ಹುಲಿ ಉಗುರು, ನರಿ ಹಲ್ಲು, ಆನೆ ಬಾಲದ ರೋಮ..ಸೆಲೆಬ್ರಿಟಿಗಳಿಗೆ ಇವುಗಳ ಬಗ್ಗೆ ಯಾಕಿಷ್ಟು ಕ್ರೇಜ್!
ಭಾರತದ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿ, ಶೆಡುಲ್ಡ್ ಎನಿಮಲ್. ಅಂದರೆ ಅಳಿವಿನಂಚಿನ ಪ್ರಾಣಿಗಳ ಪಟ್ಟಿಯಲ್ಲಿರುವ ಮೃಗ. ಇದರ ಅರ್ಥ ಏನೆಂದರೆ, ಈ ಪ್ರಾಣಿಗಳ ಯಾವೊಂದು ವಸ್ತುಗಳನ್ನು ಬಳಸುವ ಹಾಗಿಲ್ಲ. ಹಾಗೇನಾದರೂ ತೊಟ್ಟರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಅದು ಅಪರಾಧ. ಆದರೆ, ಈ ಪ್ರಾಣಿಗಳ ಮೇಲಿನ ಮೋಹ ಮಾತ್ರ ಜನರಿಗೆ ಅದರಲ್ಲೂ ಸೆಲೆಬ್ರಿಟಿಗಳಿಗೆ ಕಡಿಮೆ ಆಗೋದಿಲ್ಲ

ಉಡುಪಿ (ಅ.27): ಹುಲಿ ದಾಳಿ ಮಾಡಿ ಜನರು ಸತ್ತಿದ್ದರೆ ಬಹುಶಃ ಇಷ್ಟು ಸುದ್ದಿಯಾಗುತ್ತಿರಲಿಲ್ಲ. ಆದರೆ, ಹುಲಿಯ ಉಗುರಿನ ಪೆಂಡೆಂಟ್ ಧರಿಸಿ ಸೆಲಬ್ರಿಟಿಗಳು ತಿರುಗಾಡಿದ್ದು ಈಗ ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಹುಲಿ ಉಗುರು ಹಾಕಿದ್ದಕ್ಕಿಂತ ವಿಚಾರದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಇಬ್ಬಗೆಯ ನೀತಿಗಳೇ ಹೆಚ್ಚಾಗಿ ಚರ್ಚೆಯಾಗುತ್ತಿದೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಗೆ ಹೋಗಿ ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದ್ದ ಅರಣ್ಯ ಇಲಾಖೆಗೆ ತನ್ನ ಮುಂದೆ ಇಂಥದ್ದೊಂದು ಪಂಡೋರಾ ಬಾಕ್ಸ್ ಓಪನ್ ಆಗುತ್ತದೆ ಎನ್ನುವ ಸುಳಿವೂ ಇದ್ದಿರಲಿಲ್ಲ. ವರ್ತೂರು ಸಂತೊಷ್ ಅವರ ಬಂಧನವಾದ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಹುಲಿ ಉಗುರಿನ ಪೆಂಡೆಂಟ್‌ಗಳು ಧರಿಸಿದ್ದ ಸಾಲು ಸಾಲು ಚಿತ್ರಗಳು ಪ್ರಕಟವಾದವು. ಆದರೆ, ಅವರ ವಿರುದ್ಧ ಮಾತ್ರ ಅರಣ್ಯ ಇಲಾಖೆ ನೋಟೀಸ್ ನೀಡಿ ಸುಮ್ಮನಾಗಿದೆ ಇದೇ ವಿಚಾರವನ್ನು ಜನ ಪ್ರಶ್ನೆ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ರಾಜಕಾರಣಿಗಳು ಹಾಗೂ ರಾಜಕಾರಣಿಗಳ ಸಂಬಂಧಿಕರು ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಸಾಲು ಸಾಲು ಚಿತ್ರಗಳು ಬಂದಿವೆ. ಇದರ ನಡುವೆ ಹುಲಿ ಉಗುರಿಗೆ ಯಾಕಿಷ್ಟು ಕ್ರೇಜ್ ಎನ್ನುವ ವಿವರ ಇಲ್ಲಿದೆ.
