Asianet Suvarna News Asianet Suvarna News

ಕೃಷಿಗೆ ಔಟ್‌ಲುಕ್‌ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಬೇಕು: ಸಿಎಂ ಬೊಮ್ಮಾಯಿ

ಕೃಷಿಯಲ್ಲಿನ ಅನಿಶ್ಚಿತತೆ ದೂರ ಮಾಡುವ ನಿಟ್ಟಿನಲ್ಲಿ ವಿದೇಶಗಳಂತೆ ರಾಜ್ಯದಲ್ಲಿಯೂ ಒಂದು ವರ್ಷ ಮುಂಚಿತವಾಗಿ ಔಟ್‌ಲುಕ್‌ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಬೇಕು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Outlook report for agriculture should be scientifically prepared Says CM Basavaraj Bommai gvd
Author
First Published Jan 21, 2023, 9:17 AM IST

ಬೆಂಗಳೂರು (ಜ.21): ಕೃಷಿಯಲ್ಲಿನ ಅನಿಶ್ಚಿತತೆ ದೂರ ಮಾಡುವ ನಿಟ್ಟಿನಲ್ಲಿ ವಿದೇಶಗಳಂತೆ ರಾಜ್ಯದಲ್ಲಿಯೂ ಒಂದು ವರ್ಷ ಮುಂಚಿತವಾಗಿ ಔಟ್‌ಲುಕ್‌ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಬೇಕು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ಅರಮನೆ ಮೈದಾನದಲ್ಲಿ ತ್ರಿಪುರವಾಸಿನಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ- 2023 ಉದ್ಘಾಟಿಸಿ ಮಾತನಾಡಿದ ಅವರು, ವಿದೇಶಗಳಲ್ಲಿ ಮುಂದಿನ ಋುತುವಿಗೆ ಎಷ್ಟುಮಳೆಯಾಗಬಹುದು ಎಂದು ಕಳೆದ 10 ವರ್ಷಗಳ ಮಳೆ ಮಾದರಿಯನ್ನು ಆಧರಿಸಿ, ಎಷ್ಟುಬಿತ್ತನೆ, ಉತ್ಪಾದನೆ, ಮಾರುಕಟ್ಟೆಗಳನ್ನು ಪರಿಶೀಲಿಸಿ, ಒಂದು ಬೆಲೆಯನ್ನು ನಿಗದಿ ಮಾಡಿ ಔಟ್‌ಲುಕ್‌ ವರದಿ ತಯಾರಿಸುತ್ತಾರೆ. ಇದರಿಂದ ರೈತ ಬೆಳೆಯುವ ಬೆಳೆಗೆ ಎಷ್ಟುಖರ್ಚು ತಗಲಿ, ಎಷ್ಟುಧಾರಣೆ ದೊರೆಯುತ್ತದೆ ಎಂದು ತಿಳಿಯುತ್ತದೆ. 

ಆಗ ಲಾಭ ನಷ್ಟಗಳ ಅಂದಾಜಿಸಿ ಮೊತ್ತದೊಳಗೆಯೇ ಖರ್ಚು ಮಾಡುತ್ತಾನೆ. ಈ ವರದಿಯನ್ನು ಇಲಾಖೆ ಹಾಗೂ ಕೃಷಿ ದರ ಆಯೋಗದ ಸಹಯೋಗದೊಂದಿಗೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು. ಗ್ರಾಮೀಣ ಆರ್ಥಿಕತೆ ಸುಧಾರಿಸಲು ಗ್ರಾಮೀಣ ಸಾಲ ಪದ್ಧತಿ ಬದಲಾಗಬೇಕು. ರೈತರಿಗೆ 20 ಸಾವಿರ ನೀಡಬೇಕಾದರೆ 7 ರಿಂದ 8 ಸಾವಿರ ನೀಡಲಾಗುತ್ತದೆ. ನಿಖರವಾಗಿ ಸಾಲ ನೀಡಿದರೆ ರೈತ ಮಾರವಾಡಿಗಳ ಎದುರು ಕೈ ಚಾಚುವುದನ್ನು ನಿಲ್ಲಿಸುತ್ತಾನೆ. ಗ್ರಾಮೀಣ ಸಾಲ ಪದ್ದತಿ ಬದಲಾಗಬೇಕು ಎಂದು ಕೇಂದ್ರ ಹಣಕಾಸು ಸಚಿವರು ಹಾಗೂ ಕೃಷಿ ಸಚಿವರಿಗೆ ಒತ್ತಾಯವನ್ನು ಮಾಡಲಾಗಿದೆ. ನಬಾರ್ಡ್‌ ಸಾಲ ಪದ್ಧತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ. ಈ ಕೆಲಸಗಳಾದರೆ ರೈತರ ಬದುಕಿಗೆ ನಿಶ್ಚಿತತೆಯನ್ನು ತರಬಹುದು ಎಂದರು.

