Asianet Suvarna News Asianet Suvarna News

ಸಮಾನತೆಗಾಗಿ ಅನುಕ್ಷಣ ಹೋರಾಡಿದ ಅಂಬೇಡ್ಕರ್

ಅಂದು ಬಾಬಾಸಾಹೇಬರು ತರಲು ಬಯಸಿದ್ದ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ (ದಾಯಭಾಗದ) ಹಕ್ಕು, ಏಕಪತ್ನಿತ್ವ, ವಿವಾಹ ಮತ್ತು ವಿಚ್ಛೇದನ, ದತ್ತಕ ಕಾಯ್ದೆ, ಉತ್ತರಾಧಿಕಾರತ್ವ ಮುಂತಾದ ಹಿಂದೂ ಕೋಡ್‌ ಬಿಲ್‌ನಲ್ಲಿ ಇದ್ದ ಅಂಶಗಳು ಇಂದು ನ್ಯಾಯಾಲಯಗಳ ಆದೇಶಗಳ ಅನುಸಾರ ಕಾಯ್ದೆಗಳಾಗಿ ರೂಪತಳೆದಿವೆ.

today ambedkar parinirvana day Ambedkar fought for equality rav
Author
First Published Dec 6, 2022, 12:37 PM IST

ಇಂದು ಅಂಬೇಡ್ಕರ್‌ ಪರಿನಿರ್ವಾಣ ದಿನ

ಡಾ.ಮಲ್ಲಿಕಾರ್ಜುನ ಗುಮ್ಮಗೋಳ

‘ನಾನು ನನಗಾಗಿ ಯಾವ ಹೋರಾಟ ಮಾಡಲಿಲ್ಲ. ನಾನು ಮನಸು ಮಾಡಿದ್ದರೆ ಕಾಂಗ್ರೇಸ್‌ ಪಕ್ಷ ಸೇರಿ ಯಾವುದೋ ಒಂದು ಉನ್ನತ ಸ್ಥಾನದಲ್ಲಿರುತ್ತಿದ್ದೆ. ಆದರೆ ನಾನು ಆ ಬಗೆಯ ಆಮಿಷಗಳಿಗೆ ಬಲಿಯಾಗಲಿಲ್ಲ. ನನ್ನ ಬದುಕು ಮತ್ತು ಹೋರಾಟ ಪರಿಶಿಷ್ಟವರ್ಗದ ಹಿತವೇ ಆಗಿತ್ತು. ವರ್ಣ, ವರ್ಗಭೇದ, ಲಿಂಗಭೇದ, ಅಸ್ಪೃಶ್ಯತೆ, ಆರ್ಥಿಕ ಅಸಮಾನತೆಗಳು ತೊಲಗಿ ಹಿಂದೂ ಸಮಾಜದ ಸಮಗ್ರ ವಿಕಾಸವಾಗಬೇಕು ಎಂಬ ಉದ್ದೇಶದಿಂದ ನಾನು ಪ್ರಸ್ತಾಪಿಸಿದ ‘ಹಿಂದೂ ಕೋಡ್‌ ಬಿಲ್‌’ ಅನ್ನು ಹುನ್ನಾರದಿಂದ ಸೋಲಿಸಲಾಯಿತು. ಆದ್ದರಿಂದ ನಾನು ಸಂಸತ್‌ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿದ್ದೇನೆ’ ಎಂದು ಅಕ್ಟೋಬರ್‌ 10, 1951ರಂದು ಡಾ.ಬಾಬಾಸಾಹೇಬರು ಹೇಳಿದ್ದರು.

ಅಚ್ಚರಿಯ ಸಂಗತಿ ಎಂದರೆ ಅಂದು ಬಾಬಾಸಾಹೇಬರು ತರಲು ಬಯಸಿದ್ದ; ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ (ದಾಯಭಾಗದ) ಹಕ್ಕು, ಏಕಪತ್ನಿತ್ವ, ವಿವಾಹ ಮತ್ತು ವಿಚ್ಛೇದನ, ದತ್ತಕ ಕಾಯ್ದೆ, ಉತ್ತರಾಧಿಕಾರತ್ವ ಮುಂತಾದ ಹಿಂದೂ ಕೋಡ್‌ ಬಿಲ್‌ನಲ್ಲಿ ಇದ್ದ ಅಂಶಗಳು ಇಂದು ನ್ಯಾಯಾಲಯಗಳ ಆದೇಶಗಳ ಅನುಸಾರ ಕಾಯ್ದೆಗಳಾಗಿ ರೂಪತಳೆದಿವೆ. ಅಂಬೇಡ್ಕರ್‌ ಅವರು ಕೇವಲ ದಲಿತರಿಗಾಗಿ ಹೋರಾಡಿದ್ದಾರೆ ಎಂಬ ಸಂಕುಚಿತ ಗ್ರಹಿಕೆ ಈ ಸಮಾಜದಲ್ಲಿದೆ. ಅರ್ಥಶಾಸ್ತ್ರ, ಕಾನೂನಶಾಸ್ತ್ರಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು ನೆಹರೂ ಸಂಪುಟದಲ್ಲಿ ಕಾನೂನು ಖಾತೆಯ ಜೊತೆಗೆ ಯೋಜನಾ ಖಾತೆಯನ್ನು ಪಡೆಯುವ ಮೂಲಕ ದೇಶದಲ್ಲಿ ಆರ್ಥಿಕ ಸಮಾನತೆಯನ್ನು ತರುವ ಮಹತ್ವದ ಕನಸನ್ನು ಹೊಂದಿದ್ದರು. ಆದರೆ ಅವರಿಗೆ ಆ ಖಾತೆ ಸಿಗಲಿಲ್ಲ.

ಪಾಂಡಿತ್ಯದಿಂದಲೇ ಮೇಲೆ ಬಂದರು

ಭಾರತದ ಪ್ರಧಾನಿ ಆಗುವ ಎಲ್ಲ ಅರ್ಹತೆ ಮತ್ತು ಯೋಗ್ಯತೆ ಹೊಂದಿದ್ದ ಬಾಬಾಸಾಹೇಬರು ಗಾಂಧೀಜಿ ಮತ್ತು ನೆಹರು ಅವರ ಕಟು ಟೀಕಾಕಾರಾಗಿದ್ದ ಕಾರಣಕ್ಕೆ ಹಾಗೂ ಅಸ್ಪೃಶ್ಯರಾಗಿದ್ದ ಕಾರಣಕ್ಕೆ ಹಲವಾರು ಅವಕಾಶಗಳನ್ನು ಕಳೆದುಕೊಂಡರು. ಭಾರತಕ್ಕೊಂದು ಸಂವಿಧಾನ ರಚಿಸುವ ಸಲುವಾಗಿ ಕ್ಯಾಬಿನೆಟ್‌ ಮಿಷನ್‌ ‘ರಾಜ್ಯಾಂಗ ರಚನಾ ಸಭೆ’ ರೂಪಿಸಲು ಚುನಾವಣೆಯನ್ನು ನಡೆಸಿತು. ಮುಂಬೈನಿಂದ ಚುನಾವಣೆಗೆ ನಿಂತ ಅಂಬೇಡ್ಕರರನ್ನು ಕಾಂಗ್ರೆಸ್‌ ಪಕ್ಷವೇ ಸೋಲಿಸಿತು! ಪರಿಶಿಷ್ಟಜಾತಿಯ ಸದಸ್ಯರ ಸಹಾಯದಿಂದ ಅವರು ಬಂಗಾಲ ವಿಧಾನಸಭೆಯಿಂದ ಆಯ್ಕೆಯಾಗಬೇಕಾಯಿತು. ಅಮೆರಿಕದ ಕೋಲಂಬಿಯಾ ಮತ್ತು ಲಂಡನ್‌ ವಿ.ವಿ.ಗಳಿಂದ ಡಾಕ್ಟರೆಟ್‌ ಪದವಿ ಗಳಿಸಿದ್ದ ಮಹಾ ಮೇಧಾವಿ ಅಂಬೇಡ್ಕರ್‌ ತಮ್ಮ ಪಾಂಡಿತ್ಯದಿಂದ ಬಹುಬೇಗನೆ ಜನಪ್ರಿಯರಾದರು. ದಲಿತರ ಹಕ್ಕುಗಳಿಗಾಗಿ ಅವರು ಯಾರೊಂದಿಗಾದರೂ ಕಾದಾಟಕ್ಕೆ ನಿಲ್ಲುತ್ತಿದ್ದರು. ಯಾವ ಕೆಲಸವನ್ನೂ ಮಾಡಲು ಆಗದಂತಹ ಖಾತೆ ನನ್ನ ಪಾಲಿಗೆ ‘ಎಂಪ್ಟಿಸೋಪ್‌ ಬಾಕ್ಸ್‌’ ಎಂದು ಮಂತ್ರಿ ಪದವಿಯನ್ನು ಧಿ​ಕ್ಕರಿಸಿದ್ದರು.

