ಜ.8 ಭಾರತ್ ಬಂದ್: ಏನಿದೆ-ಏನಿಲ್ಲ? ಶಾಲೆಗಳಿಗೆ ರಜೆ ಇರುತ್ತಾ?
ಕೇಂದ್ರ ಕಾರ್ಮಿಕ ಸಂಘಟನೆಗಳು ಜನವರಿ 8 ರಂದು ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ರಾಜ್ಯದ ಬಹುತೇಕ ಕಾರ್ಮಿಕ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು ನೈತಿಕ ಬೆಂಬಲ ಸೂಚಿಸಿವೆ. ಆದರೆ ಈ ವೇಳೆ ಏನಿರುತ್ತೆ, ಏನಿರಲ್ಲ ಇಲ್ಲಿದೆ ಮಾಹಿತಿ
ಬೆಂಗಳೂರು [ಜ.07]: ಕೇಂದ್ರ ಸರ್ಕಾರದ ಕಾರ್ಮಿಕ ಕಾನೂನುಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳು ಬುಧವಾರದಂದು ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ರಾಜ್ಯದ ಬಹುತೇಕ ಕಾರ್ಮಿಕ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು ನೈತಿಕ ಬೆಂಬಲ ಸೂಚಿಸಿವೆ. ಆದರೆ, ತಮ್ಮ ಸೇವೆ ಸ್ಥಗಿತಗೊಳಿಸುವ ಸೂಚನೆ ನೀಡಿಲ್ಲ. ತನ್ಮೂಲಕ ಈ ಬಂದ್ ಜನಜೀವನಕ್ಕೆ ಬಿಸಿ ಮುಟ್ಟಿಸುವ ಸಾಧ್ಯತೆಗಳು ಹೆಚ್ಚಾಗಿ ಗೋಚರಿಸುತ್ತಿಲ್ಲ.
"
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಆದರೆ, ಬಸ್ ಸೇವೆಯಲ್ಲಿ ವ್ಯತ್ಯಯವಾಗದಂತೆ ಧರಣಿ ನಡೆಸಲು ತೀರ್ಮಾನಿಸಿವೆ. ಇನ್ನು ಮೆಟ್ರೋ ರೈಲು, ಮೊಬೈಲ್ ಆ್ಯಪ್ ಆಧಾರಿತ ಓಲಾ, ಉಬರ್ ಹಾಗೂ ಪ್ರವಾಸಿ ವಾಹನ, ಸರಕು ಸಾಗಣೆ ಲಾರಿ ಮಾಲೀಕರ ಸಂಘಟನೆಗಳು ಮುಷ್ಕರಕ್ಕೆ ಬಾಹ್ಯ ಬೆಂಬಲ ಘೋಷಿಸಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೇವೆ ಮುಂದುವರಿಸಲು ನಿರ್ಧರಿಸಿವೆ.
ಭಾರತ್ ಬಂದ್‌ಗೆ ಬ್ಯಾಂಕ್ ಸಂಘಟನೆಗಳ ಬೆಂಬಲ: ಏನಿರುತ್ತೆ? ಏನಿರೋಲ್ಲ?
ರಾಜಧಾನಿ ಬೆಂಗಳೂರಿನಲ್ಲಿ ಈ ಮುಷ್ಕರಕ್ಕೆ ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಪೈಕಿ ಕೆಲ ಸಂಘಟನೆಗಳು ಬೆಂಬಲ ಸೂಚಿಸಿ ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಿವೆ. ಇನ್ನೂ ಕೆಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ ಸೂಚಿಸಿ, ಸೇವೆ ಮುಂದುವರಿಸಲು ನಿರ್ಧರಿಸಿವೆ. ಹಾಗಾಗಿ ಬುಧವಾರ ಆಟೋ ಸೇವೆಯಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆಯಿದೆ. ಅಂತೆಯೇ ಸಿಐಟಿಯು, ಎಐಟಿಯುಸಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ, ರಾರಯಲಿ ಹಮ್ಮಿಕೊಂಡಿವೆ. ಈ ಧರಣಿ-ರಾರಯಲಿಯಲ್ಲಿ ಗಾರ್ಮೆಂಟ್, ಕಟ್ಟಡ ಕಾರ್ಮಿಕರು, ಕಾರ್ಖಾನೆಗಳ ನೌಕರರು ಸೇರಿದಂತೆ ವಿವಿಧ ವಲಯಗಳ ಕಾರ್ಮಿಕರು ಸಮಾವೇಶಗೊಳ್ಳುವ ಸಾಧ್ಯತೆಯಿದೆ.
