ನಟ ಜಗ್ಗೇಶ್ ಮನೆಯಲ್ಲಿ ಸಿಕ್ತು ಹುಲಿ ಉಗುರಿನ ಪೆಂಡೆಂಟ್, ಎಫ್‌ಎಸ್‌ಎಲ್‌ಗೆ ಕಳಿಸಿದ ಅರಣ್ಯ ಇಲಾಖೆ!
ನಟ ಹಾಗೂ ಬಿಜೆಪಿ ರಾಜ್ಯಸಭಾ ಸಂಸದ ಜಗ್ಗೇಶ್ ಅವರ ನಿವಾಸದಲ್ಲಿ ಹುಲಿ ಉಗುರಿನ ಪೆಂಡೆಂಟ್ ಪತ್ತೆಯಾಗಿದೆ. ಇದರ ಬೆನ್ನಲ್ಲಿಯೇ ಅದನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಿ ಪರಿಶೀಲನೆ ಮಾಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು (ಅ.25): ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಸಖತ್ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಿಗ್ ಬಾಶ್ ಶೋ ನಡುವೆಯೇ ರಾತ್ರೋರಾತ್ರಿ ಬಂಧಿಸಿದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲವೆಬ್ಬಿತ್ತು. ಒಬ್ಬ ಸಾಮಾನ್ಯ ಸ್ಪರ್ಧಿಗೆ ಈ ಎಲ್ಲಾ ಕಾನೂನುಗಳನ್ನು ಹೇಳುವ ಅರಣ್ಯ ಇಲಾಖೆ ಅಧಿಕಾರಿಗಳು, ನಟ ದರ್ಶನ್, ಜಗ್ಗೇಶ್, ರಾಕ್‌ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ, ವಿನಯ್ ಗುರೂಜಿ, ಧನಂಜಯ ಗುರೂಜಿ ಅವರ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಡವರಿಗೆ ಒಂದು ನ್ಯಾಯ, ದುಡ್ಡಿದ್ದವರಿಗೆ ಒಂದು ನ್ಯಾಯ ಎಂದು ಆಕ್ರೋಶ ವ್ಯಕ್ತವಾಗಿತ್ತು. ಸ್ಯಾಂಡಲ್‌ವುಡ್ ಸ್ಟಾರ್‌ಗಳ ಹುಲಿ ಉಗುರಿನ ಪೆಂಡೆಂಟ್ ವಿಚಾರ ತಿಳಿದ ಬೆನ್ನಲ್ಲಿಯೇ ನಟ ದರ್ಶನ್, ರಾಕ್‌ಲೈನ್ ವೆಂಕಟೇಶ್ ಹಾಗೂ ಜಗ್ಗೇಶ್ ಅವರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ದರ್ಶನ್‌ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇನ್ನೊಂದೆಡೆ ಜಗ್ಗೇಶ್ ಅವರ ಮನೆಯ ಪರಿಶೀಲನೆ ವೇಳೆ ಜಗ್ಗೇಶ್ ಧರಿಸುತ್ತಿದ್ದ ಹುಲಿ ಉಗುರಿನ ಪೆಂಡೆಂಟ್ ಪತ್ತೆಯಾಗಿದೆ.
ಜಗ್ಗೇಶ್ ಅವರ ನಿವಾಸದಲ್ಲಿ ಎರಡೂವರೆ ಗಂಟೆಗಳ ಕಾಲ ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಈ ಕುರಿತಾಗಿ ಮಾಹಿತಿ ನೀಡಿರುವ ಡಿ.ಸಿ ಎಫ್ ರವೀಂದ್ರ ಕುಮಾರ್.ಎಂ, 'ಜಗ್ಗೇಶ್ ಅವರ ಮನೆ ಪರಿಶೀಲನೆ ಮುಗಿದಿದೆ. ಅವರು ಮಾಹಿತಿ ಕೊಟ್ಟಿದ್ದಾರೆ ಮಹಜರ್ ಮಾಡಿದ್ದೇವೆ. ಯಾವ ಪ್ರಾಣಿಗೆ ಸೇರಿದ್ದು ಅಂತ ಚೆಕ್ ಮಾಡಲಿದ್ದೇವೆ. ಪೆಂಡೆಂಟ್ ಸಿಕ್ಕಿದ್ದು ಅದನ್ನು ತಪಾಸಣೆಗೆ ನೀಡುತ್ತೇವೆ. ವಿಚಾರಣೆಗೆ ಇನ್ನೂ ಅವರನ್ನು ಕರೆದಿಲ್ಲ. ಅವರು ಧರಿಸಿದ್ದು, ಹುಲಿ ಉಗುರೇ ಆಗಿದ್ದಲ್ಲಿ ಅದಕ್ಕೆ ನ್ಯಾಯಾಂಗದಲ್ಲಿ ಇದ್ದ ಹಾಗೆ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ತಾಯಿ ಕೊಟ್ಟಿದ್ದು ಅಂತ ಹೇಳಿದ್ದಾರೆ. ವರ್ತೂರ್ ಸಂತೋಷ್ ವಿಚಾರದಲ್ಲಿ ಹುಲಿ ಉಗುರು ಅಂತ ಖಚಿತವಾಗಿತ್ತು ಹೀಗಾಗಿ ವಶಕ್ಕೆ ಪಡೆದಿದ್ದೇವೆ. ಆದರೆ ಇವರ ವಿಷಯದಲ್ಲಿ ಹಾಗಾಗಿಲ್ಲ ಈಗಾಗಲೃ ದರ್ಶನ್ , ರಾಕ್ ಲೈನ್, ನಿಖಿಲ್ ಮನೆಯಲ್ಲಿ ಪರಿಶೀಲನೆ ಆಗುತ್ತಿದೆ. ನಾವು ಲ್ಯಾಬ್ ಗೆ ಕಳಿಸುತ್ತೇವೆ ಆ ನಂತರ ಕಾನೂನು ಕ್ರಮದ ಬಗ್ಗೆ ಹೇಳುತ್ತೇವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಜಗ್ಗೇಶ್ ಅವರ ಪತ್ನಿ ಪರಿಮಳ, ಇದು 40 ವರ್ಷದ ಹಳೆಯ ಉಗುರು ಎಂದು ಮಾಹಿತಿ ನೀಡಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ಮನೆ ಮೇಲೆ ದಾಳಿ: ಇನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಮನೆಯ ಮೇಲೂ ದಾಳಿ ಮಾಡಲಾಗಿದೆ ಎಂದು ಅರಣ್ಯಾಧಿಕಾರಿ ಚಿದಾನಂದ್ ತಿಳಿಸಿದ್ದಾರೆ. ನೋಟಿಸ್ ನೀಡಿ ಮನೆ ಪೂರ್ತಿ ಸರ್ಚ್ ಮಾಡಲಾಗಿದೆ. ಆ ರೀತಿ ಒಡವೆಯಾವುದೂ ಸಿಕ್ಕಿಲ್ಲ. ವೆಂಕಟೇಶ್ ಅವರ ಮಗ ಅಭಿಲಾಶ್ ನಮಗೆ ಸ್ಪಂದಿಸಿದ್ದಾರೆ. ವಿದೇಶ ಪ್ರವಾಸ ಇರುವ ಕಾರಣ ಅವರ ಸಂಪರ್ಕ ಸಾಧ್ಯವಾಗಲಿಲ್ಲ. ಎಲ್ಲಾ ಲಾಕರ್ ಗಳನ್ನೂ ಕೂಡಾ ಪರಿಶೀಲನೆ ನಡೆಸಿದ್ದೇವೆ. ಆ ಫೋಟೋ ದಲ್ಲಿ ಇರೋದು ಯಾವುದೋ ಸಿನಿಮಾಗೆ ಸಂಬಂಧಿಸಿದ ಪೋಟೋ ಎನ್ನಲಾಗುತ್ತಿದೆ. ವೈಲ್ಡ್ ಅನಿಮಲ್ ಆಕ್ಟ್ ಅಡಿ ನೋಟಿಸ್ ಸರ್ವ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಹುಲಿ ಉಗುರು ಪೆಂಡೆಂಟ್ ಧರಿಸಿದ ನಟ ಜಗ್ಗೇಶ್, ದರ್ಶನ್‌ಗೆ ಅರಣ್ಯ ಇಲಾಖೆ ನೋಟಿಸ್: ನಿಖಿಲ್ ಕುಮಾರಸ್ವಾಮಿ ಬಚಾವ್!
ವೆಂಕಟೇಶ್ ಭಾರತಕ್ಕೆ ಬಂದ ನಂತರ ವಿಚಾರಣೆಗೆ ಬರುವಂತೆ ತಿಳಿಸಲಾಗಿದೆ ಎಂದು ಅಭಿಲಾಶ್ ಹೇಳಿದ್ದಾರೆ. ಲಾಕರ್‌ಗಳಲ್ಲಿ ಏನೇನಿದೆ ಅನ್ನೋದನ್ನು ತೋರಿಸಿದ್ದೇವೆ. ಅವರು ಹೇಳಿರೋ ಥರಾ ಯಾವೂದು ಮನೆಯಲ್ಲಿ ಇಲ್ಲ. ಅದು ಯಾವುದೋ ಸಿನಿಮಾಗೆ ಸಂಬಂಧಿಸಿದ್ದು ಪೋಟೋ ಇರಬಹುದು. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಅಪ್ಪ ಬಂದು ಹೇಳಬೇಕು. ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಇಲ್ಲ ನಾನು ವೈದ್ಯ. ತಂದೆಯೇ ಈ ಬಗ್ಗೆ ತಿಳಿಸಬೇಕು ಎಂದಿದ್ದಾರೆ.
ಹುಲಿ ಉಗುರು ಪೆಂಡೆಂಟ್: ದರ್ಶನ್ ತೂಗುದೀಪ್ ಹಾಗೂ ವಿನಯ್ ಗುರೂಜಿ ವಿರುದ್ಧ ದೂರು