ಬೆಂಗಳೂರು(ಡಿ.29): ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಹೊಸವರ್ಷಾಚರಣೆ ವೇಳೆ ಜನಸಂದಣಿ ತಪ್ಪಿಸುವ ಸಲುವಾಗಿ ನಂದಿಬೆಟ್ಟಸೇರಿದಂತೆ ರಾಜ್ಯದ ಹಲವು ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಇತಿಹಾಸ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿರುವ ಜಿಲ್ಲೆಯ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆ ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ವರ್ಷ ರೂಪಾಂತರಗೊಂಡ ಕೊರೋನಾ ವೈರಸ್‌ ಸೋಂಕು ಹರಡುವ ಭೀತಿ ಹೆಚ್ಚಾಗಿರುವುದರಿಂದ 2020ರ ಡಿ.30ರಿಂದ 2021ರ ಜ.2ರ ವರೆಗೆ ನಂದಿಗಿರಿಧಾಮದ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್‌.ಲತಾ ಆದೇಶ ಹೊರಡಿಸಿದ್ದಾರೆ.

BMTC ಪ್ರಯಾಣಿಕರಿಗೆ ಗುಡ್‌ನ್ಯೂಸ್: ಹೊಸವರ್ಷದಲ್ಲಿ ಟಿಕೆಟ್‌ ದರ ಕಡಿತ

ಅದೇ ರೀತಿ ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟ, ಮಂಡ್ಯ ಜಿಲ್ಲೆಯ ಬಲಮುರಿ, ಎಡಮುರಿ, ಕೆ.ಆರ್‌.ಎಲ್‌. ಹಿನ್ನೀರು ಪ್ರದೇಶ, ಮುತ್ತತ್ತಿ, ರಾಮನಗರ ಜಿಲ್ಲೆಯ ಚನ್ನ​ಪ​ಟ್ಟಣ ತಾಲೂ​ಕಿನ ಕಣ್ವ ಜಲಾ​ಶಯ, ಮಾಗಡಿ ತಾಲೂ​ಕಿನ ಸಾವನ ದುರ್ಗ ಮತ್ತು ಮಂಚ​ನ​ಬೆಲೆ ಜಲಾ​ಶಯ, ಕನ​ಕ​ಪುರ ತಾಲೂ​ಕಿನ ಸಂಗ​ಮ-ಮೇಕೆ​ದಾಟು, ಚುಂಚಿ ಜಲ​ಪಾತಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧಿಸಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಬೀಚ್‌ಗಳಲ್ಲಿ, ಐತಿಹಾಸಿಕ ಸ್ಥಳಗಳಲ್ಲಿ ಡಿ.31ರಿಂದ ಸಂಜೆ 4ರಿಂದ ಜ.1ರ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಡಾ.ಹರೀಶ್‌ ಕುಮಾರ್‌ ಆದೇಶ ಹೊರಡಿಸಿದ್ದಾರೆ.

ದೇವಾಲಯ ಪ್ರವೇಶ ನಿರ್ಬಂಧವಿಲ್ಲ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಾಲಯ ಸೇರಿದಂತೆ ಯಾವ ದೇವಾಲಯದಲ್ಲೂ ಯಾವುದೇ ಹೊಸ ನಿರ್ಬಂಧವನ್ನು ವಿಧಿಸಲಾಗಿಲ್ಲ. ಈಗಾಗಲೇ ಜಾರಿಯಲ್ಲಿರುವ ಕೋವಿಡ್‌ ನಿಯಮಾವಳಿಗಳಂತೆ ಭಕ್ತರು ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಬಹುದಾಗಿದೆ ಎಂದು ಉಡುಪಿ ಜಿಲ್ಲಾಡಳಿತ ತಿಳಿಸಿದೆ.