Asianet Suvarna News Asianet Suvarna News

ಶ್ರೇಷ್ಟ-ಸ್ವಾಭಿಮಾನಿ-ಸ್ವಾವಲಂಬಿ ರಾಷ್ಟ್ರವಾಗಿಸುವ ಕಾರ್ಯಕ್ಕೆ ಮೋದಿ ಸರ್ಕಾರ ಮುಂದಡಿ

ಪ್ರಧಾನಿ ನರೇಂದ್ರ ಮೋದಿ ಈ ರೀತಿಯ ಕಾರ್ಯ ನಿಷ್ಠೆ ಹೊಂದಿದ ಅಪ್ರತಿಮ ರಾಜಕೀಯ ಮುಂದಾಳು. ಕಲ್ಪನೆಗಿಂತ ಕೃತಿಗೆ ಆದ್ಯತೆ ನೀಡಿದವರು. ಏಕಿಲ್ಲ ಎಂದು ಪ್ರಶ್ನಿಸಿಕೊಳ್ಳುವವರಿಗಿಂತ ಏಕಿರಬಾರದು ಎಂದು ಯೋಚಿಸಿ ಅದರ ಸಿದ್ಧಿಗಾಗಿ ಪ್ರಯತ್ನಿಸಿ ಸಾಧಿಸುವ ಮುತ್ಸದ್ಧಿತನ ಅವರದು. ಎಂದೂ ಜೀವನವನ್ನು ಹೀಯಾಳಿಸಿ ನೋಡದೇ ಅದನ್ನು ಗೌರವಿಸುತ್ತ ಆತ್ಮವಿಸ್ತರಣಾಭ್ಯಾಸಕ್ಕೆ ಮುಂದಾದವರು. 

Tourism Minister CT Ravi writes about PM Modi govt achievement
Author
Bengaluru, First Published Jun 7, 2020, 9:53 AM IST

ಪಾರಿಜಾತವ ಕಂಡು ನಿಡುಸುಯಿದು, ಪದಗಳಿಂ

ಶೌರಿಕಥೆಯನ್ನು ಹೆಣೆದು ತೃಪ್ತನಹನು ಕವಿ

ಊರಿನುದ್ಯಾನಕದ ತರಿಸಿ ಬೆಳೆಸುವ ಕಾರ್ಯ-

ಧೀರನಲ ರಾಜ್ಯಕನು- ಮಂಕುತಿಮ್ಮ.

ಜೀವನದ ಸಂತೋಷ ಸ್ವಾರಸ್ಯಗಳನ್ನು ಪದಗಳಲ್ಲಿ ಹಿಡಿದಿಟ್ಟು ಜನಸಾಮಾನ್ಯರಿಗೆ ನೀಡುವನು ಕವಿ, ಆದರೆ ಆ ಸ್ವಾರಸ್ಯ, ಸಂತೋಷವನ್ನು ಪ್ರತ್ಯಕ್ಷವಾಗಿ ಅನುಭವಿಸುವಂತೆ ಮಾಡುವವನು ರಾಜ್ಯಕರ್ಮಿ ಎಂದು ಡಿ.ವಿ.ಜಿ. ಕಗ್ಗವೊಂದರ ಮೂಲಕ ಹೇಳುತ್ತಾರೆ. ಪಾರಿಜಾತವ ಕಂಡ ಕ್ಷಣ ಕೃಷ್ಣಕಥೆಯನ್ನು ಹೆಣೆದು ಕಾವ್ಯದ ರೂಪ ನೀಡುವ ಕವಿ ಅಷ್ಟರಲ್ಲೇ ತೃಪ್ತ. ಆದರೆ ರಾಜ್ಯಕ್ಕೆ ಆ ಸುಂದರ ಪಾರಿಜಾತ ಗಿಡವನ್ನು ತಂದು ಉದ್ಯಾನವನದಲ್ಲಿ ಬೆಳೆಸಿ ಜನ ಕಂಡು ಮುದಗೊಂಡು ಉಪಯೋಗಿಸುವಂತೆ ಮಾಡುವವ ಕಾರ್ಯಧೀರ.

