ಅಧಿವೇಶನಕ್ಕೂ ಮುನ್ನ ಶಾಸಕರಿಗೆ ಐಐಎಂನಲ್ಲಿ ತರಬೇತಿ: ಖಾದರ್
ಶಾಸಕರಿಗೆ ಬಜೆಟ್ ಅಧಿವೇಶನದ ಸ್ವರೂಪ, ಚರ್ಚೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಅಲ್ಲದೆ, ಈ ಬಾರಿ ಬಜೆಟ್ ಅಧಿವೇಶನದ ವರದಿಗಾರಿಕೆ ಬಗ್ಗೆಯೂ ಪತ್ರಕರ್ತರಿಗೆ ವಿಶೇಷ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್
ಮಂಗಳೂರು(ಫೆ.05): ಬಜೆಟ್ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಫೆ.9ರಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ) ನಲ್ಲಿ ಎಲ್ಲ ಶಾಸಕರಿಗೆ ಹಾಗೂ ಪತ್ರಕರ್ತರಿಗೆ ಒಂದು ದಿನದ ವಿಶೇಷ ತರಬೇತಿ ಆಯೋಜಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಸಕರಿಗೆ ಬಜೆಟ್ ಅಧಿವೇಶನದ ಸ್ವರೂಪ, ಚರ್ಚೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಅಲ್ಲದೆ, ಈ ಬಾರಿ ಬಜೆಟ್ ಅಧಿವೇಶನದ ವರದಿಗಾರಿಕೆ ಬಗ್ಗೆಯೂ ಪತ್ರಕರ್ತರಿಗೆ ವಿಶೇಷ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ತರಬೇತಿಯನ್ನು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಲಿದ್ದಾರೆ. ಹಿರಿಯ ಸಚಿವರಾದ ಎಚ್.ಕೆ.ಪಾಟೀಲ್, ಕೃಷ್ಣ ಬೈರೇಗೌಡ, ನಿವೃತ್ತ ಐಎಎಸ್ ಅಧಿಕಾರಿ ಎಎಸ್‌ಎ ಪ್ರಸಾದ್ ಮತ್ತಿತರರು ಭಾಗವಹಿಸಲಿದ್ದಾರೆ. ಈ ಸಂದರ್ಭ ಶಾಸಕರಿಗೆ ಸಂವಿಧಾನ ಕ್ವಿಜ್ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದರು.
ಫೆ.12ರಿಂದ ಅಧಿವೇಶನ:
ವಿಧಾನಮಂಡಲ ಜಂಟಿ ಅಧಿವೇಶನ ಆರಂಭಗೊಳ್ಳಲಿದ್ದು, ಫೆ.23ರ ವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಫೆ.12ರಂದು ರಾಜ್ಯಪಾಲರು ಜಂಟಿ ಸದನವನ್ನುದ್ದೇಶಿಸಿ ಮಾತನಾಡಲಿದ್ದು, ಫೆ.16ರಂದು ಬಜೆಟ್ ಮಂಡನೆಯ ನಿರೀಕ್ಷೆ ಇದೆ ಎಂದು ಖಾದರ್ ಹೇಳಿದರು.
ಐದು ಸಂಪುಟಗಳು ಎಚ್ಕೆ ರಾಜಕೀಯ ಪರಿಶ್ರಮ, ತ್ಯಾಗ, ತಾಳ್ಮೆ ಸಂಕೇತ: ಯು.ಟಿ.ಖಾದರ್
ಬೆಳಗ್ಗೆ 9ಕ್ಕೇ ಕಲಾಪ ಆರಂಭಕ್ಕೆ ಚಿಂತನೆ:
ಮುಂದಿನ ದಿನಗಳಲ್ಲಿ ವಿಧಾನ ಮಂಡಲ ಕಲಾಪವನ್ನು ಬೆಳಗ್ಗೆ 10ರಿಂದ11ರ ನಡುವೆ ಆರಂಭಿಸುವ ಬದಲು ಬೆಳಗ್ಗೆ 9ರಿಂದಲೇ ಆರಂಭಿಸಲು ಚಿಂತನೆ ನಡೆಸುತ್ತಿರುವುದಾಗಿ ಖಾದರ್ ಹೇಳಿದ್ದಾರೆ.
ಶಾಸಕರು ಬೆಳಗ್ಗೆ 8ಕ್ಕೆ ಕಲಾಪಕ್ಕೆ ಸಿದ್ಧವಾಗಿರುತ್ತಾರೆ. ಆದರೆ ಕಲಾಪ ಆರಂಭಕ್ಕೆ ನಿಗದಿತ ಸಮಯದ ಚೌಕಟ್ಟು ಇಲ್ಲದಿರುವುದು ಹಲವು ರೀತಿಯ ಸಮಸ್ಯೆಗೆ ಕಾರಣವಾಗಿದೆ. ಕಲಾಪಕ್ಕೆ ಹೊರಟು ಸಿದ್ಧವಾದ ಶಾಸಕರು ತಮ್ಮೂರಿನ ಜನರ ಕೆಲಸಕ್ಕೆ ನೆರವಾಗುತ್ತಾರೆ, ಹಾಗಾಗಿ ವಿಧಾನಸೌಧ, ವಿಕಾಸ ಸೌಧ ಎಂದು ಓಡಾಡುತ್ತಾರೆ. ಅಧಿಕಾರಿಗಳ ಬಳಿ ತೆರಳಿ ಕೆಲಸ ಮಾಡಿಸಿಕೊಟ್ಟು ಕಲಾಪಕ್ಕೆ ಹಾಜರಾಗುವಾಗ ವಿಳಂಬವಾಗುತ್ತದೆ. ಮುಖ್ಯವಾಗಿ ಬೆಳಗ್ಗಿನ ತಿಂಡಿ ಅವಧಿ ಬಳಿಕ ಕಲಾಪದಲ್ಲಿ ಭಾಗವಹಿಸುವ ಶಾಸಕರ ಮೂಡ್ ಕೂಡ ಹೊರಟುಹೋಗುವ ಸಾಧ್ಯತೆ ಇರುತ್ತದೆ. ಈ ಎಲ್ಲ ಕಾರಣಗಳಿಂದ ಬೆಳಗ್ಗೆ 9 ಗಂಟೆಗೇ ಕಲಾಪ ಆರಂಭಿಸಲು ಸ್ಪೀಕರ್ ಖಾದರ್ ಚಿಂತನೆ ನಡೆಸುತ್ತಿದ್ದಾರೆ.