ಅಂಬೇಡ್ಕರರು ‘ಬುದ್ಧ ಆಂಡ್‌ ಹಿಸ್‌ ಧಮ್ಮ’ ಎಂಬ ಕೃತಿಯನ್ನು ಬರೆದಿದ್ದರು. ಅದರ ಪ್ರಕಟಣೆಗೆ 20 ಸಾವಿರ ಹಣ ಬೇಕಾಗುತ್ತದೆ. ಸರ್ಕಾರದಿಂದ ಪ್ರಕಟಣೆಗೆ ಸಹಾಯ ಕೋರಿ ಪ್ರಧಾನಿ ನೆಹರು ಅವರಿಗೆ ಪತ್ರ ಬರೆದರು. ಆದರೆ ನೆಹರು ಅವರು ನಿಮ್ಮ ಪುಸ್ತಕ ಮಾರಾಟ ಮಾಡಿಕೊಳ್ಳಲು ಬೌದ್ಧ ಪ್ರವಾಸಿ ತಾಣಗಳಲ್ಲಿ ಸ್ಥಳಾವಕಾಶ ಕೊಡಲಾಗುವುದು. ಪ್ರಕಟಣೆಗೆ ಹಣಕಾಸಿನ ಸಹಾಯ ಮಾಡಲಾಗುವುದಿಲ್ಲ ಎಂದು ತಿಳಿಸಿದರು.

ಬ್ರಿಟಿಷರಿಂದಲೇ ಹೆಚ್ಚು ನೆರವು

ಹಾಗೆ ನೋಡಿದರೆ ಅಂಬೇಡ್ಕರ್‌ ಒಬ್ಬ ಪ್ರಚಂಡ ಶಕ್ತಿಯಾಗಿ ಬೆಳೆಯುವುದಕ್ಕೆ ಭಾರತೀಯರಿಗಿಂತ ಬ್ರಿಟಿಷರೇ ಹೆಚ್ಚು ನೆರವಾಗಿದ್ದರು. ಮಹಾರ ಸಮುದಾಯದ ಜನರ ಶ್ರದ್ಧೆ ಮತ್ತು ಪ್ರಾಮಾಣಿಕ ಪರಿಶ್ರಮದ ಕಾರಣಕ್ಕಾಗಿ ಈಸ್ಟ್‌ ಇಂಡಿಯಾ ಕಂಪನಿ ಸೇನೆಯಲ್ಲಿ ಆ ಜನರನ್ನು ಸಿಪಾಯಿಗಳನ್ನಾಗಿ ಸೇರಿಸಿಕೊಂಡಿದ್ದರು. ಭೀಮರಾವ ಅವರ ತಂದೆ ರಾಮಜೀ ಸಕ್ಪಾಲ ಅಂಬಾವಾಡೆಕರ್‌ ಹೀಗೆಯೇ ಬ್ರಿಟಿಷ್‌ ಸೇನೆಯಲ್ಲಿ ಸುಬೇದಾರರಾಗಿದ್ದರು. ಈ ಕಾರಣಕ್ಕಾಗಿ ಅವರಿಗೆ ಶಾಲೆಗೆ ಹೋಗುವ ಭಾಗ್ಯ ಸಿಕ್ಕಿತ್ತಾದರೂ ಅಲ್ಲಿಯ ಅಸ್ಪೃಶ್ಯತೆ ಅವರನ್ನು ಘಾಸಿಗೊಳಿಸಿತ್ತು. ಹಿಂದುಳಿದ ವರ್ಗಕ್ಕೆ ಸೇರಿದ ಬರೋಡೆಯ ಹಾಗೂ ಕೊಲ್ಲಾಪುರದ ಮಹಾರಾಜರ ಹಣಕಾಸಿನ ನೆರವಿನಿಂದ ವಿದೇಶಕ್ಕೂ ಹೋಗಿ ಉನ್ನತ ವ್ಯಾಸಂಗ ಮಾಡುವ ಅವಕಾಶ ಲಭಿಸಿತು. ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ಭಾರತದ ದಲಿತ ಸ್ಥಿತಿಗತಿಗಳ ಬಗ್ಗೆ ಜಾಗತಿಕ ನಾಯಕರೊಂದಿಗೆ ಚರ್ಚೆ, ವಿಚಾರಗೋಷ್ಠಿ, ಪತ್ರಿಕೆಗಳಿಗೆ ಲೇಖನ ಬರೆಯುವ ಮೂಲಕ ಜಾಗೃತಿಯನ್ನು ಉಂಟುಮಾಡಿದರು.