ಅಪ್ರತಿಮ ಮುಂದಾಳು ಮೋದಿ

ಪ್ರಧಾನಿ ನರೇಂದ್ರ ಮೋದಿ ಈ ರೀತಿಯ ಕಾರ್ಯ ನಿಷ್ಠೆ ಹೊಂದಿದ ಅಪ್ರತಿಮ ರಾಜಕೀಯ ಮುಂದಾಳು. ಕಲ್ಪನೆಗಿಂತ ಕೃತಿಗೆ ಆದ್ಯತೆ ನೀಡಿದವರು. ಏಕಿಲ್ಲ ಎಂದು ಪ್ರಶ್ನಿಸಿಕೊಳ್ಳುವವರಿಗಿಂತ ಏಕಿರಬಾರದು ಎಂದು ಯೋಚಿಸಿ ಅದರ ಸಿದ್ಧಿಗಾಗಿ ಪ್ರಯತ್ನಿಸಿ ಸಾಧಿಸುವ ಮುತ್ಸದ್ಧಿತನ ಅವರದು. ಎಂದೂ ಜೀವನವನ್ನು ಹೀಯಾಳಿಸಿ ನೋಡದೇ ಅದನ್ನು ಗೌರವಿಸುತ್ತ ಆತ್ಮವಿಸ್ತರಣಾಭ್ಯಾಸಕ್ಕೆ ಮುಂದಾದವರು.

ಗುರಿಯೊಂದನ್ನು ಸಾಧಿಸುವಾಗ ಬಂದ ಎಲ್ಲಾ ವಿಘ್ನಗಳನ್ನು ತಮ್ಮ ದೃಢ ನಿಲುವಿನಿಂದ ದಾಟಿ ಮುಂದಡಿ ಇಟ್ಟು ಸಫಲತೆಯ ಕಂಡವರು. ಸಂದಿಗ್ಧತೆ ಎದುರಾದಾಗ ಎಂದೂ ವಿಹ್ವಲತೆಗೆ ಒಳಗಾಗದೆ ಅತ್ಯಂತ ಶಾಂತಚಿತ್ತವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳುವ ಯತ್ನ ಅವರದು. ಕೋವಿಡ್‌-19 ದೇಶವ್ಯಾಪಿಯಾದಾಗ ಆತಂಕಕ್ಕೆ ಒಳಗಾಗದೆ ಆತ್ಮ ನಿರ್ಭರ ಭಾರತದ ಕಲ್ಪನೆ ಮುಂದಿಟ್ಟರು. ಸ್ವಾವಲಂಬನೆಯತ್ತ ದೇಶದ ಜನ ಚಿಂತಿಸಲಾರಂಭಿಸಿದರೆ ಮಾತ್ರ ಯಾವುದೇ ಸವಾಲು ಹಾಗೂ ಎದುರಾಗುವ ವಿಪತ್ತು ಎದುರಿಸಲು ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳಬಹುದೆಂದು ಪ್ರತಿಪಾದಿಸಿದರು.

ಮೋದಿ ಕನಸಿನ ಯೋಜನೆ 'ಕಾಶೀ ವಿಶ್ವನಾಥ ಕಾರಿಡಾರ್‌'ಗೆ ಸಿಗ್ತಿದೆ ರೂಪ!

ವಿಶ್ವ ನಾಯಕರ ಸಾಲಲ್ಲಿ ಹೆಸರು

ದೇಶದ 2014ರ ಸಾರ್ವತ್ರಿಕ ಚುನಾವಣೆಯನ್ನು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಎದುರಿಸಿದಾಗ ಗೋದ್ರಾ ಹಿಂಸೆಯನ್ನೇ ಮುನ್ನೆಲೆಯಲ್ಲಿರಿಸಿಕೊಂಡು ಅಂದಿನ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್‌ ಹಾಗೂ ಉಳಿದ ಪಕ್ಷಗಳು ಸೇರಿ ಮೋದಿಯವರನ್ನು ಹತ್ಯಾಕಾಂಡದ ರೂವಾರಿ ಎಂದು ಬಿಂಬಿಸಿಲು ಮುಂದಾದವು. ಆದರೆ ದೇಶದ ಜನ ನಿರ್ಧರಿಸಿ ಬಿಟ್ಟಿದ್ದರು. ಬಹಳ ವರ್ಷಗಳ ನಂತರ ರಾಜಕೀಯ ಪಕ್ಷವೊಂದು ಪೂರ್ಣ ಬಹುಮತ ಪಡೆದು ಅಧಿಕಾರಕ್ಕೇರುವಂತೆ ಜನ ಬಿಜೆಪಿಗೆ 282 ಸ್ಥಾನ ನೀಡಿ ಮೋದಿ ನೇತೃತ್ವ ಈ ದೇಶಕ್ಕೆ ಅಗತ್ಯವೆಂದು ತೀರ್ಪು ನೀಡಿದರು. ಪ್ರಜಾತಂತ್ರದ ಮಹಾಮನೆ ಸಂಸತ್‌ ಭವನಕ್ಕೆ ಶಿರಬಾಗಿ ನಮಿಸಿ ಅಡಿಯಿಟ್ಟಮೋದಿ ಪ್ರಧಾನಿಯಾಗಿ ದೇಶದ ಆಡಳಿತದ ಚುಕ್ಕಾಣಿ ಹಿಡಿದರು.

