ಇಂಗ್ಲಿಷ್ ತೀರ್ಪು ಕನ್ನಡಕ್ಕೆ ಅನುವಾದಿಸಿ: ಸಿಎಂ ಬೊಮ್ಮಾಯಿ
ನ್ಯಾಯಾಂಗ ವ್ಯವಸ್ಥೆಯಲ್ಲಿ ನಿಜವಾಗಲೂ ಕನ್ನಡದ ಬಳಕೆಯಾಗಬೇಕಾದರೆ ಮೊದಲು ಕನ್ನಡದ ಕಾನೂನು ನಿಘಂಟು ತಯಾರಿಸುವ ಕೆಲಸ ಆಗಬೇಕು. ಇದಕ್ಕಾಗಿ ತಜ್ಞರ ಸಮಿತಿ ರಚಿಸಿ.
ಬೆಂಗಳೂರು (ಜ.23): ನ್ಯಾಯಾಂಗ ವ್ಯವಸ್ಥೆಯಲ್ಲಿ ನಿಜವಾಗಲೂ ಕನ್ನಡದ ಬಳಕೆಯಾಗಬೇಕಾದರೆ ಮೊದಲು ಕನ್ನಡದ ಕಾನೂನು ನಿಘಂಟು ತಯಾರಿಸುವ ಕೆಲಸ ಆಗಬೇಕು. ಇದಕ್ಕಾಗಿ ತಜ್ಞರ ಸಮಿತಿ ರಚಿಸಿ. ಜತೆಗೆ ಇಂಗ್ಲೀಷ್‌ನಲ್ಲಿ ಬರುವ ಎಲ್ಲ ಪ್ರಮುಖ ತೀರ್ಪುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಪ್ರಕಟಿಸುವ ಕೆಲಸ ಮಾಡುವಂತೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ಭಾನುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ 2019-20 ಮತ್ತು 2020-21ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ ಹಾಗೂ ವಾದ ಮಂಡಿಸಿದ ಒಟ್ಟು 120 ಮಂದಿ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು, ವಕೀಲರು ಹಾಗೂ ಸರ್ಕಾರಿ ಅಭಿಯೋಜಕರಿಗೆ ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಹಸಿರೀಕರಣಕ್ಕೆ ಬಜೆಟ್‌ನಲ್ಲಿ 100 ಕೋಟಿ: ಸಿಎಂ ಬೊಮ್ಮಾಯಿ
ಕನ್ನಡದಲ್ಲಿ ಕಾನೂನು ನಿಘಂಟು ರೂಪಿಸುವುದರಿಂದ ನ್ಯಾಯಾಧೀಶರು, ನ್ಯಾಯವಾದಿಗಳು ಮತ್ತು ಕಕ್ಷಿದಾರರು ಎಲ್ಲರಿಗೂ ಅನುಕೂಲವಾಗುತ್ತದೆ. ಹಾಗಾಗಿ ಕನ್ನಡದ ಕಾನೂನು ನಿಘಂಟು ತಯಾರಿಸುವ ಕೆಲಸ ಮಾಡಬೇಕು. ಅದೇ ರೀತಿ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ನೀಡುವ ಪ್ರಮುಖ ತೀರ್ಪುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಅವುಗಳನ್ನು ನ್ಯಾಯಾಲಯಗಳ ಗ್ರಂಥಾಲಯಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವ ಕೆಲಸ ಆಗಬೇಕು ಎಂದರು.
ಮುಂದಿನ ಅಧಿವೇಶನದಲ್ಲಿ ಕನ್ನಡ ಕಾನೂನು: ಎಲ್ಲ ಮಾತೃಭಾಷೆಗಳಿಗೆ ಸಂವಿಧಾನಿಕ ರಕ್ಷಣೆ ಸಿಗಬೇಕೆಂಬ ಉದ್ದೇಶದಿಂದ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. ಜತೆಗೆ ಸರ್ಕಾರ ಎಲ್ಲ ರಂಗದಲ್ಲೂ ಕನ್ನಡ ಅನುಷ್ಠಾನಕ್ಕೆ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ’ವನ್ನು ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿದ್ದು ಮುಂದಿನ ಅಧಿವೇಶನದಲ್ಲಿ ಅನುಮೋದನೆ ಪಡೆದು ಜಾರಿಗೆ ಜಾರಿಗೆ ತರಲಾಗುತ್ತದೆ ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್ ಮತ್ತಿತರರು ಇದ್ದರು.
ಕೃಷಿಗೆ ಔಟ್‌ಲುಕ್ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಬೇಕು: ಸಿಎಂ ಬೊಮ್ಮಾಯಿ
ಕಾನೂನು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ: ಹೈಕೋರ್ಟ್ ನ್ಯಾಯಮೂರ್ತಿ ಜಿ.ನರೇಂದರ್ ಮಾತನಾಡಿ, ಸರ್ಕಾರ ರಾಜ್ಯದ ಎಲ್ಲ ಕಾನೂನುಗಳನ್ನು ಹಾಗೂ ಕಾನೂನಿನ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸುವ ಕೆಲಸ ಮಾಡಬೇಕು. ಎಲ್ಲ ನ್ಯಾಯಾಧೀಶರು ತಿಂಗಳಲ್ಲಿ ಒಂದಾದರೂ ತೀರ್ಪನ್ನು ಕನ್ನಡದಲ್ಲಿ ನೀಡಲು ಪ್ರೇರೇಪಿಸಬೇಕು. ನ್ಯಾಯಾಲಯಗಳಲ್ಲಿ ಹೆಚ್ಚಿನ ಕನ್ನಡದ ಶೀಘ್ರ ಲಿಪಿಕಾರರನ್ನು ನೇಮಿಸಬೇಕು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ನೀಡುವ ಎಲ್ಲ ಪ್ರಮುಖ ತೀರ್ಪುಗಳನ್ನು ಕನ್ನಡದಲ್ಲಿ ತರ್ಜುಮೆ ಮಾಡಿ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.