ವೆಂಕಟೇಶ್‌ ಕಲಿಪಿ

ಬೆಂಗಳೂರು(ಅ.12): ಪತಿ-ಪತ್ನಿ ನಡುವಿನ ಜಗಳ ಕೋರ್ಟ್‌ ಮೆಟ್ಟಿಲೇರಿದ ಸಂದರ್ಭದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಸಾಮಾನ್ಯ. ಆದರೆ, ಆರೋಪ ಮಾಡುವ ಭರದಲ್ಲಿ ಪತಿಯ ತೇಜೋವಧೆ ಮಾಡುವ ಕೀಳು ಆರೋಪ ಮಾಡಿದ ಮಹಿಳೆಗೆ ಕೆಳ ಹಂತದ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್‌ ರದ್ದು ಮಾಡಿದೆ. ಮಗುವಿನ ಆರೈಕೆ ಮಾಡಬೇಕೆಂಬ ಮಾನವೀಯ ನೆಲೆಯಲ್ಲಿ ಆಕೆಗೆ ವಿಧಿಸಲಾಗಿದ್ದ ಜೈಲು ಶಿಕ್ಷೆಯಿಂದ ವಿನಾಯ್ತಿ ನೀಡಿದೆ.

‘ನಗ್ನವಾಗಿ ನೃತ್ಯ ಮಾಡುವಂತೆ ಒತ್ತಾಯಿಸುತ್ತಾರೆ ಮತ್ತು ಸ್ನೇಹಿತರಿಗಾಗಿ ಪಿಂಪ್‌ ಕೆಲಸ ಮಾಡುತ್ತಾರೆ’ ಎಂದು ತನ್ನ ಪತಿ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದ ಮಹಿಳೆಯ ವಿರುದ್ಧ ಪತಿ ಮಾನನಷ್ಟಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಂಡ ಹಾಗೂ ಜೈಲು ಶಿಕ್ಷೆ ಎರಡನ್ನು ವಿಧಿಸಿತ್ತು. ಈ ಬಗೆ ಸಲ್ಲಿಕೆಯಾಗಿದ್ದ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್‌, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಒಂದು ತಿಂಗಳ ಜೈಲು ಶಿಕ್ಷೆಯನ್ನು ರದ್ದುಪಡಿಸಿದೆ. ಜೈಲು ಬದಲಾಗಿ ದಂಡದ ಮೊತ್ತವನ್ನು 5ರಿಂದ 15 ಸಾವಿರಕ್ಕೆ ಹೆಚ್ಚಿಸಿದೆ.

ಕಾವ್ಯ ಮತ್ತು ರವಿ (ಇಬ್ಬರ ಹೆಸರು ಬದಲಿಸಲಾಗಿದೆ) ದಂಪತಿಯಾಗಿದ್ದು, ಭಿನ್ನಾಭಿಪ್ರಾಯದಿಂದ ಪ್ರತ್ಯೇಕವಾಗಿ ವಾಸುತ್ತಿದ್ದರು. ಇದರಿಂದ ವೈವಾಹಿಕ ಜೀವನದ ಹಕ್ಕುಗಳ ಮರು ಸ್ಥಾಪನೆಗೆ ಆದೇಶಿಸಲು ಕೋರಿ ರವಿ, 2001ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಕಾವ್ಯ, ‘ಪತಿ ಮದ್ಯಪಾನ ಮಾಡುತ್ತಾರೆ. ರಾತ್ರಿ ವೇಳೆ ಹಲ್ಲೆ ಮಾಡುತ್ತಾರೆ. ನಗ್ನವಾಗಿ ನೃತ್ಯ ಮಾಡುವಂತೆ ಒತ್ತಾಯಿಸುತ್ತಾರೆ. ಸ್ನೇಹಿತರಿಗಾಗಿ ಪಿಂಪ್‌ ಕೆಲಸ ಮಾಡುತ್ತಾರೆ’ ಎಂದು ಗಂಭೀರವಾಗಿ ದೂರಿದ್ದರು.

ಇದರಿಂದ ರವಿಯು 2006ರಲ್ಲಿ ವಿಚಾರಣಾ ನ್ಯಾಯಾಲಯದ ಮೆಟ್ಟಿಲೇರಿ ಪತ್ನಿಯ ವಿರುದ್ಧ ಮಾನ ನಷ್ಟಮೊಕದ್ದಮೆ ದಾಖಲಿಸಿದ್ದರು. ‘ನನ್ನ ವಿರುದ್ಧ ಪತ್ನಿ ಸುಳ್ಳು ಆರೋಪ ಮಾಡುವ ಮೂಲಕ ಮಾನ ಹಾನಿ ಮಾಡಿದ್ದಾರೆ. ಇದರಿಂದ ನನ್ನ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ. ಈ ಅವಮಾನದಿಂದ ಸಾಕಷ್ಟುನೋವು ಅನುಭವಿಸಿದ್ದೇನೆ. ಸಮಾಜದಲ್ಲಿ ತಲೆ ಎತ್ತಿಕೊಂಡು ಓಡಾಡಲು ಸಾಧ್ಯವಾಗುತ್ತಿಲ್ಲ’ ಎಂದು ಆಕ್ಷೇಪಿಸಿದ್ದರು.

