ಬೆಂಗಳೂರು(ಜು.15): ರಾಜಧಾನಿಯಲ್ಲಿ ಮಂಗಳವಾರ ರಾತ್ರಿಯಿಂದಲೇ ಲಾಕ್‌ಡೌನ್‌ ಜಾರಿಯಾಗುವ ಹಿನ್ನೆಲೆಯಲ್ಲಿ 1,300 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 26 ಸಾವಿರ ಮಂದಿ ರಾಜ್ಯದ ವಿವಿಧೆಡೆ ತೆರಳಿದರು.

ಮಂಗಳವಾರ ಬೆಳಗ್ಗೆ 5 ಗಂಟೆ ವೇಳೆಗೆ ಮೆಜೆಸ್ಟಿಕ್‌ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಬೆಳಗ್ಗೆ 6 ಗಂಟೆಗೆ ಬಸ್‌ ಸಂಚಾರ ಆರಂಭಗೊಂಡಿದ್ದರಿಂದ ಊರುಗಳಿಗೆ ತೆರಳಲು ಆತುರಾತುರಲ್ಲೇ ಜನ ಬಸ್‌ ಏರಿ ಕುಳಿತರು.

ಹಾಸಿಗೆ ನೀಡದ ಅಪೊಲೋ, ವಿಕ್ರಂ ಆಸ್ಪತ್ರೆ ಒಪಿಡಿ ಬಂದ್‌

ಲಗೇಜ್‌ ಹಿಡಿದು ತಂಡೋಪ ತಂಡವಾಗಿ ಬಸ್‌ ನಿಲ್ದಾಣಗಳಿಗೆ ಬರುತ್ತಿದ್ದ ಪ್ರಯಾಣಿಕರು, ತಮ್ಮೂರುಗಳಿಗೆ ತೆರಳುವ ಬಸ್‌ಗಳತ್ತ ದೌಡಾಯಿಸುತ್ತಿದ್ದರು. ಹೊಸದುರ್ಗ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಬಳ್ಳಾರಿ, ಯಾದಗಿರಿ ಕಡೆಗೆ ಹೆಚ್ಚಿನ ಬಸ್‌ಗಳನ್ನು ಕಾರ್ಯಾಚರಿಸಲಾಯಿತು. ಮೆಜೆಸ್ಟಿಕ್‌ ಹಾಗೂ ಮೈಸೂರು ರಸ್ತೆಯ ಬಸ್‌ ನಿಲ್ದಾಣದ ಜೊತೆಗೆ ಬೆಂಗಳೂರು-ತುಮಕೂರು ಮಾರ್ಗದ ರಾಜಾಜಿನಗರ, ಯಶವಂತಪುರದ ಗೋವರ್ಧನ್‌ ಚಿತ್ರಮಂದಿರ, ಗೊರಗುಂಟೆಪಾಳ್ಯ ಮಾರ್ಗ ವಿವಿಧ ಬಸ್‌ ನಿಲ್ದಾಣಗಳಲ್ಲಿ ನೂರಾರು ಮಂದಿ ಬಸ್‌ ಹಿಡಿದು ಊರುಗಳಿಗೆ ತೆರಳಿದರು.

ಲಾಕ್‌ಡೌನ್‌ ಜಾರಿ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆಗೆ ಬಸ್‌ ಕಾರ್ಯಾಚರಣೆ ಅಂತ್ಯವಾಗಬೇಕಿತ್ತು. ಆದರೆ, ಈ ಸಮಯ ಕಳೆದರೂ ಕೆಲ ಪ್ರಯಾಣಿಕರು ಬಸ್‌ ನಿಲ್ದಾಣದಲ್ಲೇ ಇದ್ದಿದ್ದರಿಂದ ರಾತ್ರಿ 10 ಗಂಟೆವರೆಗೂ ಬಸ್‌ ಕಾರ್ಯಾಚರಣೆ ಮಾಡಲಾಯಿತು.

ಲಾಕ್‌ಡೌನ್‌ ಜಾರಿ ಹಿನ್ನೆಲೆಯಲ್ಲಿ ಸೋಮವಾರ 1,100 ಬಸ್‌ಗಳಲ್ಲಿ ಬರೋಬ್ಬರಿ 32 ಸಾವಿರ ಮಂದಿ ನಗರ ತೊರೆದಿದ್ದರು.

5 ಜಿಲ್ಲೇಲಿ ಲಾಕ್‌ಡೌನ್‌: ಎಲ್ಲೆಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ!

ಇಂದಿನಿಂದ 2 ಜಿಲ್ಲೆಯಲ್ಲಿ ಬಸ್‌ ಇಲ್ಲ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜು.22ರ ವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಅಂತರ್‌ ರಾಜ್ಯ ಬಸ್‌ ಸೇವೆಯೂ ಇರುವುದಿಲ್ಲ. ಬೆಂಗಳೂರಿನಿಂದ ಇತರೆಡೆಗೆ ಪ್ರಯಣಿಸಲು ಮುಂಗಡ ಟಿಕೆಟ್‌ ಬುಕಿಂಗ್‌ ರದ್ದುಗೊಳಿಸಲಾಗಿದೆ. ಈಗಾಗಲೇ ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದವರಿಗೆ ಹಣ ಮರುಪಾವತಿಸಲಾಗುವುದು. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಆದೇಶದನ್ವಯ ಬಸ್‌ ಸೇವೆ ನೀಡುವುದಾಗಿ ಕೆಎಸ್‌ಆರ್‌ಟಿಸಿ ತಿಳಿಸಿದೆ.