ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿಯನ್ನು ತುಂಡರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಗನದೊಡ್ಡಿ ಗೋವಿಂದ 'ಮರಿ ವೀರಪ್ಪನ್' ಎಂದು ಕುಖ್ಯಾತಿ ಪಡೆದಿದ್ದಾನೆ. ವೀರಪ್ಪನ್‌ನಂತೆಯೇ ದೊಡ್ಡ ಕಾಡುಗಳ್ಳನಾಗಿ ಬೆಳೆಯುವ ಮುನ್ನ ಈತನನ್ನು ಬಂಧಿಸಲು ಅರಣ್ಯ ಇಲಾಖೆ ಬಲೆ ಬೀಸಿದೆ.

ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.

ಚಾಮರಾಜನಗರ (ನ.12) - ಕಾಡುಗಳ್ಳ, ದಂತಚೋರ ವೀರಪ್ಪನ್ ಯಾರಿಗೆ ತಾನೇ ಗೊತ್ತಿಲ್ಲ. ವನ್ಯಪ್ರಾಣಿಗಳ ಬೇಟೆಯಾಡೋದ್ರಲ್ಲಿ ಎತ್ತಿದ ಕೈ. ಇದೀಗಾ ವೀರಪ್ಪನ್ ಸ್ಥಾನ ತುಂಬಲು ಮರಿ ವೀರಪ್ಪನ್ ಒಬ್ಬ ಬಂದಿದ್ದಾನೆಂದು ಶಾಸಕರೊಬ್ಬರು ಹೇಳಿದ್ದಾರೆ. ಅರಣ್ಯ ಅಧಿಕಾರಿಗಳು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಈ ಮರಿ ವೀರಪ್ಪನ್ ಯಾರೂ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.

ದೈತ್ಯ ಹುಲಿಯನ್ನ ಮೂರು ತುಂಡು ಮಾಡಿದ ಮರಿ ವೀರಪ್ಪನ್ ಯಾರು?

ಚಾಮರಾಜನಗರ ಜಿಲ್ಲೆ ಹುಲಿಗಳ ನಾಡು ಎಂದು ಖ್ಯಾತಿ ಪಡೆದಿದೆ. ರಾಜ್ಯದಲ್ಲಿ ಅತಿ ಹೆಚ್ಚು ಹುಲಿ ಹೊಂದಿರುವ ಏಕೈಕ ಜಿಲ್ಲೆ ಕೂಡ ಹೌದು. ಮಲೆ ಮಹದೇಶ್ವರ ವನ್ಯಧಾಮದ ಪಚ್ಚೆದೊಡ್ಡಿ ಗಸ್ತಿನಲ್ಲಿ ದೈತ್ಯ ಹುಲಿಯನ್ನು ಮೂರು ತುಂಡುಗಳಾಗಿ ಕತ್ತರಿಸಲಾಗಿತ್ತು. ಇದು ಪ್ರತೀಕಾರದ ಹತ್ಯೆಯೇ ಎಂಬುದು ಕೂಡ ಸಾಭೀತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿ ಈಗಾಗಲೇ ಜೈಲಿಗೆ ಅಟ್ಟಿದ್ದಾರೆ. ಆದ್ರೆ ಈ ಪ್ರಕರಣದ ಮತ್ತೊಬ್ಬ ಆರೋಪಿ ಗಂಗನದೊಡ್ಡಿ ಗೋವಿಂದ ಅರಣ್ಯಾಧಿಕಾರಿಗಳಿಗೆ ಚಳ್ಳೇಹಣ್ಣು ತಿನ್ನಿಸುತ್ತಾ ಇನ್ನೂ ಕೂಡ ತಲೆಮರೆಸಿಕೊಂಡಿದ್ದಾನೆ. 

