಂತಿಲ್ಲ. ತುರ್ತಾಗಿ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟಎಲ್ಲಾ ಆಸ್ಪತ್ರೆಗಳಿಗೂ ಆರೋಗ್ಯ ಇಲಾಖೆ ಆಯುಕ್ತರು ನಿರ್ದೇಶನ ನೀಡಿದ್ದಾರೆ.

ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಅವರು ಉಸಿರಾಟದ ಸಮಸ್ಯೆ (ಎಸ್‌ಎಆರ್‌ಐ-ಸಾರಿ) ಇರುವವರಿಗೆ ಕೂಡಲೇ 108 ಆಂಬ್ಯುಲೆನ್ಸ್‌ ಸೇವೆ ಒದಗಿಸಬೇಕು. ಆಸ್ಪತ್ರೆಗಳು ಕೂಡ ಅಂತಹವರನ್ನು ಶಂಕಿತ ಸೋಂಕಿತರೆಂದು ಪರಿಗಣಿಸಿ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಬೇಕೆಂದು ಸೂಚಿಸಿದ್ದಾರೆ.

5 ಜಿಲ್ಲೇಲಿ ಲಾಕ್‌ಡೌನ್‌: ಎಲ್ಲೆಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ!

ಸಾರಿ ಸಮಸ್ಯೆಯಿಂದ ಬಳಲುತ್ತಿರುವ ಕೋವಿಡ್‌ ಅಥವಾ ಕೊವಿಡೇತರ ರೋಗಿಗಳಿಗೆ ಚಿಕಿತ್ಸೆ ನೀಡಲು ಬಿಬಿಎಂಪಿ ಅಧಿಕಾರಿಗಳ ಅನುಮತಿ ಹಾಗೂ ಅಧಿಕೃತ ಪತ್ರಕ್ಕಾಗಿ ಕಾಯುವ ಅಗತ್ಯವಿಲ್ಲ. ರೋಗಿಗಳ ಸಂಖ್ಯೆ ನೀಡದಿದ್ದರೂ ಶಂಕಿತರ ಸೋಂಕಿತರೆಂದು ಪರಿಗಣಿಸಿ ಅವರಿಗೆ ಆಂಬ್ಯುಲೆನ್ಸ್‌ ಸೇವೆಯನ್ನು 108 ಆರೋಗ್ಯ ಕವಚ ನೋಡಲ್‌ ಅಧಿಕಾರಿಗಳು ಒದಗಿಸಬೇಕು. ನಿಗದಿತ ಆಸ್ಪತ್ರೆಗಳು ಅಂತಹ ರೋಗಿಗಳನ್ನು ತಕ್ಷಣ ಐಸೋಲೇಷನ್‌ ವಾರ್ಡ್‌ಗೆ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಬೇಕು. ಖಾಸಗಿ ಆಸ್ಪತ್ರೆಗಳು ಶಂಕಿತರ ಕೋವಿಡ್‌ ಪ್ರಕರಣ ಎಂದು ಪರಿಗಣಿಸಿ ಸರ್ಕಾರ ಕೋವಿಡ್‌ ರೋಗಿಗಳಿಗೆ ನಿಗದಿಪಡಿಸಿರುವ ದರದಲ್ಲೇ ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗಿದೆ.

1300 ಬಸ್ಸಲ್ಲಿ 26 ಸಾವಿರ ಜನ ಊರಿಗೆ: KSRTCಗೆ ಭಾರೀ ಬೇಡಿಕೆ!

108ಕ್ಕೆ ಕರೆ ಬಂದಲ್ಲಿ ಸೋಂಕಿತರೇ, ಶಂಕಿತರೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಸೋಂಕಿನ ಪ್ರಾರಂಭಿಕ ಲಕ್ಷಣ ಹೊಂದಿದ್ದರೆ ಅಥವಾ ಲಕ್ಷಣ ರಹಿತರಾಗಿದ್ದರೆ ಅಂತಹವರನ್ನು ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಿಸಬೇಕು. ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಾದ ವ್ಯಕ್ತಿಯ ಆರೋಗ್ಯದಲ್ಲಿ ಸಮಸ್ಯೆಯಾದರೆ ನಿಗದಿತ ಆಸ್ಪತ್ರೆಗೆ ಸ್ಥಳಾಂತರಿಸಲು 108 ಅಂಬ್ಯುಲೆನ್ಸ್‌ ಸೇವೆಯನ್ನೇ ಪಡೆಯಬೇಕು. ವ್ಯಕ್ತಿಗೆ ಸಂಬಂಧಿಸಿದ ದಾಖಲೆಯನ್ನು 108 ಆರೋಗ್ಯ ಕವಚವು ಬಿಬಿಎಂಪಿಗೆ ಒದಗಿಸಬೇಕು. ನಂತರ ಪಾಲಿಕೆ ರೋಗಿಗೆ ಸಂಖ್ಯೆ ನೀಡಬೇಕು. ಸೋಂಕಿತ ಅಥವಾ ಶಂಕಿತ ನೇರವಾಗಿ ಕೋವಿಡ್‌ ಆರೈಕೆ ಕೇಂದ್ರಕ್ಕೆ ಬಂದಲ್ಲಿ ದಾಖಲು ಮಾಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.