ಬೆಂಗಳೂರಿನಿಂದ ದಾವಣಗೆರೆ, ಶಿವಮೊಗ್ಗ, ಕೊಡಗಿಗೆ ಕನಿಷ್ಠ 1500 ರು., ಹುಬ್ಬಳ್ಳಿ, ಬೆಳಗಾವಿಗೆ ಕನಿಷ್ಠ 2000 ರು. ಟಿಕೆಟ್‌ ದರ ಪಾವತಿಸಬೇಕಿದೆ.

ಬೆಂಗಳೂರು(ಅ.19):  ಗೌರಿ ಗಣೇಶ ಆಯ್ತು, ದಸರಾ ಆಯ್ತು, ಈಗ ದೀಪಾವಳಿಯಲ್ಲಿಯೂ ಖಾಸಗಿ ಬಸ್‌ಗಳು ಪ್ರಯಾಣಿಕರ ಸುಲಿಗೆಯನ್ನು ಮುಂದುವರೆಸಿವೆ. ಅ.21ರಿಂದ 24ವರೆಗೂ ಸತತ ನಾಲ್ಕು ದಿನ ಮೂರು ಪಟ್ಟು ಹೆಚ್ಚಿನ ಟಿಕೆಟ್‌ ದರ ನಿಗದಿಪಡಿಸಿದ್ದು, ಬೆಂಗಳೂರಿನಿಂದ ದಾವಣಗೆರೆ, ಶಿವಮೊಗ್ಗ, ಕೊಡಗಿಗೆ ಕನಿಷ್ಠ 1500 ರು., ಹುಬ್ಬಳ್ಳಿ, ಬೆಳಗಾವಿಗೆ ಕನಿಷ್ಠ 2000 ರು. ಟಿಕೆಟ್‌ ದರ ಪಾವತಿಸಬೇಕಿದೆ.

ಸಾರಿಗೆ ಇಲಾಖೆಯು ಈ ಹಿಂದಿನ ಹಬ್ಬಗಳಂತೆ ಬಸ್‌ಗಳ ಬುಕ್ಕಿಂಗ್‌ ಪೂರ್ಣಗೊಂಡ ಬಳಿಕ ಕೊನೆಯ ಕ್ಷಣದಲ್ಲಿ ಕ್ರಮಕೈಗೊಳ್ಳುವ ಬದಲು ಟ್ರಾವೆಲ್‌ ವೈಬ್‌ಸೈಟ್‌ ಆಧರಿಸಿ ಖಾಸಗಿ ಬಸ್‌ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬ ಒತ್ತಾಯ ಪ್ರಯಾಣಿಕರಿಂದ ಕೇಳಿಬಂದಿದೆ.

ದೀಪಾವಳಿ ಹಬ್ಬಕ್ಕೆ ಮತ್ತೆ ದುಪ್ಪಟ್ಟು ದರ ವಸೂಲಿಗೆ ಇಳಿದ ಖಾಸಗಿ ಟೂರಿಸ್ಟ್‌ ಬಸ್‌ಗಳು

ಅ.22 ನಾಲ್ಕನೇ ಶನಿವಾರ ಸೇರಿ ನರಕ ಚತುರ್ದಶಿ, ಅಮವಾಸ್ಯೆ ಹಾಗೂ ಬಲಿಪಾಡ್ಯ ಹಿನ್ನೆಲೆಯಲ್ಲಿ ಐದು ದಿನ ಸತತವಾಗಿ ರಜೆಗಳಿವೆ. ಶುಕ್ರವಾರ ಸಂಜೆಯಿಂದಲೇ ಟೆಕ್ಕಿಗಳು, ಕಂಪನಿ ಉದ್ಯೋಗಿಗಳು ಸೇರಿದಂತೆ ಹಲವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳಲು ಮುಂದಾಗುತ್ತಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಖಾಸಗಿ ಬಸ್‌ಗಳು ಶುಕ್ರವಾರದಿಂದಲೇ ಟಿಕೆಟ್‌ ದರ ದುಪ್ಪಟ್ಟು ಹೆಚ್ಚಿಸಿ ಸುಲಿಗೆ ಆರಂಭಿಸಿವೆ.

ಖಾಸಗಿ ಬಸ್‌ಗಳ ವೆಬ್‌ಸೈಟ್‌, ಬಸ್‌ ಬುಕ್ಕಿಂಗ್‌ ಆ್ಯಪ್‌ಗಳ ಮಾಹಿತಿ ಪ್ರಕಾರ, ಶುಕ್ರವಾರದಿಂದ (ಅ.21) ಸೋಮವಾರ (ಅ.24)ವರೆಗೂ ಸತತ ನಾಲ್ಕು ದಿನ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ಸಂಚರಿಸುವ ಖಾಸಗಿ ಬಸ್‌ಗಳ ದರ ಸಾಮಾನ್ಯ ದಿನಗಳಿಗಿಂತ ಬರೋಬ್ಬರಿ ಮೂರು ಪಟ್ಟು ಹೆಚ್ಚಾಗಿದೆ.