ಕಾಂಗ್ರೆಸ್ಸನ್ನು ಟೀಕಿಸುತ್ತಿದ್ದರು

ಭಾರತಕ್ಕೆ ಮರಳಿ ಬಂದಾಗ ಸಾರ್ವಜನಿಕ ಬಾವಿಯಿಂದ ನೀರು ತರುವ, ದೇವಸ್ಥಾನಗಳಿಗೆ ದಲಿತರ ಪ್ರವೇಶ ಮುಂತಾದ ಚಳವಳಿಗಳನ್ನು ಹಮ್ಮಿಕೊಂಡರು. ಇದರಿಂದ ಅವರ ಮೇಲೆ ಹಲ್ಲೆಗಳಾದವು. ದಲಿತ ಮಕ್ಕಳನ್ನು ಶಾಲೆಯಿಂದ ಹೊರದಬ್ಬಲಾಯಿತು, ಎಲ್ಲ ಕಡೆ ಬಹಿಷ್ಕಾರ ಹಾಕಲಾಯಿತು. ದಲಿತರ ಸ್ಥಿತಿ ಮತ್ತಷ್ಟುಹೀನಾಯವಾಯಿತು. ಉಪ್ಪಿನ ಸತ್ಯಾಗ್ರಹದಲ್ಲಿ ನಿರತರಾಗಿದ್ದ ಗಾಂ​ಧೀಜಿಯಾಗಲಿ, ಕಾಂಗ್ರೆಸ್‌ ಆಗಲಿ ನೆರವಿಗೆ ಬರಲಿಲ್ಲ. ‘ಕಾಂಗ್ರೆಸ್‌ ಪಕ್ಷ ಪ್ರಜಾಪ್ರಭುತ್ವ ಸೋಗಿನ ಕರ್ಮಠ’ ಎಂದು ಅಂಬೇಡ್ಕರ್‌ ಟೀಕಿಸಿದ್ದರು. ಪೆರಿಯಾರ್‌ ರೀತಿಯಲ್ಲಿ ಬೀದಿಗಿಳಿದು ಹೋರಾಟ ಮಾಡುವ ಸಂಘಟನಾಶಕ್ತಿ ಮತ್ತು ಬಲವನ್ನು ಹೊಂದಿರದ ಅಂಬೇಡ್ಕರ್‌ ಕಾನೂನಿನ ಮೂಲಕ ತಮ್ಮ ಹೋರಾಟವನ್ನು ಆರಂಭಿಸಿದರು. ಕಂಪನಿ ಸರ್ಕಾರಕ್ಕೆ, ಬ್ರಿಟಿಷ್‌ ಪ್ರಭುತ್ವಕ್ಕೆ ಪಿಟಿಷನ್‌ಗಳನ್ನು ಬರೆಯುವ ಮೂಲಕ ದಲಿತರಿಗೆ ಸಮಾನತೆ ತಂದುಕೊಡುವಲ್ಲಿ ನಿರತರಾದರು. ವಿದ್ವತ್‌ಪೂರ್ಣ ಕೃತಿಗಳ ಮೂಲಕ ನಾಡಿನ ಗಮನ ಸೆಳೆದರು.

