ಬಿಜೆಪಿ ಕಾರ್ಯಕರ್ತೆ ಮೇಲೆ ಸಾಮೂಹಿಕ ಅತ್ಯಾ*ರ ಎಸಗಿದ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ಮತ್ತು ಅವರ ಬೆಂಬಲಿಗರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್ ಚಿಟ್‌ ನೀಡಿದೆ.

ಬೆಂಗಳೂರು (ಸೆ.04): ಬಿಜೆಪಿ ಕಾರ್ಯಕರ್ತೆ ಮೇಲೆ ಸಾಮೂಹಿಕ ಅತ್ಯಾ*ರ ಎಸಗಿದ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ಮತ್ತು ಅವರ ಬೆಂಬಲಿಗರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್ ಚಿಟ್‌ ನೀಡಿದೆ. ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ ಶಾಸಕರು ಹಾಗೂ ಅವರ ಬೆಂಬಗಲಿಗರಾದ ವಸಂತ, ಚನ್ನಕೇಶವ ಹಾಗೂ ಆಶ್ರಯನಗರದ ಕಮಲ್ ವಿರುದ್ಧ ನ್ಯಾಯಾಲಯಕ್ಕೆ ಎಸ್‌ಐಟಿ ಬಿ ರಿಪೋರ್ಟ್ ಸಲ್ಲಿಸಿದೆ.

ಇದರೊಂದಿಗೆ ಅತ್ಯಾ*ರ ಆರೋಪಗಳ ಸುಳಿಯಲ್ಲಿ ಸಿಲುಕಿದ್ದ ಮುನಿರತ್ನ ನಿರಾಳರಾದಂತಾಗಿದೆ. ಕಳೆದ ಮೇ ತಿಂಗಳಲ್ಲಿ ಶಾಸಕರ ವಿರುದ್ಧ ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ಅತ್ಯಾ*ರ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣದ ತನಿಖೆಗೆ ಎಸ್‌ಐಟಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು.

ಏನಿದು ಪ್ರಕರಣ?: ಕ್ಷೇತ್ರದ ಬಿಜೆಪಿ ಕಾರ್ಯಕರ್ತೆಯಾಗಿದ್ದ ಸಂತ್ರಸ್ತೆಗೆ ಸ್ಥಳೀಯ ಬಿಜೆಪಿ ಮುಖಂಡರ ಪರಿಚಯವಿತ್ತು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಈ ಬಗ್ಗೆ ದೂರು ನೀಡಿದ್ದ ಮಹಿಳೆ, ‘ನನ್ನ ವಿರುದ್ಧ 2013ರಲ್ಲಿ ಪೀಣ್ಯ ಠಾಣೆಯಲ್ಲಿ ವೇಶ್ಯಾವಾಟಿಕೆ ನಡೆಸಿದ ಆರೋಪ ಹೊರಿಸಿ ಶಾಸಕ ಮುನಿರತ್ನ ಸುಳ್ಳು ಪ್ರಕರಣ ದಾಖಲಿಸಿದ್ದರು. ನಂತರ ಕೊಲೆ ಪ್ರಕರಣ ದಾಖಲಿಸಿದ್ದರು.

ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಮಾತುಕತೆಗೆ ಜೆ.ಪಿ.ನಗರ ಪಾರ್ಕ್ ಸಮೀಪದ ತಮ್ಮ ಕಚೇರಿಗೆ ಮುನಿರತ್ನ ಆಹ್ವಾನದ ಮೇರೆಗೆ ತೆರಳಿದ್ದೆ. ಆ ವೇಳೆ ಅವರ ಕಚೇರಿಯಲ್ಲೇ ನನ್ನನ್ನು ನಗ್ನವಾಗಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದರು’ ಎಂದು ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ಆರೋಪಿಸಿದ್ದರು.

ಮುನಿರತ್ನಗೆ ಇದು 50: 50 ಖುಷಿ: ಶಾಸಕ ಮುನಿರತ್ನ ವಿರುದ್ಧ ಎರಡು ಅತ್ಯಾ*ರ, ಬಿಬಿಎಂಪಿ ಗುತ್ತಿಗೆದಾರನಿಗೆ ಜೀವ ಬೆದರಿಕೆ, ಮಾಜಿ ಬಿಬಿಎಂಪಿ ಸದಸ್ಯ ವೇಲು ನಾಯ್ಕರ್ ಅವರಿಗೆ ಜಾತಿನಿಂದನೆ ಹಾಗೂ ಮಾಜಿ ಬಿಬಿಎಂಪಿ ಸದಸ್ಯೆ ಪತಿಗೆ ಹನಿಟ್ರ್ಯಾಪ್‌ ಯತ್ನ ಸೇರಿ ಒಟ್ಟು 6 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಒಂದು ಅತ್ಯಾ*ರ, ಬಿಬಿಎಂಪಿ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ವೇಲು ನಾಯ್ಕರ್ ವಿರುದ್ಧ ಜಾತಿನಿಂದನೆ ಸೇರಿ 3 ಪ್ರಕರಣಗಳಲ್ಲಿ ಎಸ್‌ಐಟಿ ಆರೋಪಪಟ್ಟಿ ಸಲ್ಲಿಸಿದೆ. ಇನ್ನುಳಿದ ಮೂರು ಪ್ರಕರಣಗಳಲ್ಲಿ ಸಾಕ್ಷ್ಯ ಇಲ್ಲವೆಂದು ಶಾಸಕರಿಗೆ ಎಸ್‌ಐಟಿ ಕ್ಲೀನ್ ಚೀಟ್ ನೀಡಿದೆ.