ನಗರದ ಕೆಡಿಪಿ ಸಭೆಯಲ್ಲೂ ಕೂಡ ಹುಲಿ ಸಾವಿನ ಹತ್ಯೆ ಬಗ್ಗೆ ಶಾಸಕ ಎಆರ್ ಕೃಷ್ಣಮೂರ್ತಿ ಪ್ರಶ್ನೆ ಎತ್ತಿದ್ದರು. ಈ ವೇಳೆ ಮಾತನಾಡಿದ ಶಾಸಕ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮರಿ ವೀರಪ್ಪನ್ ಒಬ್ಬ ಹುಟ್ಟಿಕೊಂಡಿದ್ದಾನೆಂದರು. ಈ ವೇಳೆ ಉತ್ತರಿಸಿದ ಡಿಸಿಎಫ್ ಭಾಸ್ಕರ್ ಹೌದು ಸರ್, ಗೋವಿಂದ ಎಂಬ ವ್ಯಕ್ತಿ ಹುಟ್ಟಿಕೊಂಡಿದ್ದಾನೆ. ಅವನು ಕೂಡ ಕಾಡಿನಲ್ಲಿ ಶಿಕಾರಿ ಮಾಡ್ತಿದ್ದನು. ಗುಂಪು ಕಟ್ಟಿಕೊಂಡು ಬೇಟೆಗೆ ಹೋಗ್ತಿದ್ದ ಎಂಬ ಮಾತುಗಳನ್ನು ಹಾಡಿದ್ದಾರೆ.

ತಲೆಮರೆಸಿಕೊಂಡಿರೋ ಗೋವಿಂದ ಅಡಗಿರೋದು ಎಲ್ಲಿ?

ಇನ್ನೂ ಮರಿ ವೀರಪ್ಪನ್ ಗಂಗನದೊಡ್ಡಿ ಗೋವಿಂದನ ಬಗ್ಗೆ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಭಾಸ್ಕರ್ ಇವನು ಅರಣ್ಯದಲ್ಲಿ ಗುಂಪು ಕಟ್ಟಿಕೊಂಡು ಶಿಕಾರಿ ಮಾಡುತ್ತಿದ್ದನು.ಶಿಕಾರಿಗೆ ಹೋಗಿದ್ದ ವೇಳೆ ಸತ್ತ ಹುಲಿಯ ಮೃತದೇಹ ನೋಡಿ ಅದನ್ನು ತುಂಡು ಮಾಡಿದ್ದನು. ಅಲ್ಲದೇ ಈತನ ವಿರುದ್ಧ ಕೂಡ ನಮ್ಮ ಅರಣ್ಯ ಇಲಾಖೆಯಲ್ಲೂ ಕೂಡ ಮೂರಕ್ಕೂ ಹೆಚ್ಚು ಪ್ರಕರಣ, ಪೊಲೀಸ್ ಠಾಣೆಗಳಲ್ಲೂ ಕೂಡ ವಿವಿಧ ಪ್ರಕರಣ ದಾಖಲಾಗಿದೆ. ಸದ್ಯ ತಲೆಮರೆಸಿಕೊಂಡಿದ್ದು, ಈತನಿಗಾಗಿ ಬಲೆ ಬೀಸಿದ್ದೇವೆ ಎಂದು ಮಲೆ ಮಹದೇಶ್ವರ ವನ್ಯಧಾಮದ ಅರಣ್ಯಾಧಿಕಾರಿಗಳಾದ ಡಿ.ಸಿ.ಎಫ್. ಭಾಸ್ಕರ್ ತಿಳಿಸಿದ್ದಾರೆ.

ಒಟ್ನಲ್ಲಿ ಕಾಡುಗಳ್ಳ ವೀರಪ್ಪನ್ ರೀತಿಯೇ ಮರಿ ವೀರಪ್ಪನ್ ಹುಟ್ಟಿಕೊಂಡಿದ್ದಾನೆ. ಹುಲಿಯನ್ನು ಕತ್ತರಿಸುವ ಐಡಿಯಾ ಕೂಡ ಅವನೇ ಕೊಟ್ಟಿದ್ದಾನೆ. ಈ ಕಾಡುಗಳ್ಳನನ್ನು ಬಿಟ್ರೆ ಮುಂದಿನ ದಿನಗಳಲ್ಲಿ ವೀರಪ್ಪನ್ ರೀತಿಯೇ ಬೆಳೆಯುತ್ತಾನೆಂಬ ಚರ್ಚೆ ಜೋರಾಗಿದೆ...