ವಿಶ್ವದ ಒಂದೊಂದೇ ರಾಷ್ಟ್ರಗಳಿಗೆ ಭೇಟಿ ನೀಡುತ್ತ ಅಲ್ಲಿ ನೆಲೆಸಿದ್ದ ಭಾರತೀಯರೊಡನೆ ಹೃದಯ ಸಂವಾದ ನಡೆಸಿ, ವಿಶ್ವವೇ ಬೆರಗಾಗಿ ನೋಡುವಂತೆ ಮಾಡಿದರು. ತಮ್ಮ ಶಿಸ್ತು, ದೂರದೃಷ್ಟಿ, ದೃಢನಿಲುವು, ಮುತ್ಸದ್ಧಿತನದಿಂದ ಜಾಗತಿಕ ಮನ್ನಣೆ ಹಾಗೂ ಪ್ರಶಂಸೆಗೆ ಒಳಗಾದರಲ್ಲದೇ ವಿಶ್ವನಾಯಕರ ಸಾಲಿನಲ್ಲಿ ಅವರ ಹೆಸರು ದಾಖಲಾಯಿತು. ಪಕ್ವಗೊಂಡ ಆಲೋಚನೆ ಕಾರ್ಯಕ್ಷಮತೆ, ಮೋದಿತನದ ಛಾಪು ಬಹುಮುಖ್ಯವಾಗಿ ಸಂಘದ ಶಾಖೆಯಲ್ಲಿ ನಿತ್ಯ ಹೇಳುತ್ತಿದ್ದ ಪರಂ ವೈಭವಂ ನೇತುಮೇತತ್‌ ಸ್ವರಾಷ್ಟ್ರಮ್‌ ಎಂಬ ಸಾಲನ್ನು ಸದಾ ನೆನಪಿನಂಗಳದಲ್ಲಿ ಸ್ಥಾಯಿಯಾಗಿಸಿಕೊಂಡು ಪ್ರತಿ ತೀರ್ಮಾನ, ನಿರ್ಧಾರ, ನೀತಿರೂಪಣೆಯೊಂದಿಗೆ ಇಟ್ಟು ನೋಡಿ ದೇಶವನ್ನು ವೈಭವದತ್ತ ಕೊಂಡೊಯ್ಯುವ ಒಂದು ಶಕ್ತ-ಶ್ರೇಷ್ಟ-ಸ್ವಾಭಿಮಾನಿ-ಸ್ವಾವಲಂಬಿ ರಾಷ್ಟ್ರವಾಗಿಸುವ ಕಾರ್ಯಕ್ಕೆ ಮುಂದಾದರು.

ಸದೃಢ, ದೂರಗಾರ್ಮಿ ನಿರ್ಧಾರ

ಮೊದಲೈದು ವರ್ಷದ ಆಡಳಿತ ಪೂರ್ಣಗೊಳಿಸಿ ಜನಮನದಲ್ಲಿ ನಾಯಕನೆಂದರೆ ಹೀಗಿರಬೇಕು ಎಂದೆನಿಸಿಕೊಂಡೆ 2019ರ ಚುನಾವಣೆಗೆ ಇಳಿದಾಗ ಮೋದಿ ಅವಧಿ ಮುಗಿಯಿತು ಎಂದು ವಿಪಕ್ಷ ಮುಖಂಡರು ಅಧಿಕಾರ ಗದ್ದುಗೆ ಏರಲು ಕೋಟು ಹೋಲಿಸಿ, ಕಟಿಂಗ್‌ ಮಾಡಿಸಿಕೊಂಡು ಸಿದ್ಧರಾಗಿದ್ದಾಗ ಜನ ಬಿಜೆಪಿಗೆ 303 ಸ್ಥಾನಗಳನ್ನು ನೀಡಿದರು. ಮತ್ತೆ ಪೂರ್ಣ ಬಹುಮತದೊಂದಿಗೆ ಎರಡನೆಯ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿದು ಯಶಸ್ವಿ ಒಂದು ವರ್ಷವನ್ನು ಬಿಜೆಪಿ ಪೂರ್ಣಗೊಳಿಸಿದೆ.