ಇನ್ನು ಹೋಟೆಲ್, ಮಾಲ್, ಮಾರುಕಟ್ಟೆ, ಚಿತ್ರಮಂದಿರ ಸೇರಿದಂತೆ ವಿವಿಧ ಸೇವೆಗಳು ಎಂದಿನಂತೆ ಮುಂದುವರಿಯಲಿವೆ. ಇನ್ನು ಖಾಸಗಿ ಶಾಲಾ-ಕಾಲೇಜುಗಳು ರಾಜ್ಯ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿವೆ. ಆದರೆ, ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಯಾವುದೇ ತೀರ್ಮಾನವನ್ನು ಇದುವರೆಗೂ ಕೈಗೊಂಡಿಲ್ಲ. ಪರಿಸ್ಥಿತಿ ನೋಡಿ ತಮ್ಮ ಜಿಲ್ಲೆಯ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲು ತೀರ್ಮಾನಿಸಿದೆ.
ಸಾರಿಗೆ ನೌಕರರಿಗೆ ರಜೆ ಇಲ್ಲ:
ಮುಷ್ಕರದ ಹಿನ್ನೆಲೆಯಲ್ಲಿ ಜ.8ರಂದು ತುರ್ತು ರಜೆ ಹೊರತುಪಡಿಸಿ ನೌಕರರಿಗೆ ರಜೆ ನೀಡದಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಎಲ್ಲ ಘಟಕಗಳಿಗೆ ಸೂಚಿಸಿದ್ದಾರೆ. ಒಂದು ವೇಳೆ ಕರ್ತವ್ಯಕ್ಕೆ ಗೈರಾದರೆ ವೇತನ ಕಡಿತ ಮಾಡುವಂತೆ ಆದೇಶಿಸಿದ್ದಾರೆ.
ಭಾರತ್ ಬಂದ್: ಕರ್ನಾಟಕದಲ್ಲಿ ಏನಿರುತ್ತೆ? ಏನಿರೋಲ್ಲ?
ಈಗಾಗಲೇ ನೌಕರರಿಗೆ ರಜೆ ನೀಡದಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಬಸ್ ಸೇವೆಯಲ್ಲಿ ಯಾವುದೇ ವ್ಯತ್ಯವಾಗುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.
ಬಸ್ ಸೇವೆ ಅಬಾಧಿತ
ಎಐಟಿಯುಸಿ ದೇಶವ್ಯಾಪಿ ಕರೆ ನೀಡಿರುವ ಮುಷ್ಕರಕ್ಕೆ ರಾಜ್ಯದಲ್ಲಿಯೂ ಬೆಂಬಲ ಸೂಚಿಸಲಾಗಿದೆ. ಆದರೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್ ಸೇವೆ ಎಂದಿನಂತೆ ಮುಂದುವರಿಯಲಿದೆ. ಮುಷ್ಕರದ ಭಾಗವಾಗಿ ನಾಲ್ಕು ನಿಗಮಗಳ ಎಲ್ಲ ವಿಭಾಗೀಯ ಕಚೇರಿಗಳ ಎದುರು ಧರಣಿ ನಡೆಸಲಿದ್ದೇವೆ. ಜತೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ಸಭೆ ಜರುಗಲಿದೆ.
- ಎಚ್.ವಿ. ಅನಂತಸುಬ್ಬರಾವ್, ಅಧ್ಯಕ್ಷ, ಕೆಎಸ್‌ಆರ್‌ಟಿಸಿ ಸ್ಟಾಪ್ ಅಂಡ್ ವರ್ಕರ್ಸ್ ಯೂನಿಯನ್
ಕ್ಯಾಬ್‌ಗಳ ಸಂಚಾರ
ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ನಡೆಸುತ್ತಿರುವ ಮುಷ್ಕರಕ್ಕೆ ನೈತಿಕ ಬೆಂಬಲ ನೀಡಲಾಗುವುದು. ಹೀಗಾಗಿ ಕ್ಯಾಬ್ ಹಾಗೂ ಪ್ರವಾಸಿ ವಾಹನಗಳ ಸೇವೆ ಎಂದಿನಂತೆ ಮುಂದುವರಿಯಲಿದೆ.