ಪತಿಯ ವಿರುದ್ಧದ ಅರೋಪಗಳನ್ನು ಸಾಬೀತು ಪಡಿಸಲು ಕಾವ್ಯ ವಿಫಲರಾದರು. ಇದರಿಂದ ಪ್ರಕರಣದಲ್ಲಿ ಕಾವ್ಯ ದೋಷಿ ಎಂದು ತೀರ್ಮಾನಿಸಿದ ವಿಚಾರಣಾ ನ್ಯಾಯಾಲಯ, ಆಕೆಗೆ ಒಂದು ತಿಂಗಳು ಸಾಧಾರಣ ಜೈಲು ಶಿಕ್ಷೆ ಮತ್ತು .5 ಸಾವಿರ ದಂಡ ವಿಧಿಸಿತ್ತು. ಈ ಆದೇಶ ರದ್ದು ಕೋರಿ ಕಾವ್ಯ ಮತ್ತು ಶಿಕ್ಷೆ ಪ್ರಮಾಣ ಹೆಚ್ಚಿಸಲು ಮನವಿ ಮಾಡಿ ರವಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

‘ಜೈಲಿಗೆ ಕಳುಹಿಸೋದು ಸೂಕ್ತವಲ್ಲ’

ಎರಡೂ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಬಿ.ಪ್ರಭಾಕರ ಶಾಸ್ತ್ರಿ ಅವರು, ಪತಿಯ ವಿರುದ್ಧ ಮಾಡಿದ ಆರೋಪಗಳು ಸತ್ಯವೆಂದು ಸಾಬೀತು ಮಾಡುವಲ್ಲಿ ಕಾವ್ಯ ವಿಫಲರಾಗಿದ್ದಾರೆ. ಹೀಗಾಗಿ, ಆಕೆ ಮಾನನಷ್ಟಪ್ರಕರಣದಲ್ಲಿ ದೋಷಿಯಾಗಿದ್ದಾರೆ ಎಂದು ತೀರ್ಮಾನಿಸಿದರು. ಜತೆಗೆ, ಮಾನನಷ್ಟಪ್ರಕರಣದಲ್ಲಿ ದೋಷಿಗೆ ಎರಡು ವರ್ಷದವರೆಗೆ ಜೈಲು ಅಥವಾ ದಂಡ ಇಲ್ಲವೇ ಎರಡೂ ವಿಧಿಸಬಹುದು. ವಿಚಾರಣಾ ನ್ಯಾಯಾಲಯವು ಕಾವ್ಯಗೆ ಒಂದು ತಿಂಗಳು ಜೈಲು ಮತ್ತು .5 ಸಾವಿರ ದಂಡ ವಿಧಿಸಿದೆ. ಕಾವ್ಯಗೆ ಸಣ್ಣ ವಯಸ್ಸು (34). ಮೇಲಾಗಿ ಅಪ್ರಾಪ್ತ ವಯಸ್ಸಿನ ಮಗಳಿದ್ದು, ಆಕೆಯನ್ನು ಆರೈಕೆ ಮಾಡಬೇಕಿದೆ. ಮತ್ತೊಂದೆಡೆ ಮಾನನಷ್ಟಮೊಕದ್ದಮೆ ಹೂಡಿರುವ ರವಿ ಆ ಅಪ್ರಾಪ್ತ ಮಗಳ ತಂದೆಯಾಗಿದ್ದಾರೆ. ಇಂತಹ ವಿಶೇಷ ಪರಿಸ್ಥಿತಿಯಲ್ಲಿ ಶಿಕ್ಷೆ ಅನುಭವಿಸಲು ಕಾವ್ಯರನ್ನು ಜೈಲಿಗೆ ಕಳುಹಿಸುವುದು ಸೂಕ್ತವಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಜೈಲು ರದ್ದು; ದಂಡ 15 ಸಾವಿರಕ್ಕೆ ಹೆಚ್ಚಳ

ಜೈಲು ಶಿಕ್ಷೆಯು ಅಲ್ಪಾವಧಿಯಾಗಿದ್ದೂ, ಕಾವ್ಯ ಮತ್ತು ಪುತ್ರಿಯ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ಮಾನನಷ್ಟಪ್ರಕರಣದಲ್ಲಿ ತಪ್ಪಿತಸ್ಥರಿಗೆ ದಂಡ ಮಾತ್ರ ವಿಧಿಸುವ ವಿವೇಚನಾಧಿಕಾರವನ್ನೂ ಕಲ್ಪಿಸಿರುವುದರಿಂದ ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ದಂಡ ಮೊತ್ತವನ್ನು ಹೆಚ್ಚಿಸಬಹುದಾಗಿದೆ ಅಭಿಪ್ರಾಯಪಟ್ಟಹೈಕೋರ್ಟ್‌, ಮಾನನಷ್ಟಪ್ರಕರಣದಲ್ಲಿ ಕಾವ್ಯರನ್ನು ದೋಷಿಯಾಗಿ ತೀರ್ಮಾನಿಸಿದ ವಿಚಾರಣಾ ನ್ಯಾಯಾಲಯ ತೀರ್ಪನ್ನು ಪುರಸ್ಕರಿಸಿತು. ಆದರೆ, ಆಕೆಗೆ ವಿಧಿಸಿದ್ದ ಒಂದು ತಿಂಗಳ ಜೈಲು ಶಿಕ್ಷೆಯನ್ನು ರದ್ದುಪಡಿಸಿ, ದಂಡ ಮೊತ್ತವನ್ನು 5ರಿಂದ 15 ಸಾವಿರಕ್ಕೆ ಹೆಚ್ಚಿಸಿತು. ಆ ಮೊತ್ತವನ್ನು 60 ದಿನಗಳಲ್ಲಿ ಪಾವತಿ ಮಾಡಬೇಕು. ತಪ್ಪಿದರೆ ಒಂದು ತಿಂಗಳು ಸಾಧಾರಣ ಜೈಲುಶಿಕ್ಷೆ ಅನುಭವಿಸಬೇಕೆಂದು ಎಂದು ಆದೇಶಿಸಿತು.