ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಕಸ್ಟಡಿ ಮೂರು ದಿನಗಳ ಕಾಲ ವಿಸ್ತರಣೆಯಾಗಿದೆ. ಸುಪ್ರೀಂ ಕೋರ್ಟ್ ವಕೀಲ ಕೆ.ವಿ. ಧನಂಜಯ ಮತ್ತು ಅವರ ತಂಡದ ವಿರುದ್ಧವೂ ದೂರು ದಾಖಲಾಗಿದೆ.
ಮಂಗಳೂರು (ಸೆ.4): ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಎಸ್ಐಟಿ ಕಸ್ಟಡಿ 3 ದಿನ ವಿಸ್ತರಣೆ ಆಗಿದೆ. ಆತನ ಕಸ್ಟಡಿ ಬುಧವಾರಕ್ಕೆ ಕೊನೆಗೊಂಡ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಅವರು ಮತ್ತೆ ಆತನನ್ನು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ, ನ್ಯಾಯಾಧೀಶರು ಚಿನ್ನಯ್ಯನ ಕಸ್ಟಡಿ ವಿಸ್ತರಿಸಿದ್ದಾರೆ. ಚಿನ್ನಯ್ಯ ವಾಸವಿದ್ದ ಮಂಡ್ಯ ಹಾಗೂ ತಮಿಳುನಾಡಿನ ಮನೆ ಹಾಗೂ ಮತ್ತಿತರ ಕಡೆಗಳ ಸ್ಥಳ ಮಹಜರು ಪ್ರಕ್ರಿಯೆ ಇನ್ನೂ ನಡೆದಿಲ್ಲ. ಈ ಕಾರಣಕ್ಕೆ ಎಸ್ಐಟಿ ಅಧಿಕಾರಿಗಳು ಸೆ.6ರ ವರೆಗೆ ಚಿನ್ನಯ್ಯನನ್ನು ಕಸ್ಟಡಿಗೆ ಪಡೆದಿದ್ದಾರೆ.
ಬುರುಡೆ ಕೇಸ್: ವಕೀಲ ಕೆ.ವಿ.ಧನಂಜಯ ವಿರುದ್ಧ ದೂರು:
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ್ಯಾಯವಾದಿ ಕೆ.ವಿ.ಧನಂಜಯ ಹಾಗೂ ಅವರ ತಂಡದ ವಿರುದ್ಧ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಧರ್ಮಸ್ಥಳ ಗ್ರಾಮಸ್ಥರು ಬುಧವಾರ ದೂರು ನೀಡಿದ್ದಾರೆ. ದೂರುದಾರ ಚಿನ್ನಯ್ಯ ತನ್ನ ಹೇಳಿಕೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯವಾದಿ ಕೆ.ವಿ. ಧನಂಜಯ ಅವರಿಗೆ ಎಲ್ಲ ದಾಖಲೆಗಳನ್ನು ನೀಡಿರುವುದಾಗಿ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಧನಂಜಯ ಅವರ ಬಳಿ ಇರುವ ದಾಖಲೆಗಳು ಏನು ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಅವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿಗಳನ್ನು ಹೊರ ತರಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ನ್ಯಾಯವಾದಿಗಳಾದ ಓಜಸ್ವಿ ಗೌಡ, ಸಚಿನ್ ದೇಶಪಾಂಡೆ, ದಿವಿನ್ ಧೀರಜ್, ಮಂಜುನಾಥ್ ಎಂಬುವರ ವಿರುದ್ಧವೂ ದೂರು ನೀಡಲಾಗಿದೆ. ದೂರನ್ನು ಸ್ವೀಕರಿಸಿರುವ ಎಸ್ಐಟಿ ಈ ಬಗ್ಗೆ ತನಿಖೆ ನಡೆಸುವುದಾಗಿ ಹಿಂಬರಹ ನೀಡಿದೆ.