ಇವರ ಪ್ರಾತಿನಿಧ್ಯದ ಅಗತ್ಯತೆಯನ್ನು ಮನಗಂಡ ಬ್ರಿಟಿಷರು ಭಾರತದ ಗವರ್ನರ್‌ ಜನರಲ್‌ರವರ ಕಾರ್ಯಕಾರಿ ಪರಿಷತ್ತಿನ ಕಾರ್ಮಿಕ ಸಚಿವರನ್ನಾಗಿ 1942ರಲ್ಲಿ ನೇಮಿಸಿದರು. ಶೇ.90ರಷ್ಟುಕಾರ್ಮಿಕರು ದಲಿತರು ಎಂಬುದನ್ನು ಮನಗಂಡ ಅವರು ಕಾರ್ಮಿಕ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಗಣಿಗಳಲ್ಲಿ 400 ಅಡಿಗಳ ಆಳಕ್ಕೆ ಇಳಿದು ಕಾರ್ಮಿಕರು ಅನುಭವಿಸುವ ಯಾತನೆಗಳನ್ನು ತಿಳಿದುಕೊಂಡರು. ಇವತ್ತು ದೇಶದಲ್ಲಿ ಇರುವ ಕಾರ್ಮಿಕ ಕಾಯ್ದೆಗಳು ಅಂಬೇಡ್ಕರ್‌ ಅವರ ಕೊಡುಗೆಗಳು. ತಮ್ಮ ಕಾರ್ಯಕ್ಷಮತೆಯಿಂದಾಗಿ ಅವರೊಬ್ಬ ಅಲಕ್ಷಿಸಲಾಗದ ಸೂರ್ಯನಾಗಿ ಬೆಳೆದರು.

ದಲಿತರಿಗಾಗಿ ಅಹರ್ನಿಶಿ ಪರಿಶ್ರಮ

ಬ್ರಿಟಿಷರ ಮುಂದೆ ಜಿನ್ನಾ ಹೇಗೆ ಪ್ರತ್ಯೇಕ ದೇಶದ ಬೇಡಿಕೆ ಇಟ್ಟರೋ ಹಾಗೆ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ರಚಿಸಬೇಕು ಎಂದು ಅಂಬೇಡ್ಕರ್‌ ಅವರು ಹೋರಾಟ ಆರಂಭಿಸಿದರು. ಮ್ಯಾಕ್‌ಡೊನಾಲ್ಡ್‌ ಅವರು ಇದಕ್ಕೆ ಸಮ್ಮತಿಸಿದರು. ಇದು ದೇಶ ಒಡೆಯುವ ತಂತ್ರ ಎಂದು ಇದನ್ನು ವಿರೋಧಿ​ಸಿ ಗಾಂ​ಧೀಜಿ ಯರ್ವಾಡಾ ಜೈಲಿನಲ್ಲಿ ಉಪವಾಸ ಕುಳಿತರು. ‘ಮೊಂಡುತನದಿಂದ ಪಡೆಯಲಾಗದ್ದನ್ನು ಹೊಂದಾಣಿಕೆಯಿಂದ ಪಡೆಯಬೇಕು’ ಎಂಬ ಬುಕರ್‌ ವಾಷಿಂಗ್ಟನ್‌ ಗುರುಗಳ ಮಾತಿನಂತೆ ಅಂಬೇಡ್ಕರ್‌ ಅವರು ಗಾಂಧೀಜಿಯೊಂದಿಗೆ ಪೂನಾ ಒಪ್ಪಂದ ಮಾಡಿಕೊಂಡು ದಲಿತರಿಗೆ ಸ್ಥಾನಗಳ ಮೀಸಲಾತಿ ಪಡೆದರು.

