ನಟ ದರ್ಶನ್ ಮನೆಗೆ ನುಗ್ಗಿದ ಅರಣ್ಯಾಧಿಕಾರಿಗಳ ತಂಡ: ಹುಲಿ ಉಗುರು ಪತ್ತೆಗೆ ಶೋಧ
ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಮನೆಯ ಮೇಲೆ ಅರಣ್ಯಾಧಿಕಾರಿಗಳ ತಂಡ ದಾಳಿ ಮಾಡಿದ್ದು, ಹುಲಿ ಉಗುರು ಶೋಧಕ್ಕೆ ಮುಂದಾಗಿದ್ದಾರೆ.

ಬೆಂಗಳೂರು (ಅ.25): ರಾಜ್ಯದಲ್ಲಿ ವರ್ತೂರು ಸಂತೋಷ್ ಅವರನ್ನು ಹುಲಿ ಉಗುರು ಧರಿಸಿದ್ದ ಪ್ರಕರಣದಲ್ಲಿ ಬಂಧನ ಮಾಡಿದ ಬೆನ್ನಲ್ಲಿಯೇ ಹುಲಿ ಉಗುರು ಧರಿಸಿ ಪೋಸ್ ಕೊಟ್ಟಿದ್ದ ನಟ ದರ್ಶನ್ ತೂಗುದೀಪ ಅವರಿಗೂ ಸಂಕಷ್ಟ ಎದುರಾಗಿತ್ತು. ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯಿಂದ ನಟ ದರ್ಶನ್ ವಿರುದ್ಧ ದೂರು ದಾಖಲಾದ ಬೆನ್ನಲ್ಲಿಯೇ ಅರಣ್ಯಾಧಿಕಾರಿಗಳು ಬೆಂಗಳೂರಿನ ಆರ್.ಆರ್. ನಗರದಲ್ಲಿರುವ ದರ್ಶನ್ ಮನೆಗೆ ದಾಳಿ ಮಾಡಿ ಪರಿಶೀಲನೆ ಮಾಡಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಹುಲಿ ಉಗುರು ಪತ್ತೆ ಪ್ರಕರಣ ಹಿನ್ನೆಲೆಯಲ್ಲಿ ಹಲವು ಸ್ಯಾಂಡಲ್‌ವುಡ್ ನಟರಿಗೆ ಸಂಕಷ್ಟ ಎದುರಾಗಿದೆ. ದರ್ಶನ್ ಮನೆಗೆ ಅರಣ್ಯ ಅಧಿಕಾರಿಗಳು ಎಂಟ್ರಿಕೊಟ್ಟಿದ್ದು, ಹುಲಿ ಉಗುರು ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನು ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ಬರುತ್ತಿದಂತೆ ಮನೆ ಮುಂದೆ ದರ್ಶನ್ ಕಾರು ಚಾಲಕ ಬಂದಿದ್ದಾನೆ. ಅವರ ಮುಂದೆಯೇ ಮನೆಯೊಳಗೆ ಹೋದ ಅರಣ್ಯಾಧಿಕಾರಿಗಳ ಎರಡು ತಂಡವು ಮನೆಯೊಳಗೆ ಶೋಧ ಕಾರ್ಯ ಮುಂದುವರೆಸಿದೆ. ನಂತರ, ಒಂದು ತಂಡವು ಹೊರ ಬಂದಿದ್ದು, ಇನ್ನೊಂದು ತಂಡವು ಮನೆಯಲ್ಲಿ ತಪಾಸಣೆ ಮಾಡಲಾಗುತ್ತಿದೆ.
ಹುಲಿ ಉಗುರು ಪೆಂಡೆಂಟ್ ಧರಿಸಿದ ನಟ ಜಗ್ಗೇಶ್, ದರ್ಶನ್‌ಗೆ ಅರಣ್ಯ ಇಲಾಖೆ ನೋಟಿಸ್: ನಿಖಿಲ್ ಕುಮಾರಸ್ವಾಮಿ ಬಚಾವ್!