ಪ್ರಧಾನಿ ಮೋದಿ ಸಾಮಾಜಿಕ ಪರಿವರ್ತಕ: ಸಿಎಂ ಬೊಮ್ಮಾಯಿ ಬಣ್ಣನೆ

ಕೃಷಿ ವಿವಿಗಳು ಕ್ಯಾಂಪಸ್‌ ಬಿಟ್ಟು ಹೊರಬನ್ನಿ: ಹವಾಮಾನದ ಬದಲಾವಣೆಗೆ ಅನುಗುಣವಾಗಿ ಕೃಷಿ ಕ್ಷೇತ್ರವನ್ನು ಸಜ್ಜುಗೊಳಿಸಲು ಕೃಷಿ ವಿಶ್ವವಿದ್ಯಾಲಯಗಳು ಸನ್ನದ್ದವಾಗಬೇಕು. ಕೃಷಿ ಕ್ಷೇತ್ರದಲ್ಲಿನ ಇಂದಿನ ಸವಾಲುಗಳಾದ ಮಣ್ಣಿನ ಸವಕಳಿ, ಹೆಚ್ಚಿನ ನೀರು ಬಳಕೆ, ಜವುಳು, ಭೂಮಿಯ ಮೆಲೆ ರಾಸಾಯನಿಕದಿಂದ ಆಗುತ್ತಿರುವ ಸಮಸ್ಯೆ, ಕಳಪೆ ಹಾಗೂ ನಕಲಿ ಬೀಜ ಮಾರಾಟ ತಡೆಯುವ ಬಗ್ಗೆ ವಿದ್ಯಾರ್ಥಿಗಳು ಸಂಶೋಧನೆಗಳನ್ನು ಮಾಡಬೇಕು. ಕೃಷಿ ವಿವಿಗಳು ಕ್ಯಾಂಪಸನ್ನು ಬಿಟ್ಟು ಹೊರ ಬನ್ನಿ ರೈತನ ಹೊಲವನ್ನೇ ಕ್ಯಾಂಪಸ್‌ ರೀತಿ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಆಗ ಕೃಷಿ ಕೇವಲ ಆಹಾರ ಉತ್ಪಾದನೆಗೆ ಮಾತ್ರ ಸೀಮಿತವಾಗಿತ್ತು. ಈಗ ವಾಣಿಜ್ಯ ಉದ್ದೇಶಕ್ಕೆ ಕೃಷಿ ಮಾಡಲಾಗುತ್ತಿದೆ. ಆಹಾರ ಧಾನ್ಯ ಉತ್ಪಾದನೆ ಹಾಗೂ ವಾಣಿಜ್ಯ ಬೆಳೆಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಹಾರ ಸುರಕ್ಷತೆಗೆ ತೊಂದರೆಯುಂಟಾಗಬಹುದು ಎಂದು ವಿಶ್ವ ಆಹಾರ ತಜ್ಞರು ಹೇಳುತ್ತಾರೆ. ಈ ವಿಷಯಗಳಲ್ಲಿ ರೈತರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಸಲಹೆ ನೀಡಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮಾತನಾಡಿ, ಸಿರಿಧಾನ್ಯ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರು. ಪ್ರೋತ್ಸಾಹ ಧನವನ್ನು ರೈತರಿಗೆ ನೀಡಲಾಗುತ್ತಿದೆ. ಸಿರಿಧಾನ್ಯ ಬಳಕೆ ಹೆಚ್ಚುತ್ತಿದ್ದು, ಪ್ರಸಕ್ತ ಬೆಂಗಳೂರಿನ 80 ಹೊಟೇಲ್‌ಗಳಲ್ಲಿ ಸಿರಿಧಾನ್ಯ ಪೂರೈಕೆಯಾಗುತ್ತಿದೆ. ಹಿಂದೆ ಸಿರಿಧಾನ್ಯವೆಂದರೆ ಬಡವರ ಆಹಾರವಾಗಿತ್ತು. ಈಗ ಸಿರಿಧಾನ್ಯವೆನ್ನುವುದು ಸಿರಿವಂತರ ಆಹಾರವಾಗಿದೆ. ಇದಕ್ಕೆ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವುದು ಪ್ರಮುಖ ಕಾರಣವಾಗಿದೆ. ಸಿರಿಧಾನ್ಯ ತಿಂದವರು ಬುಲೇಟ್‌ನಂತೆ ಶಕ್ತಿವಂತರಾಗುತ್ತಾರೆ.