'ಪ್ರಧಾನಿ ಮೋದಿ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಇಡೀ ವಿಶ್ವವೇ ಹೊಗಳುತ್ತಿದೆ'

ಮೊದಲೈದು ವರ್ಷದಲ್ಲಿ ಮೊದಲ ಬಾರಿಗೆ ಕೇಂದ್ರದಲ್ಲಿ ಆಡಳಿತ ನಡೆಸಿದಾಗ ಭ್ರಷ್ಟಾಚಾರದ ಸಣ್ಣ ಕಪ್ಪುಚುಕ್ಕೆಯನ್ನು ಅಂಟಿಸಿಕೊಳ್ಳದಂತೆ ಶುಭ್ರ-ನಿರಭ್ರ ಆಡಳಿತ ನೀಡಿದ ಮೋದಿ, ಜಾಗತಿಕವಾಗಿ ಭಾರತದ ವರ್ಚಸ್ಸು ಮತ್ತಷ್ಟುಪ್ರಜ್ವಲಿಸುವಂತೆ ಮಾಡಿದರು; ತಮ್ಮ ಎರಡನೆಯ ಇನ್ನಿಂಗ್ಸ್‌ನಲ್ಲಿ ಅತ್ಯಂತ ಸಧೃಡ ಹಾಗೂ ದೂರಗಾಮಿ ಪರಿಣಾಮ ಬೀರುವ ನಿರ್ಧಾರಗಳನ್ನು ಕೈಗೊಂಡರು. ಭಾರತದ ಬಗ್ಗೆ ಸದಾ ಭಯೋತ್ಪಾದನೆಯ ಕತ್ತಿ ಮಸೆಯುತ್ತಿದ್ದ, ಪಾಕಿಸ್ತಾನಕ್ಕೆ ಸರ್ಜಿಕಲ್‌ ಸ್ಟೆ್ರೖಕ್‌ ಮೂಲಕ ಆ ಮಸೆಗತ್ತಿ ಸ್ವಲ್ಪ ಮೊಂಡಾಗುವಂತೆ ಮಾಡಿದ ಕೀರ್ತಿ ಅವರದು. ಆ ಮೂಲಕ ಅಂಜುಬುರುಕುತನ ಪದ ತನ್ನ ಬದುಕಿನ ಪದಕೋಶದಲ್ಲಿಲ್ಲ ಎಂದು ತೋರಿಸುವ ಮೂಲಕ ಒಂದು ಎಚ್ಚರಿಕೆಯನ್ನು ರವಾನಿಸಿದರು.

ಹೊಸ ಬದಲಾವಣೆಯತ್ತ ದೇಶ

ದೇಶವನ್ನಾಳಿದ ರಾಜಕೀಯ ಪಕ್ಷಗಳು ನಿರ್ಧರಿಸಲಸಾಧ್ಯವೆಂದು ಭಾವಿಸಿದ್ದ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370 ಮತ್ತು 35ಎ ವಿಧಿಯನ್ನು ರದ್ದುಗೊಳಿಸುವ ಮೂಲಕ ಭಾರತದ ಮುಕುಟಮಣಿ ಕಾಶ್ಮೀರ ಈ ದೇಶದ ಸಂವಿಧಾನದಡಿ ಆಡಳಿತ ನಡೆಸುವಂತೆ ಮಾಡಿದ ಮೋದಿ-ಅಮಿತ್‌ ಶಾ ಜೋಡಿ, ಲಡಾಖ್‌ನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿತು. ತಾರತಮ್ಯದಿಂದ ಸದಾ ನಲುಗುತ್ತಿದ್ದ ಜಮ್ಮುವನ್ನು ಅದರಿಂದ ಹೊರತರಲಾಯಿತು.