ಇನ್ನು ದರ್ಶನ್ ಮಾತ್ರವಲ್ಲದೇ ಈಗಾಗಲೇ ದೂರು ದಾಖಲಾದ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹುಲಿ ಉಗುರು ಧರಿಸಿದ್ದಾರೆನ್ನಲಾದ ಎಲ್ಲ ನಟರು, ನಾಯಕರ ಮನೆಗೂ ನೋಟಿಸ್ ನೀಡಲಾಗಿದೆ. ಈಗ ಎಲ್ಲಾ ಮನೆಗಳಿಗೂ ಅರಣ್ಯ ಇಲಾಖೆಯ ತಂಡವು ತೆರಳಿ ಹುಲಿ ಉಗುರು ಅಥವಾ ಇನ್ಯಾವುದೇ ಕಾಡು ಪ್ರಾಣಿಗಳ ಅಂಗಗಳ ಇರುವುದರ ಬಗ್ಗೆ ತಪಾಸಣೆ ಮಾಡಲು ತಂಡಗಳನ್ನ ಕಳುಹಿಸಲಾಗಿದೆ. ಜಗ್ಗೇಶ್, ದರ್ಶನ್, ರಾಕ್ ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ, ವಿನಯ್ ಗುರೂಜಿ ಮನೆಯಲ್ಲೂ ತಪಾಸಣೆ ಮಾಡಲಾಗುತ್ತದೆ.
ನೋಟಿಸ್ ಕೊಟ್ಟು ಎಲ್ಲರ ಮನೆಯಲ್ಲೂ ತಪಾಸಣೆ: ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಫ್ಓ ರವಿಂದ್ರ ಅವರು ಅರಣ್ಯ ಇಲಾಖೆಯಿಂದ ನಾಲ್ಕು ತಂಡ ರಚನೆ ಮಾಡಿದ್ದೇವೆ. ಹುಲಿ ಉಗುರು ಧರಿಸಿದ್ದ ಬಗ್ಗೆ ದೂರು ಬಂದ ಮೇರೆಗೆ ದೂರಿನಲ್ಲಿರುವ ಎಲ್ಲ ಆರೋಪಿಗಳ ಮನೆಗೆ ತೆರಳಿ ನೋಟಿಸ್ ಕೊಟ್ಟಿದ್ದೇವೆ. ಇದಾದ ನಂತರ ನೋಟಿಸ್ ಕೊಟ್ಟವರ ಎಲ್ಲರ ಮನೆಗೂ ತೆರಳಿ ತಪಾಸಣೆ ಮಾಡಲಾಗುತ್ತಿದೆ. ಮನೆಗಳ ಪರೀಶೀಲಿಸಿ ಉಗುರು ಪತ್ತೆಯಾದ್ರೆ ಅವರನ್ನ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. ನಟ ದರ್ಶನ್ ಸೇರಿ ಎಲ್ಲಾರ ಮನೆಗೆ ನಮ್ಮ ತಂಡ ತೆರಳಿದೆ ಎಂದು ಮಾಹಿತಿ ನೀಡಿದರು.
ಹುಲಿ ಉಗುರು ಪೆಂಡೆಂಟ್: ದರ್ಶನ್ ತೂಗುದೀಪ್ ಹಾಗೂ ವಿನಯ್ ಗುರೂಜಿ ವಿರುದ್ಧ ದೂರು
ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ನಟರಿಗೂ ಸಂಕಷ್ಟ: ಕರ್ನಾಟಕದಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಧರಿಸಿದ್ದರಿಂದ ಅವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಪಿ.ಆರ್. ರಮೇಶ್ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಈಗಾಗಲೇ ದರ್ಶನ್ ವಿರುದ್ಧವೂ ದೂರು ದಾಖಲಿಸಲಾಗಿದೆ. ಉಳಿದಂತೆ ರಾಕ್‌ಲೈನ್ ವೆಂಕಟೇಶ್ ಮತ್ತು ನಟ ನಿಖಿಲ್ ಕುಮಾರಸ್ವಾಮಿ ವಿರುದ್ಧವೂ ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪ ಕೇಳಿಬಂದಿದೆ.