ಸಂವಿಧಾನ, ಕಾನೂನುಗಳು ಜಾರಿಗೆ ಬಂದ ಮೇಲೂ ದಲಿತರಿಗೆ ಆಗುವ ಅನ್ಯಾಯವನ್ನು ಕಂಡ ಅಂಬೇಡ್ಕರ್‌ ಕ್ರೋಧಗೊಂಡಿದ್ದರು. ‘ನೆಹರೂ ಮುಸ್ಲಿಮರ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ಮಾತ್ರ ಇದ್ದಾರೆ. ದಲಿತರನ್ನು ಕಡೆಗಣಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ತನ್ನ ಉದ್ದೇಶ ಸಾಧನೆಗಾಗಿ ರಿಪಬ್ಲಿಕನ್‌ ಎಂಬ ಪಕ್ಷವನ್ನು ಕಟ್ಟಿ, ಕಾಂಗ್ರೆಸೇತರ ವ್ಯಕ್ತಿಯಾಗಿ ಎದ್ದು ನಿಂತಿರುವುದು ಸಾಮಾನ್ಯದ ಸಂಗತಿಯಲ್ಲ. ಜಾತಿವಿನಾಶಕ್ಕಾಗಿ ಹೋರಾಡಿದ ಅವರಿಗೆ ದಲಿತ ಪ್ರತಿನಿ​ಧಿಗಳೇ ಕೊನೆಗೆ ಸಾಥ್‌ ನೀಡಲಿಲ್ಲ! ಮನನೊಂದು ಜಾತಿಧರ್ಮವನ್ನೇ ತ್ಯಜಿಸಿದರು. ಇಡೀ ಭಾರತವನ್ನೇ ಬೌದ್ಧಮಯ ಮಾಡುತ್ತೇನೆ ಎಂದು ಹತಾಶೆಯಿಂದ ಗುಡುಗಿದರು. ಕಡು ಕೆಂಡದಂತೆ ಉರಿದ ಕ್ರಾಂತಿಕಾರಿ, ಸುಖ ಬದುಕಿನ ಲವಲೇಶವಿಲ್ಲದೆ ಹಗಲು ರಾತ್ರಿ ಅಧ್ಯಯನ, ಹೋರಾಟ ಮಾಡಿ ಆರೋಗ್ಯ ಕೆಡಿಸಿಕೊಂಡು, ನಿರ್ಗಮಿಸಬಾರದ ಸಮಯದಲ್ಲಿ ಇಹಲೋಕ ತ್ಯಜಿಸಿದರು.

ಅಂಬೇಡ್ಕರ್‌ ಅವರು ಕಂಡ ಕನಸುಗಳು ಇನ್ನೂ ದಲಿತ ಕೇರಿಯಲ್ಲಿ ಅನುರಣಿಸುತ್ತಿವೆ. ತನ್ನ ಮೊಬೈಲ್‌ಗೆ ಅಂಬೇಡ್ಕರ್‌ ಸ್ತುತಿಯ ರಿಂಗ್‌ಟೋನ್‌ ಇಟ್ಟುಕೊಂಡದ್ದಕ್ಕಾಗಿ ದಲಿತ ಹುಡುಗನ ನಿರ್ದಯ ಹತ್ಯೆಯಾಗುತ್ತದೆ. ಇಂತಹ ಅಸಹನೆಯ, ಅನಾಗರಿಕ ಕೃತ್ಯಗಳನ್ನು ನೋಡಿದರೆ, ‘ಸಮಾನತೆಯನ್ನು ತರದ ಕಾನೂನುಗಳು ತಿಪ್ಪೆ ಮೇಲೆ ಕಟ್ಟಿದ ಅರಮನೆಗಳು’ ಎಂಬ ಅಂಬೇಡ್ಕರರ ಮಾತು ಸತ್ಯವೆನ್ನಿಸುತ್ತಿದೆ. ಅಂಬೇಡ್ಕರ್‌ ಭಾವಚಿತ್ರವನ್ನು ಮತಬ್ಯಾಂಕ್‌ ಸಲುವಾಗಿ ಹೊತ್ತು ಮೆರೆಯುವ ಜನ 70 ವರ್ಷಗಳ ಆಳ್ವಿಕೆಯಲ್ಲಿ ದಲಿತರಿಗೆ ಏನು ಮಾಡಿದ್ದಾರೆ? ದಲಿತರನ್ನೇ ಶೋಷಿಸುವ ದಲಿತ ವರ್ಗಗಳನ್ನು ಸೃಷ್ಟಿಮಾಡಿದ್ದಾರೆ ಅಷ್ಟೆ.

Follow Us:
Download App:
  • android
  • ios