ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಕಿಡಿ, ಹಾವು ಕಡಿತ ಹೆಚ್ಚಳದ ಬಗ್ಗೆ ಅಧ್ಯಯನದ ಎಚ್ಚರಿಕೆ, ಶಾಸಕ ಮುನಿರತ್ನಗೆ ಕ್ಲೀನ್‌ ಚಿಟ್, ಶಾಸಕ ವೀರೇಂದ್ರ ಪಪ್ಪಿಗೆ ₹2000 ಕೋಟಿ ಆರೋಪ, ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯನ ಕಸ್ಟಡಿ ವಿಸ್ತರಣೆ.

1.ಶಾಸಕ ಯತ್ನಾಳ್‌ ‘5 ಲಕ್ಷ ರು.’ ಹೇಳಿಕೆ: ದ್ವೇಷ ಭಾಷಣಕ್ಕೆ ಹೈಕೋರ್ಟ್‌ ಕಿಡಿ

ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ ಐದು ಲಕ್ಷ ರು. ನೀಡುವುದಾಗಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರ ನಡೆ ತೀವ್ರವಾಗಿ ಆಕ್ಷೇಪಿಸಿರುವ ಹೈಕೋರ್ಟ್‌, ರಾಜಕಾರಣಿಗಳು ವಿವಿಧ ಧರ್ಮೀಯರ ಮಧ್ಯೆ ಸಹಬಾಳ್ವೆ ಮೂಡಿಸುವಂಥ ಕ್ರಾಂತಿಕಾರಕ ಕೆಲಸ ಮಾಡಬೇಕೇ ಹೊರತು ಸಮಾಜಕ್ಕೆ ಉಪಯೋಗವಿಲ್ಲದ ದ್ವೇಷ ಭಾವನೆ ಮೂಡಿಸುವ ಕೆಲಸವನ್ನಲ್ಲ ಎಂದು ಕಟುವಾಗಿ ಹೇಳಿದೆ. ಕೋಮು ಸಂಘರ್ಷಕ್ಕೆ ಪ್ರೇರಣೆ ನೀಡಿದ ಆರೋಪದ ಮೇಲೆ ಕೊಪ್ಪಳ ಟೌನ್‌ ಪೊಲೀಸ್‌ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಯತ್ನಾಳ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠ ಹೀಗೆ ನುಡಿಯಿತು.

2.ರಾಜ್ಯದ 3 ಜಿಲ್ಲೆಯಲ್ಲಿ ಹಾವು ಕಡಿತ ಹೆಚ್ಚಳ

ಹವಾಮಾನ ಬದಲಾವಣೆಗಳ ಪರಿಣಾಮದಿಂದಾಗಿ ಕರ್ನಾಟಕದ ಚಿಕ್ಕಬಳ್ಳಾಪುರ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳು ಸೇರಿದಂತೆ ಗುಜರಾತ್‌, ರಾಜಸ್ಥಾನ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ವಿಷಕಾರಿ ಹಾವಿನ ಪ್ರಮಾಣ ಮತ್ತು ಹಾವು ಕಡಿತದ ಪ್ರಮಾಣ ಹೆಚ್ಚಲಿದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ. ವಾತಾವರಣದಲ್ಲಿ ಉಷ್ಣತೆ ಮತ್ತು ಆರ್ದ್ರತೆ ಏರಿಕೆಯಿಂದಾಗಿ, ಹಾವುಗಳ ವಾಸಕ್ಕೆ ಅನುಕೂಲಕರಲ್ಲ ಎನ್ನುವ ಪ್ರದೇಶಗಳು ಕೂಡಾ ಮುಂದಿನ ದಿನಗಳಲ್ಲಿ ಅವುಗಳ ವಾತಾವರಣಕ್ಕೆ ಸೂಕ್ತವಾಗುವ ಹವಾಮಾನ ಸೃಷ್ಟಿಸಲಿದೆ.