- ರಾಧಾಕೃಷ್ಣಹೊಳ್ಳ, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ
ಮ್ಯಾಕ್ಸಿಕ್ಯಾಬ್ ಓಡಾಡುತ್ತವೆ
ಏಕಾಏಕಿ ಕರೆ ನೀಡಿರುವ ಮುಷ್ಕರಕ್ಕೆ ಕೇವಲ ಬಾಹ್ಯ ಬೆಂಬಲ ನೀಡಲಿದ್ದೇವೆ. ಸಾರ್ವಜನಿಕರ ದೃಷ್ಟಿಯಿಂದ ಮಾಕ್ಸಿ ಕ್ಯಾಬ್ ಹಾಗೂ ಪ್ರವಾಸಿ ವಾಹನಗಳ ಸೇವೆ ಮುಂದುವರಿಸಲಿದ್ದೇವೆ.
- ಭೈರವ ಸಿದ್ದರಾಮಯ್ಯ, ಮ್ಯಾಕ್ಸಿ ಕ್ಯಾಬ್ ಮಾಲೀಕರ ಸಂಘದ ಅಧ್ಯಕ್ಷ
ಶಾಲೆಗಳಿಗೆ ರಜೆ ಸರ್ಕಾರ ನಿರ್ಧರಿಸಲಿ
ಭಾರತ ಬಂದ್ ಕುರಿತು ಖಾಸಗಿ ಅನುದಾನರಹಿತ ಶಾಲೆಗಳು ಯಾವುದೇ ರೀತಿಯ ನಿರ್ಧಾರ ಕೈಗೊಳ್ಳುವುದಿಲ್ಲ. ಮಕ್ಕಳು ಹಾಗೂ ಶಿಕ್ಷಕರ ಸುರಕ್ಷತಾ ದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಖಾಸಗಿ ಶಾಲಾ ಮಂಡಳಿಗಳು ಬದ್ಧವಾಗಿರಲಿವೆ. ಶಾಲೆಗಳಿಗೆ ರಜೆ ಘೋಷಿಸುವುದು ಅಥವಾ ಘೋಷಿಸದೇ ಇರುವುದನ್ನು ಸರ್ಕಾರವೇ ನಿರ್ಧರಿಸಬೇಕು. ಒಂದು ವೇಳೆ ಸ್ಥಳೀಯವಾಗಿ ಪರಿಸ್ಥಿತಿ ಬಿಗಡಾಯಿಸಿದರೆ, ಆಯಾ ಶಿಕ್ಷಣ ಸಂಸ್ಥೆಗಳು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬಹುದು ಎಂದು ಖಾಸಗಿ ಶಾಲಾ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ತಿಳಿಸಿದ್ದಾರೆ.
- ಬಹುತೇಕ ಸಂಘಟನೆಗಳಿಂದ ನೈತಿಕ ಬೆಂಬಲ
ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಕಡಿಮೆ
- ಬಸ್, ಲಾರಿ ಎಂದಿನಂತೆ
ಆಟೋ ಸೇವೆ ತುಸು ವ್ಯತ್ಯಯ?
ಶಾಲೆಗಳಿಗೆ ರಜೆ ಅನುಮಾನ
ಯಾರ ಬೆಂಬಲ ಇಲ್ಲ?
- ಓಲಾ, ಉಬರ್, ಟ್ಯಾಕ್ಸಿ ಚಾಲಕ ಮತ್ತು ಮಾಲೀಕರ ಸಂಘ
- ಬೃಹತ್ ಬೆಂಗಳೂರು ಹೋಟೆಲುಗಳ ಸಂಘ
- ಪೀಸ್ ಆಟೋ ಮತ್ತು ಟ್ಯಾಕ್ಸಿ ಅಸೋಸಿಯೇಷನ್
ಯಾರ ನೈತಿಕ ಬೆಂಬಲ?
- ಕೆಎಸ್‌ಆರ್‌ಟಿಸಿ ಸ್ಟಾಪ್ ಅಂಡ್ ವರ್ಕರ್ಸ್ ಯೂನಿಯನ್
- ಕೆಎಸ್‌ಆರ್‌ಟಿಸಿ ನೌಕರರ ಫೆಡರೇಷನ್
- ಆಟೋ ಡ್ರೈವರ್ ಯೂನಿಯನ್
- ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