ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮದಲ್ಲಿ ಎರಡು ಹುಲಿ ಮರಿಗಳು ಹಸಿವಿನಿಂದ ಮೃತಪಟ್ಟಿವೆ. ತಾಯಿ ಹುಲಿಯಿಂದ ಬೇರ್ಪಟ್ಟ ಮರಿಗಳು ಆಹಾರವಿಲ್ಲದೆ ಸಾವನ್ನಪ್ಪಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ವನ್ಯಜೀವಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.
ಹನೂರು (ಆ.13): ಹಸಿವಿನಿಂದ ನಿತ್ರಾಣಗೊಂಡು ಎರಡು ಹುಲಿಮರಿಗಳು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾವೇರಿ ವನ್ಯಧಾಮ ವ್ಯಾಪ್ತಿಯಲ್ಲಿ ನಡೆದಿದ್ದು ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ.
ಸುಮಾರು 15 ದಿನಗಳ ಹಿಂದೆ ಹುಟ್ಟಿದ್ದ ಹೆಣ್ಣು ಮತ್ತು ಗಂಡು ಮರಿಗಳು ತಾಯಿ ಹುಲಿಯಿಂದ ಬೇರ್ಪಟ್ಟು ನೀರು ಆಹಾರವಿಲ್ಲದೆ ಸಾವನ್ನಪ್ಪಿದ್ದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಗಸ್ತಿನ ವೇಳೆ ಈ ವಿಷಯ ಅರಣ್ಯ ಇಲಾಖೆಗೆ ತಿಳಿದು ಬಂದಿದ್ದು, ಕೂಡಲೇ ಡಿಸಿಎಫ್ ಸುರೇಂದ್ರ, ಎಸಿಎಫ್ ಮರಿಸ್ವಾಮಿ, ಆರ್‌ಎಫ್‌ಒ ನಿರಂಜನ್ ಸೇರಿದಂತೆ ಎಸ್‌ಒಪಿ ಸಮಿತಿಯ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಅಧಿಕಾರಿಗಳ ಪ್ರಾಥಮಿಕ ನಿರೀಕ್ಷೆಯಂತೆ, ಈ ಹುಲಿ ಮರಿಗಳು ತಾಯಿ ಹುಲಿಯಿಂದ ಕಳೆದ 10–15 ದಿನಗಳಿಂದ ಬೇರ್ಪಟ್ಟಿದ್ದು, ಆಹಾರ ಹಾಗೂ ಕಾಪಾಡುವ ತೊಂದರೆಯಿಂದಾಗಿ ಎರಡು-ಮೂರು ದಿನಗಳ ವ್ಯತ್ಯಾಸದಲ್ಲಿ ಸಾವನ್ನಪ್ಪಿರುವುದಾಗಿ ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಳೆದ ತಿಂಗಳು ಹೂಗ್ಯಂ ವಲಯ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳು ಸಾವನ್ನಪ್ಪಿರುವ ಬೆನ್ನಲ್ಲೇ ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಎರಡು ಹುಲಿ ಮರಿಗಳು ಸಾವನ್ನಪ್ಪಿದೆ.