3.ಅತ್ಯಾ*ರ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನಗೆ ಎಸ್‌ಐಟಿ ಕ್ಲೀನ್‌ ಚಿಟ್

ಬಿಜೆಪಿ ಕಾರ್ಯಕರ್ತೆ ಮೇಲೆ ಸಾಮೂಹಿಕ ಅತ್ಯಾ*ರ ಎಸಗಿದ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ಮತ್ತು ಅವರ ಬೆಂಬಲಿಗರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್ ಚಿಟ್‌ ನೀಡಿದೆ. ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ ಶಾಸಕರು ಹಾಗೂ ಅವರ ಬೆಂಬಗಲಿಗರಾದ ವಸಂತ, ಚನ್ನಕೇಶವ ಹಾಗೂ ಆಶ್ರಯನಗರದ ಕಮಲ್ ವಿರುದ್ಧ ನ್ಯಾಯಾಲಯಕ್ಕೆ ಎಸ್‌ಐಟಿ ಬಿ ರಿಪೋರ್ಟ್ ಸಲ್ಲಿಸಿದೆ. ಇದರೊಂದಿಗೆ ಅತ್ಯಾ*ರ ಆರೋಪಗಳ ಸುಳಿಯಲ್ಲಿ ಸಿಲುಕಿದ್ದ ಮುನಿರತ್ನ ನಿರಾಳರಾದಂತಾಗಿದೆ. ಕಳೆದ ಮೇ ತಿಂಗಳಲ್ಲಿ ಶಾಸಕರ ವಿರುದ್ಧ ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ಅತ್ಯಾ*ರ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣದ ತನಿಖೆಗೆ ಎಸ್‌ಐಟಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು.

4.ಚಿತ್ರದುರ್ಗ ಶಾಸಕನ ವಿರುದ್ಧ ಇ.ಡಿ. ಬಾಂಬ್‌: ಆನ್‌ಲೈನ್‌ ಬೆಟ್ಟಿಂಗಿಂದ ವೀರೇಂದ್ರ ಪಪ್ಪಿಗೆ ₹2000 ಕೋಟಿ!

ಅಕ್ರಮವಾಗಿ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳನ್ನು ನಡೆಸುತ್ತಿದ್ದ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ.)ದಿಂದ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗ ಕಾಂಗ್ರೆಸ್‌ ಶಾಸಕ ಕೆ.ಸಿ. ವೀರೇಂದ್ರ ಅಲಿಯಾಸ್ ಪಪ್ಪಿ ವಿರುದ್ಧ ಇ.ಡಿ. ಸ್ಫೋಟಕ ಆರೋಪ ಮಾಡಿದೆ. ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳನ್ನು ಬಳಸಿಕೊಂಡು ಅತ್ಯಂತ ಕಡಿಮೆ ಸಮಯದಲ್ಲೇ ಪಪ್ಪಿ ಬರೋಬ್ಬರಿ 2000 ಕೋಟಿ ರು. ಹಣವನ್ನು ಗಳಿಸಿದ್ದರು ಎಂದು ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ.

5.ಬುರುಡೆ ಕೇಸ್‌: ಚಿನ್ನಯ್ಯಗೆ ಕಸ್ಟಡಿ 3 ದಿನ ವಿಸ್ತರಣೆ, ವಕೀಲ ಕೆವಿ ಧನಂಜಯ ವಿರುದ್ಧವೂ ಎಸ್‌ಐಟಿಗೆ ದೂರು

ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಎಸ್ಐಟಿ ಕಸ್ಟಡಿ 3 ದಿನ ವಿಸ್ತರಣೆ ಆಗಿದೆ. ಆತನ ಕಸ್ಟಡಿ ಬುಧವಾರಕ್ಕೆ ಕೊನೆಗೊಂಡ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಅವರು ಮತ್ತೆ ಆತನನ್ನು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ, ನ್ಯಾಯಾಧೀಶರು ಚಿನ್ನಯ್ಯನ ಕಸ್ಟಡಿ ವಿಸ್ತರಿಸಿದ್ದಾರೆ. ಚಿನ್ನಯ್ಯ ವಾಸವಿದ್ದ ಮಂಡ್ಯ ಹಾಗೂ ತಮಿಳುನಾಡಿನ ಮನೆ ಹಾಗೂ ಮತ್ತಿತರ ಕಡೆಗಳ ಸ್ಥಳ ಮಹಜರು ಪ್ರಕ್ರಿಯೆ ಇನ್ನೂ ನಡೆದಿಲ್ಲ. ಈ ಕಾರಣಕ್ಕೆ ಎಸ್ಐಟಿ ಅಧಿಕಾರಿಗಳು ಸೆ.6ರ ವರೆಗೆ ಚಿನ್ನಯ್ಯನನ್ನು ಕಸ್ಟಡಿಗೆ ಪಡೆದಿದ್ದಾರೆ.