ಹುಲಿಯುಗುರು ತೊಟ್ಟು ಸಾಕಷ್ಟು ಸೆಲಬ್ರಿಟಿಗಳು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇಷ್ಟಕ್ಕೂ ಹುಲಿ ಉಗುರು ತೊಡುವುದು ಯಾಕೆ? ಸೆಲೆಬ್ರಿಟಿಗಳಿಗೆ ಯಾಕೆ ಹುಲಿಯುಗುರಿನ ಕ್ರೇಜ್? ಎನ್ನುವ ಕುತೂಹಲ ಸಹಜ. ಇದಕ್ಕೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಉತ್ತರ ನೀಡಿದ್ದಾರೆ.
ನಿಮಗೆ ಗೊತ್ತಿರಲಿ ಹುಲಿ ಉಗುರು, ಆನೆ ಬಾಲದ ರೋಮ, ಹಂದಿ ಬಾಲದ ರೋಮ ಇವುಗಳ ಉಂಗುರ ಮಾತ್ರವಲ್ಲದೆ ಹಾರಮಾಡಿಯೂ ಧರಿಸುತ್ತಾರೆ. ಮಾರಾಟ ಮಾಡುವವರು ಇವುಗಳ ಕಥೆ ಕಟ್ಟುತ್ತಾರೆ. ಅದೃಷ್ಟ ತರುತ್ತೆ ಎಂದು ಗ್ರಾಹಕರನ್ನು ಸೆಳೆಯುತ್ತಾರೆ. ನರಿಹಲ್ಲಿನ ಬಗೆಗೂ ಇದೇ ರೀತಿಯ ಕ್ರೇಜ್ ಇದೆ ಎನ್ನುತ್ತಾರೆ ಅಮ್ಮಣ್ಣಾಯ. ನೇರವಾಗಿ ಇದನ್ನು ಮೂಢನಂಬಿಕೆ ಅನ್ನಲು ಅಗೋದಿಲ್ಲ. ಈ ಬಗ್ಗೆ ಹಾಡಿ ಜನಾಂಗದವರಿಗೆ ಅನೇಕ ಅನುಭವಗಳಿವೆ. ಶಾಸ್ತ್ರಕ್ಕೆ ಹತ್ತಿರವಾದ ಕೆಲವು ಅಂಶಗಳಿವೆ. ವಾಸ್ತುವಿನಲ್ಲಿ ಪಂಚ ವಾಸ್ತು ಶಿಲೆಗಳನ್ನು ಸ್ಥಾಪನೆ ಮಾಡುವ ಪದ್ಧತಿ ಇದೆ ಎನ್ನುತ್ತಾರೆ.
ಹುಲಿ ಸಿಂಹ ಆಮೆ ಕುದುರೆ ಹಂದಿ ಶಿರಗಳನ್ನು ಮಾಡಿ ಭೂಮಿಯಲ್ಲಿ ಸ್ಥಾಪಿಸುವ ಪದ್ಧತಿ ಇದೆ. ಈ ರೀತಿಯ ಪ್ರಾಣಿಗಳಿಗೂ ಹುಲಿ ಉಗರಿನ ಧಾರಣೆಗೂ ಸಂಬಂಧ ಕಂಡು ಬರುತ್ತದೆ. ಉಗುರು ಹಸಿಯೂ ಅಲ್ಲ ಒಣಗಿಯೂ ಇರುವುದಿಲ್ಲ. ಉಗುರಿಗೆ ಆಯುಷ್ಯ ಜಾಸ್ತಿ ಮಣ್ಣಿಗೆ ಸೇರಿದರು ಬಹಳ ಬೇಗ ಕರಗೋದಿಲ್ಲ. ಮಾಟ ಮಂತ್ರಕ್ಕೂ ಉಗುರನ್ನು ಬಳಸುವ ಪ್ರಯೋಗ ಇದೆ. ಕಾಡಿನಲ್ಲಿ ಬೇಟೆಯಾಡುವಾಗ ಬೇರೆ ಪ್ರಾಣಿಗಳಿಗೆ ಹುಲಿ ಉಗುರಿನ ಗ್ರಹಣ ಮಾಡುವ ಸಾಮರ್ಥ್ಯ ಇದೆ. ಹುಲಿ ಉಗುರಿನ ವಾಸನೆಗೆ ಬೇರೆ ಪ್ರಾಣಿಗಳು ಹತ್ತಿರ ಬರೋದಿಲ್ಲ. ಅದಕ್ಕೆ ಬೇಕಾಗಿ ಹುಲಿ ಉಗುರು ಧರಿಸುವ ಪರಿಪಾಠ ಬೆಳೆದು ಬಂದಿದೆ. ಅದನ್ನೇ ಅಸ್ತ್ರವಾಗಿಟ್ಟುಕೊಂಡು ಹುಲಿ ಉಗರಿನ ಬಗ್ಗೆ ಪ್ರಚಾರ ಶುರುವಾಗಿದೆ. ನಕಲಿ ಹುಲಿ ಉಗುರುಗಳನ್ನು ಮಾರಾಟ ಮಾಡುವ ವ್ಯಕ್ತಿಗಳು ಇದ್ದಾರೆ. ಅಲಂಕಾರ ಹೆಗ್ಗಳಿಕೆಗಾಗಿ ಹುಲಿ ಉಗುರು ಧರಿಸುತ್ತಾರೆ.