ಇಡೀ ರಾಷ್ಟ್ರಕ್ಕೆ ಏಕನಿಶಾನ್‌, ಏಕ ಸಂವಿಧಾನ್‌ ಎಂಬ ಘೋಷಣೆ ಆ ರಾಜ್ಯದಲ್ಲಿ ಕೃತಿಗಿಳಿಯಿತು. ನಾಗರಿಕ ತಿದ್ದುಪಡಿ ವಿಧೇಯಕದ ಮೂಲಕ ನುಸುಳುಕೋರರ ಹಾವಳಿ ತಪ್ಪಿಸುವ ದಿಟ್ಟಹೆಜ್ಜೆ ಇಡಲಾಯಿತು. ಹೆಣ್ಣು ಮಕ್ಕಳ ಸ್ಥಿತಿಗತಿ ಉತ್ತಮಿಕೆಗೆ ಭೇಟಿ ಬಚಾವ್‌- ಭೇಟಿ ಪಡಾವ್‌ ಯೋಜನೆ ಜಾರಿ, ತ್ರಿವಳಿ ತಲಾಕ್‌ಗೆ ವಿದಾಯ, ಪ್ರತಿ ಮನೆಗೆ ಅಟಲ್‌ ಭೂಜಲ ಯೋಜನೆಯ ಮೂಲಕ ನೀರು, ಜಲಜೀವನ್‌ ಮಿಷನ್‌ ಜಾರಿ ಈ ರೀತಿ ಹಲವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡು ದೇಶ ಒಂದು ಹೊಸ ಬದಲಾವಣೆಯತ್ತ ಸಾಗುವಂತೆ ಮಾಡಿದ ಕೀರ್ತಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ್ದು.

ದೇಶ ಒಂದು ಹೊಸ ಮನ್ವಂತರದಲ್ಲಿರುವಾಗಲೇ ಬಂದು ಆವರಿಸಿದ್ದು ಕೋವಿಡ್‌-19 ಮಹಾಮಾರಿ. ಆದರೆ ಮೋದಿ ತಮ್ಮ ವಿಚಕ್ಷಣತೆಯಿಂದ ಅದಕ್ಕೆ ಹಾಸಿಗೆ ಹಾಸದೇ ತಡೆಯೊಡ್ಡಲು ಮುಂದಾದರು. ಒಟ್ಟು 130 ಕೋಟಿ ಜನ ಬಾಹುಳ್ಯದ ದೇಶವಾದರೂ ಸೋಂಕಿನ ತಡೆಗೆ ಕೈಗೊಂಡ ಉಪಕ್ರಮಗಳು ಕಡಿವಾಣದಂತೆ ವರ್ತಿಸುತ್ತಿವೆ. ಸೋಂಕಿನಿಂದ ಸಾವಪ್ಪುತ್ತಿರುವವರ ಸಂಖ್ಯೆ ತೀರಾ ಏರುಗತಿಗೆ ಸಾಗಿಲ್ಲ.

ಭಾರತ-ಚೀನಾ ಗಡಿ ಬಿಕ್ಕಟ್ಟು;ಇಲ್ಲಿದೆ ಡ್ರ್ಯಾಗನ್ ದೇಶದ ಕೋಪಕ್ಕೆ ಅಸಲಿ ಕಾರಣ !

ಮಾಲಿನ್ಯಕ್ಕೆ ಒಳಗಾಗಲಿಲ್ಲ

ನೀರಿನ ಶುದ್ಧತೆ ಅದು ಹುಟ್ಟುವ ಜಾಗದಿಂದಲೇ ಆರಂಭವಾಗಬೇಕು. ಕೆಲವೊಮ್ಮೆ ಶುದ್ಧ ನೀರು ಕೆಳಮುಖವಾಗಿ ಹರಿಯುವಾಗ ಕೊಳಕು ಮಿಶ್ರಣವಾಗಿ ಕೆಡಬಹುದು. ಹುಟ್ಟುವ ಸ್ಥಳದಲ್ಲೇ ಅದು ಮಲಿನವಾದರೆ ಅತ್ಯಂತ ಅಪಾಯಕಾರಿ. ದೇಶದ ಆಡಳಿತವೆಂಬ ಗಂಗಾಮೂಲ ಸಹ ಶುದ್ಧವಾಗಿದ್ದರೆ ಅದರ ಕೆಳಮುಖದ ಹರಿವೂ ಶುದ್ಧವಾಗಿರುತ್ತದೆ. ಮೋದಿಯವರ 6 ವರ್ಷದ ಆಡಳಿತ ಈ ಪರಿಕಲ್ಪನೆಯನ್ನು ಜತನದಿಂದ ಅನುಸರಿಸಿತು.