ಮೇಳದಲ್ಲಿ 300 ಮಳಿಗೆಗಳು: ಮೂರು ದಿನಗಳ ಸಿರಿಧಾನ್ಯ ಮೇಳದಲ್ಲಿ 300 ಮಳಿಗೆಗಳಿದ್ದು, ರಾಜ್ಯ ಮತ್ತು ಹೊರ ರಾಜ್ಯಗಳ ಸಿರಿಧಾನ್ಯಗಳ ಆಹಾರ ಪದಾರ್ಥಗಳು ಒಂದೆ ಸೂರಿನಡಿ ಸಿರಿಧಾನ್ಯ ಪ್ರಿಯರಿಗೆ ದೊರೆಯಲಿದೆ. ಸಾವಯವ ಉತ್ಪನ್ನಗಳ ಪ್ರದರ್ಶನ, ಅಂತಾರಾಷ್ಟ್ರೀಯ ಕೃಷಿ ಸಂಸ್ಥೆಗಳು ಸೇರಿ 10ಕ್ಕೂ ಅಧಿಕ ರಾಜ್ಯಗಳ ಉತ್ಪನ್ನ ಮಳಿಗೆ ಹಾಕಲಾಗಿದೆ. ಮಂಡ್ಯ, ಮೈಸೂರು, ರಾಮನಗರ,ಹಾವೇರಿ, ವಿಜಯಪುರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ನಾಡಿನ ವಿವಿಧ ಭಾಗಗಳ ರೈತರು ಸಿರಿಧಾನ್ಯ ಮೇಳದಲ್ಲಿ ಭಾಗವಹಿಸಿ ಸಿರಿಧಾನ್ಯಗಳ ಬಗ್ಗೆ ಮಾಹಿತಿ ಪಡೆದರು. ರೈತರ ಕಾರ್ಯಗಾರ ಜರುಗಿದವು. ವೈದ್ಯಕೀಯ ತಪಾಸಣೆ ಆನಂತರ ಅಗತ್ಯ ಆಹಾರ ಸಲಹೆ ನೀಡುತ್ತಿದ್ದ ಬೆಂಗಳೂರು ಮೂಲದ ದೇಶಿ ನ್ಯೂಟ್ರಿ ಮಳಿಗೆ, ಸಿರಿಧಾನ್ಯ ಪಿಜ್ಜಾ ಬರ್ಗರ್‌ ಮಳಿಗೆ ಆಕರ್ಷಣೀಯವಾಗಿದ್ದವು.

ಯೋಗ, ಆಯುಷ್‌ ವೈದ್ಯ ಪದ್ಧತಿ ಬಳಿಕ ಸಿರಿಧಾನ್ಯವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಸಿರಿಧಾನ್ಯಕ್ಕೆ ವಿಶ್ವದೆಲ್ಲೆಡೆ ಬೇಡಿಕೆ ಇದ್ದು, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಾವಯವ ಕೃಷಿಗೆ ರಾಜ್ಯದ ಕೃಷಿಕರು ಆದ್ಯತೆ ನೀಡಬೇಕು.
- ಶೋಭಾ ಕರಂದ್ಲಾಜೆ, ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವೆ

ಬೊಮ್ಮಾಯಿ ಆಡಳಿತಕ್ಕೆ ಮೋದಿ ಶಹಬ್ಬಾಸ್‌ಗಿರಿ: ಡಬಲ್‌ ಎಂಜಿನ್‌ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿ

ಸಿರಿಧಾನ್ಯ ಬಳಕೆ ದೇಹಕ್ಕೆ ಮಾತ್ರವಲ್ಲ ಬಡ ರೈತನ ಜೀವನಕ್ಕೂ ಒಳಿತು ಮಾಡುತ್ತದೆ. ಆರೋಗ್ಯವಂತ ಜೀವನಕ್ಕೆ ಸಿರಿಧಾನ್ಯ ಇಂದಿನ ಅನಿವಾರ್ಯತೆಯಾಗಿದೆ. ಸರ್ಕಾರವು ಆರೋಗ್ಯ ವ್ಯವಸ್ಥೆಗೆ ಖರ್ಚು ಮಾಡುವ ಹಣದಲ್ಲಿ ಒಂದಿಷ್ಟುಭಾಗವನ್ನು ಸಿರಿಧಾನ್ಯ ಕೃಷಿಗೆ ಪ್ರೋತ್ಸಾಹ ನೀಡುವ ಯೋಜನೆ ವಿನಿಯೋಗಿಸಿದರೆ ಸಮಾಜದಲ್ಲಿ ರೋಗಿಗಳನ್ನು ಕಡಿಮೆ ಮಾಡಬಹುದು.
- ಪ್ರಹ್ಲಾದ್‌ ಜೋಶಿ, ಸಂಸದೀಯ ವ್ಯವಹಾರ ಕೇಂದ್ರ ಸಚಿವ.

Follow Us:
Download App:
  • android
  • ios