ನಟ ದರ್ಶನ್ ಮನೆಗೆ ನುಗ್ಗಿದ ಅರಣ್ಯಾಧಿಕಾರಿಗಳ ತಂಡ: ಹುಲಿ ಉಗುರು ಪತ್ತೆಗೆ ಶೋಧ
ಕಾಡೆಮ್ಮೆ ಜಿಂಕೆಯ ಕೋಡುಗಳನ್ನು ಇಡುವವರು ಇದ್ದಾರೆ. ಇದರ ವ್ಯಾಪಾರ ವಹಿವಾಟು ಕಡಿವಾಣ ಹಾಕಲು ಕಾನೂನು ಮಾಡಲಾಗಿದೆ. ಸರಕಾರ ನಿಯಂತ್ರಣ ಮಾಡುತ್ತಿರುವುದು ಒಳ್ಳೆಯ ವಿಚಾರ. ಕೆಲವು ಮನೆಗಳಲ್ಲಿ ಹಿರಿಯರಿಂದ ಬಂದ ವಸ್ತುಗಳು ಇರುತ್ತೆ. ನಾವು ಮಾಡಿದ ಅಪರಾಧ ಅಲ್ಲ ಅದನ್ನು ಅರಿವಿಲ್ಲದ ಸಂಗ್ರಹಿಸಿ ಇಟ್ಟಿರಬಹುದು. ಬಂಧಿಸುವ ಬದಲಾಗಿ ಜಾಗೃತಿ ಮೂಡಿಸಬಹುದು. ಕೋಳಿ ಅಂಕದಲ್ಲೂ ಈ ರೀತಿಯ ನಂಬಿಕೆ ಇದೆ. ಕೋಳಿಯ ಕಾಲಿಗೆ ನರಿಯ ಹಲ್ಲನ್ನು ತೇಯ್ದು ಹಚ್ಚುವ ಪದ್ಧತಿ. ನರೀಭೀತಿಗೆ ಎದುರಾಳಿ ಕೋಳಿ ಪಲಾಯನ ಮಾಡುತ್ತಿತ್ತು. ವಾಸನೆ ಗ್ರಹಿಸಿ ಎದುರಾಳಿ ಕೋಳಿ ಓಡುತ್ತಿತ್ತು. ಪ್ರಾಣಿಗಳಿಗೆ ಗ್ರಹಣ ಶಕ್ತಿ ಜಾಸ್ತಿ. ಆದರೆ ಮನುಷ್ಯರಿಗೆ ಹತ್ತಿರದಲ್ಲೇ ಹಾವು ಸತ್ತರು ಗೊತ್ತಾಗೋದಿಲ್ಲ. ಹುಲಿ ಇರಬಹುದು ಎಂಬ ಕಾರಣಕ್ಕೆ ಇತರ ಪ್ರಾಣಿಗಳು ಹತ್ತಿರ ಬರುವುದಿಲ್ಲ. ಅನೇಕರು ಇದೇ ಕಾರಣಕ್ಕೆ ಉಗುರು ಧರಿಸಿರಬಹುದು ಎಂದು ಅಮ್ಮಣ್ಣಾಯ ಹೇಳುತ್ತಾರೆ.
ಹುಲಿ ಉಗುರು ಪೆಂಡೆಂಟ್ ಧರಿಸಿದ ನಟ ಜಗ್ಗೇಶ್, ದರ್ಶನ್‌ಗೆ ಅರಣ್ಯ ಇಲಾಖೆ ನೋಟಿಸ್: ನಿಖಿಲ್ ಕುಮಾರಸ್ವಾಮಿ ಬಚಾವ್!