ಭ್ರಷ್ಟಾಚಾರವೆಂದು ಮಾಲಿನ್ಯಕಾರಕಕ್ಕೆ ಒಳಗಾಗಲಿಲ್ಲ. ಎಲ್ಲರ ಜೊತೆ-ಎಲ್ಲರ ವಿಕಾಸ-ಎಲ್ಲರ ವಿಶ್ವಾಸ ಎಂಬ ತತ್ವಕ್ಕೆ ಅಂಟಿತು. ಆಡಳಿತಕ್ಕೊಂದು ಟ್ಯಾಗ್‌ಲೈನ್‌ನ್ನು ಮೋದಿ ಈ ರೀತಿ ನೀಡಿದರು. ಅವರ, ಅವರ ಆಡಳಿತದ ಬಗ್ಗೆ ಬಂದ ಟೀಕೆಗಳಿಗೆ ಜನ ಸ್ಪಂದಿಸಲಿಲ್ಲ; ಮೋದಿ ತಮ್ಮ ಆಡಳಿತದ ಹೆಜ್ಜೆಗಳ ವೇಗವನ್ನು ತಗ್ಗಿಸಲಿಲ್ಲ. ಒಂದು ದೇಶದ ಅಭಿವೃದ್ಧಿ ಎಂದರೆ ಅದರ ಎಲ್ಲಾ ರಾಜ್ಯಗಳ ಅಭಿವೃದ್ಧಿ ಎಂಬ ಸಮಗ್ರ ಚಿಂತನೆಗೆ ಒತ್ತು ನೀಡಿದರು. ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಆಡಳಿತ ಯಂತ್ರವನ್ನು ಸಜ್ಜುಗೊಳಿಸಿ ಅವರು ಮುನ್ನಡೆದಿದ್ದಾರೆ.

ಬಲಾಚಪೃಥ್ವಿ ಎಂಬಂತೆ ಬಲವಿದ್ದವನದೇ ಭೂಮಿ ಎಂಬುದನ್ನು ವಿಶಾಲಾರ್ಥದಲ್ಲಿ ಮೋದಿ ಚಿಂತಿಸಿದರು. ದೇಶ ಕಾಯುವ ಸೇನಾ ವ್ಯವಸ್ಥೆಯನ್ನು ಶಕ್ತಿಯುತವಾಗಿಸಲು ಮುಂದಾದರು. ದೇಶವೊಂದು ಕೇವಲ ಆದರ್ಶದ ವ್ಯವಸ್ಥೆಯಲ್ಲ, ಅದು ಶಕ್ತಿಯುತವಾಗಿರಬೇಕು; ಶಕ್ತಿಯ ಸಮತೋಲನದಿಂದ ಮಾತ್ರ ನೆರೆಹೊರೆಯ ಸಂಬಂಧ ಸೌಹಾರ್ಧತೆ ಇರುತ್ತದೆಂಬುದನ್ನು ಅರಿತು 3 ಸೇನಾ ವ್ಯವಸ್ಥೆಗೆ ತಿರುಗಣೆಯಾಗಿ ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ ನಿರ್ಮಾಣ, ಸೇನಾ ವ್ಯವಸ್ಥೆಗಳ ಭತ್ತಳಿಕೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಕೆ ಯುದ್ಧವಿಮಾನಗಳ ಸೇರ್ಪಡೆ ಹಾಗೆಯೇ ರಕ್ಷಣಾ ಸಾಮಗ್ರಿಗಳನ್ನು ದೇಶದಲ್ಲೇ ಉತ್ಪಾದಿಸುವುದಕ್ಕೆ ಚಾಲನೆ ನೀಡುವ ಮೂಲಕ ದೇಶ ಯಾವುದೇ ಹೊರಗಿನ ಧಾಳಿಯನ್ನು ಎದುರಿಸಲು ಸಶಕ್ತವಾಗಿರುವಂತೆ ನೋಡಿಕೊಂಡರು.

