ವಾರಾಣಸಿ(ಜೂ.06): ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಕನಸಿನ ಯೋಜನೆ ಕಾಶೀ ವಿಶ್ವನಾಥ ಕಾರಿಡಾರ್ ಕಾಮಗಾರಿ ಲಾಕ್‌ಡೌನ್‌ ನಡುವೆ ಸುಮಾರು ಎರಡು ತಿಂಗಳು ಸ್ಥಗಿತಗೊಂಡಿತ್ತು. ಆದರೆ ಈಗ ಮತ್ತೆ ಈ ಕೆಲಸ ಆರಂಭವಾಗಿದ್ದು, ಇದರ ಸ್ವರೂಪ ಕೂಡಾ ಕಾಣಿಸಲಾರಂಭಿಸಿದೆ. ಈ ನಡುವೆ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧವೂ ಗಂಭೀರ ಆರೋಪಗಳು ಕೇಳಿ ಬಂದಿವೆ. ಇದರ ನಿರ್ಮಾಣಕ್ಕಾಗಿ ಹಲವಾರು ಪ್ರಾಚೀನಾ ದೇವಸ್ಥಾನಗಳನ್ನು ನೆಲಸಮ ಮಾಡಿದ್ದು,  ಈ ಅವಶೇಷಗಳನ್ನು ಗಂಗಾ ನದಿಗೆ ಸುರಿಯಲಾಗಿದೆ ಎನ್ನಲಾಗಿದೆ.

ಆದರೆ ವಾಸ್ತವತೆ ಮಾತ್ರ ಬೇರೇನೋ ಹೇಳುತ್ತಿದೆ. ಕಾಶೀ ವಿಶ್ವನಾಥ ದೇಗುಲದ ಆಸುಪಾಸಿನಲ್ಲಿದ್ದ ಎಲ್ಲಾ ಪ್ರಾಚೀನ ಮಂದಿರಗಳು ಜನರ ಮನೆಯಲ್ಲಿ ಬಂಧಿತವಾಗಿದ್ದು, ಈಗ ಎಲ್ಲರಿಗೂ ಕಾಣಿಸಿಕೊಳ್ಳಲಾರಂಭಿಸಿವೆ. ದೇಗುಲ ಆಡಳಿತ ಮಂಡಳಿ ಈ ಎಲ್ಲಾ ಪ್ರಾಚೀನ ವಿಗ್ರಹಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಡುವುದಾಗಿ ಹೇಳುತ್ತಿದೆ. ಇವೆಲ್ಲದರೊಂದಿಗೆ ಪಿಎಂ ಮೋದಿಯ ಕನಸಿನ ಯೋಜನೆ ಕಾಶೀ ವಿಶ್ವನಾಥನ ದೇಗುಲಕ್ಕೆ ತೆರಳುವ ಹಾದಿಯ ಕಾಮಗಾರಿ ವೇಗವಾಗಿ ಸಾಗುತ್ತಿದೆ.

ಈ ಯೋಜನೆಯನ್ನು ಆಗಸ್ಟ್ 2021ರ ಒಳಗೆ ಪೂರೈಸಿ, ಉದ್ಘಾಟಿಸಬೇಕಿದೆ. ಇದೇ ಕಾರಣದಿಂದ ಈ ಕಾರ್ಯ ವೇಗವಾಗಿ ಸಾಗುತ್ತಿದೆ. ಕಾಶೀ ವಿಶ್ವನಾಥ ಕ್ಷೇತ್ರದ ಈ ಕಾಮಗಾರಿ ಪೂರ್ಣಗೊಳ್ಳಲು ಸುಮಾರು 800 ಕೋಟಿ ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿದೆ. ಇನ್ನು ಈ ಕೆಲಸ ಐದು ಸಾವಿರ ಸ್ಕ್ವೇರ್‌ ಫೀಟ್‌ನಲ್ಲಿ ತಯಾರಾಗುತ್ತಿದೆ.

ದೇಗುಲದ ಆಡಳಿತ ಮಂಡಳಿ ಅಧಿಕಾರಿ ವಿಶಾಲ್ ಸಿಂಗ್ ಈ ಸಂಬಂಧ ಪ್ರತಿಕ್ರಿಯಿಸುತ್ತಾ ಈ ಪರಿವರ್ತನೆ ಬಹಳ ದೊಡ್ಡದು. ಜನರಿಗೆ ಇದನ್ನು ಒಪ್ಪಿಕೊಳ್ಳಲು ಕೊಂಚ ಸಮಯ ತಗುಲಬಹುದು. ಮೊದಲು ಕೆಲ ಪುರಾತನ ಮಂದಿರಗಳನ್ನು ಕೆಡವಿ ಅವಶೇಷಗಳಳನ್ನು ಗಂಗಾ ನದಿಗೆ ಸುರಿದಿದ್ಧಾರೆಂಬ ವದಂತಿ ಹಬ್ಬಿಸಿದರು. ಆದರೆ ನೀವೇ ನೋಡಬಹುದು ಅವಶೇಷಗಳನ್ನು ಎಲ್ಲೂ ಬಿಸಾಡುತ್ತಿಲ್ಲ. ಇನ್ನು ಮಂದಿರಗಳನ್ನೂ ನಾವು ನಾಶ ಮಾಡಿಲ್ಲ, ಅವುಗಳ ಜೀರ್ಣೋದ್ಧಾರ ಮಾಡುತ್ತಿದ್ದೇವೆ ಎಂದಿದ್ದಾರೆ.

ಇನ್ನು ಈ ಕಾರಿಡಾರ್ ನಿರ್ಮಾಣದ ಗುತ್ತಿಗೆಯನ್ನು ಪಿಎಸ್‌ಪಿ ಕಂಪನಿ ವಹಿಸಿಕೊಂಡಿದೆ. ಈ ಕಂಪನಿಯ ಇಂಜಿನಿಯರ್‌ಗಳು ಹಾಗೂ ಉದ್ಯೋಗಿಗಳು ಹಗಲಿರುಳೆಂಬಂತೆ ಕಾಮಗಾರಿ ಪೂರ್ಣಗೊಳಿಸಲು ದುಡಿಯುತ್ತಿದ್ದಾರೆ. ಇಲ್ಲಿ ಕಂಪನಿಯ ಸುಮಾರು ಐವರು ಇಂಜಿನಿಯರ್ ಹಾಗೂ 155 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.