ಸಮಾಜ ಚಿಂತನೆಯೇ ಧ್ಯೇಯ

ಸ್ವಚಿಂತನೆಗೆ ಮುಂದಾಗದೆ ಸಮಾಜ-ದೇಶಚಿಂತನೆಗೆ ಪ್ರತಿಕ್ಷಣವನ್ನು ಮುಡುಪಾಗಿಟ್ಟಪ್ರಧಾನಿ ದೇಶ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು, ತಾಂತ್ರಿಕತೆಯಲ್ಲಿ ಅದ್ವಿತೀಯವೆನಿಸಿಕೊಳ್ಳಬೇಕು. ಸ್ವದೇಶಿ ಉದ್ಯಮ ಉತ್ಪನ್ನಗಳು ಜಾಗತಿಕ ಮಟ್ಟಕ್ಕೆ ಏರಬೇಕು. ಈ ಚಿಂತನೆಗಳು ಭಾರತೀಯ ಮನಸ್ಸುಗಳಲ್ಲಿ ಚಿಗುರೊಡೆದು ಹೆಮ್ಮರವಾದಲ್ಲಿ ಸಶಕ್ತ, ಸಂಘಟಿತ, ಸ್ವಾವಲಂಬಿ ಭಾರತ ಮೈತಾಳುತ್ತದೆ. ಜಾಗತಿಕವಾಗಿ ಭಾರತೀಯ ಮಾರ್ಗವೆಂಬುದು ಸೃಷ್ಟಿಯಾಗಬೇಕೆಂಬ ಕನಸು ಹೊತ್ತಿರುವವರು ನಮ್ಮ ಪ್ರಧಾನಿ. ಅದನ್ನು ನನಸಾಗಿಸುವ ಹೊಣೆ ನಮ್ಮೆಲ್ಲರದು.

ನ್ಯೂನತೆ, ಅಡೆ-ತಡೆ, ಕೊರತೆಗಳ ನಡುವೆಯೇ ಅವುಗಳನ್ನು ನಿವಾರಿಸುತ್ತ ದೇಶದ ಪ್ರಗತಿಯ ರಥ ಮುನ್ನಡೆಯ ಬೇಕೆಂದು ನಂಬಿರುವ ಪ್ರಧಾನಿಯವರಿಗೆ ಸೂರ್ಯದೇವನೇ ಒಂದು ಸ್ಫೂರ್ತಿ. ಆ ದೇವನ ಪರಿಸ್ಥಿತಿಯನ್ನು ವಿವರಿಸುವ ಶ್ಲೋಕವೊಂದು ಹೀಗಿದೆ;

ರಥಸ್ಯೇಕಂ ಭುಜಗಯಮಿತಾಃ ಸಪ್ತತುರಗಾಃ

ನಿರಾಲಂಬೋ ಮಾರ್ಗಃ ಚರಣರಹಿತಃ ಸಾರಥಿರಪಿ

ರವಿರ್ಗಚ್ಛತ್ಯಂತಂ ಪ್ರತಿದಿನಮಪಾರಸ್ಯ ನಭಸಃ

ಕ್ರಿಯಾಸಿದ್ದಿ ಸತ್ವೇಭವತಿ ಮಹತಾಂನೋಪಕರಣೆ

ಸೂರ್ಯನ ರಥಕ್ಕೆ ಒಂದೇ ಚಕ್ರ, ಕುದುರೆಗಳ ಸಂಖ್ಯೆ ಏಳು, ಅದಕ್ಕೆ ಕಟ್ಟಿರುವ ಲಗಾಮು ಹಾವು, ಮಾರ್ಗವೊ, ನಿರಾಲಂಬವಾದುದು ಅಂದರೆ ಆಕಾಶ ಪಥ. ಇನ್ನು ಅದನ್ನು ನಡೆಸುವ ಸಾರಥಿ ಸಮರ್ಥನೆ? ಅವನಿಗೆ ಕಾಲುಗಳೇ ಇಲ್ಲ. ತನ್ನ ಉಪಕರಣದಲ್ಲಿ ಇಷ್ಟೆಲ್ಲಾ ನ್ಯೂನತೆಗಳಿದ್ದರೂ ಸೂರ್ಯ ಒಂದು ದಿನವು ತಡಮಾಡದೇ ಪ್ರತಿದಿನ ಸಕಾಲಕ್ಕೆ ಉದಯಿಸುತ್ತಾನೆ; ಸೃಷ್ಟಿಯ ಹೃದಯಕ್ಕೆ ಪ್ರಾಣಾಗ್ನಿಯ ಸೆಲೆ ಹರಿಸುತ್ತಾನೆ.

- ಸಿ.ಟಿ.ರವಿ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ

Follow Us:
Download App:
  • android
  • ios